ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು
ಹಾಸನ, ಡಿಸೆಂಬರ್ 31; ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದ ಬಿಜೆಪಿ ನಾಯಕ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು ಸಿಕ್ಕಿದೆ. ಈ ಬಂಧನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಬೇಲೂರಿನ ನಂದಗೋಡನಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಂ ಸಿಂಹರನ್ನು ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಭಾನುವಾರ ಅವರಿಗೆ ಜಾಮೀನು ಸಿಕ್ಕಿದೆ.

ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿ ವಿಕ್ರಂ ಸಿಂಹರನ್ನು ನ್ಯಾಯಾಧೀಶರ ಎದುರು ಅರಣ್ಯ ಇಲಾಖೆ ಅಧಿಕಾರಿಗಳು ಹಾಜರುಪಡಿಸಿದ್ದರು. ಬೇಲೂರಿನ ಸೀನಿಯರ್ ಸಿವಿಲ್ ಜಡ್ಜ್ ಮುಂದೆ ಜಾಮೀನು ನೀಡಲು ವಿಕ್ರಂ ಸಿಂಹ ಪರವಾಗಿ ವಕೀಲ ಚಂದ್ರೇಗೌಡ, ಧರ್ಮೇಗೌಡ ಅರ್ಜಿ ಸಲ್ಲಿಸಿದ್ದರು. ಜಾಮೀನು ಮಂಜೂರು ಮಾಡಲಾಗಿದೆ.
ಅಕ್ರಮವಾಗಿ ಮರಗಳನ್ನು ಕಡಿದ ಪ್ರಕರಣದ ಸಬಂಧ ರಾಕೇಶ್ ಶೆಟ್ಟಿ, ಜಯಮ್ಮ ವಿರುದ್ಧ ಬೇಲೂರು ತಹಶೀಲ್ದಾರ್ ಮಮತಾ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪದ ಮೇಲೆ ವಿಕ್ರಂ ಸಿಂಹರನ್ನು ಶನಿವಾರ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.
ಸಿದ್ದರಾಮಯ್ಯ ಪ್ರತಿಕ್ರಿಯೆ; ವಿಕ್ರಂ ಸಿಂಹ ಬಂಧನದ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜಕೀಯವಾಗಿ ಮುಗಿಸಲು ಮಾಡುತ್ತಿರುವ ಸಂಚು ಎಂದು ಸಹ ವಿಕ್ರಂ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದು, "ನಿರಪರಾಧಿಗಳಿಗೆ ಯಾರಿಗೂ ತೊಂದರೆ ಆಗಲು ಬಿಡುವುದಿಲ್ಲ. ತಪ್ಪು ಮಾಡಿಲ್ಲ ಎಂದರೆ ಏಕೆ ಶಿಕ್ಷೆ ಆಗುತ್ತದೆ. ತಪ್ಪು ಮಾಡದವರ ಮೇಲೆ ಏಕೆ ಕ್ರಮವಾಗುತ್ತದೆ?. ನಮ್ಮ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ" ಎಂದು ಹೇಳಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿ, "ವಿಕ್ರಂ ಸಿಂಹ ಅಕ್ರಮವಾಗಿ ಮರ ಕಡಿದಿರುವುದು ನಿಜ ಅಲ್ಲವೇ?. ಅನುಮತಿ ಇಲ್ಲದೆ ಮರ ಕಡಿದಿದ್ದಾರೆ, ಆದ್ದರಿಂದ ಕ್ರಮ ಆಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಹೆಸರು ತರುವುದು ಬೇಡ. ಪ್ರಕರಣಕ್ಕೆ ಅನವಶ್ಯಕವಾಗಿ ರಾಜಕೀಯ ಬಣ್ಣ ಕೊಡುತ್ತಿದ್ದಾರೆ" ಎಂದರು.












Click it and Unblock the Notifications