ಬಿಜೆಪಿ ಅರ್ಭ್ಯರ್ಥಿಗೆ ತೊಡಕಾದ ಸರ್ಕಾರಿ ಉದ್ಯೋಗ, ಪಕ್ಷ ನೀಡಿತು ಗಡುವು
ಗದಗ, ಏಪ್ರಿಲ್ 17; ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವರು ಸರ್ಕಾರಿ ಉದ್ಯೋಗ ತೊರೆದಿದ್ದಾರೆ. ಅಂತಹ ಹಲವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ವಿವಿಧ ಪಕ್ಷಗಳು ಟಿಕೆಟ್ ಸಹ ನೀಡಿವೆ. ಆದರೆ ಶಿರಹಟ್ಟಿ (ಎಸ್‌ಸಿ) ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಸರ್ಕಾರಿ ಉದ್ಯೋಗ ನಾಮಪತ್ರ ಸಲ್ಲಿಕೆಗೆ ತೊಡಕಾಗಿದೆ. ಮೇ 10ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ.
ಬಿಜೆಪಿ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರಕ್ಕೆ ಡಾ. ಚಂದ್ರು ಲಮಾಣಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. 2018ರ ಜುಲೈ 21ರಿಂದ ಅವರು ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಸರ್ಕಾರಿ ಉದ್ಯೋಗಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರವಾಗದ ಕಾರಣ ಕಾನೂನು ತೊಡಕು ಉಂಟಾಗಿದೆ.

ಪಕ್ಷವೂ ಸಹ ಈ ಸಮಸ್ಯೆಯನ್ನು ಗಮನಿಸಿದೆ. ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಡಾ. ಚಂದ್ರು ಲಮಾಣಿಗೆ ರಾಜೀನಾಮೆ ಸಮಸ್ಯೆ ಬಗೆಹರಿಸಿಕೊಳ್ಳಿ. ಸೋಮವಾರ ಸಂಜೆಯೊಳಗೆ ರಾಜೀನಾಮೆ ಅಂಗೀಕಾರವಾದ ಪತ್ರವನ್ನು ಪಕ್ಷದ ಕಚೇರಿಗೆ ಕಳಿಸಿ ಎಂದು ಸೂಚನೆ ಕೊಟ್ಟಿದ್ದಾರೆ. ಒಂದು ವೇಳೆ ರಾಜೀನಾಮೆ ಅಂಗೀಕಾರ ತಡವಾದರೆ ಬಿಜೆಪಿ ಅಭ್ಯರ್ಥಿ ಬದಲಾಗಲಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿದೆ.
ರಾಜೀನಾಮೆ ಸಲ್ಲಿಕೆ; ಡಾ. ಚಂದ್ರು ಲಮಾಣಿ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದರು. ಅದಕ್ಕಾಗಿ ಅವರು ಆಗಸ್ಟ್ 21, 2021ರಂದು ಸರ್ಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಆದರೆ ವರ್ಷಗಳು ಕಳೆದರೂ ಸಹ ಅದು ಅಂಗೀಕಾರಗೊಂಡಿಲ್ಲ. ಈಗ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಹತ್ತಿರವಾಗಿದ್ದು ಕಾನೂನು ತೊಡಕು ಉಂಟಾಗಿದೆ.
ಶಿರಹಟ್ಟಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುವಾಗ ಡಾ. ಚಂದ್ರು ಲಮಾಣಿ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪವಿದೆ. ಈ ಕುರಿತು ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಮತ್ತೊಂದು ಕಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರ ರಾಜೀನಾಮೆ ಅಂಗೀಕಾರ ಮಾಡದ ಕಾರಣ ವೈದ್ಯ ಚಂದ್ರು ಲಮಾಣಿ ಆತಂಕಕ್ಕೆ ಒಳಗಾಗಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಡಾ. ಚಂದ್ರು ಲಮಾಣಿ ಸೇರಿದಂತೆ ಮೂವರು ವೈದ್ಯರು ರಾಜೀನಾಮೆ ಸಲ್ಲಿಸಿದ್ದರು. ಇಲಾಖೆಯ ಆಯುಕ್ತರು ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತ ವಿಚಾರಣೆ ಬಾಕಿ ಇರುವ ಕಾರಣ ಅವರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಉಳಿದ ಇಬ್ಬರ ರಾಜೀನಾಮೆ ಅಂಗೀಕಾರ ಮಾಡಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ರವಾನೆ ಮಾಡಿದ್ದಾರೆ. ಈಗ ಏಪ್ರಿಲ್ 20ರೊಳಗೆ ಡಾ. ಚಂದ್ರು ಲಮಾಣಿ ರಾಜೀನಾಮೆ ಅಂಗೀಕಾರವಾಗಲಿದೆಯೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ನಿಯಮಗಳು ಏನು ಹೇಳುತ್ತವೆ?; ಸರ್ಕಾರಿ ನೌಕರರು ಚುನಾವಣಾ ಸಂದರ್ಭದಲ್ಲಿ ಹೇಗಿರಬೇಕು?. ಹೇಗೆ ಭಾಗವಹಿಸಬೇಕು?, ಯಾವ ರೀತಿಯ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಮಿತಿಯ, ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮಗಳ, 2021 ಅಡಿಯಲ್ಲಿ ಮಾಹಿತಿ ನೀಡಲಾಗಿದೆ. ಯಾವುದೇ ಸರ್ಕಾರಿ ನೌಕರ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಮೊದಲು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಬೇಕು. ಯಾವುದೇ ಸರ್ಕಾರಿ ನೌಕರ ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ಟಿಕೆಟ್‌ಗಾಗಿ ಇನ್ನೂ ಪ್ರಯತ್ನ; ಹಾಲಿ ಶಿರಹಟ್ಟಿ ಕ್ಷೇತ್ರ ಬಿಜೆಪಿಯ ವಶದಲ್ಲಿಯೇ ಇದೆ. ಶಾಸಕರು ರಾಮಣ್ಣ ಲಮಾಣಿ. ಆದರೆ ಬಿಜೆಪಿ ಹಾಲಿ ಶಾಸಕರನ್ನು ಬಿಟ್ಟು ಯುವ ವೈದ್ಯ ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡಿದೆ. ಈಗ ಅವರ ರಾಜೀನಾಮೆ ಅಂಗೀಕಾರ ಪ್ರಕರಣ ಬೆಳಕಿಗೆ ಬಂದ ಬಳಿಕ ಶಾಸಕ ರಾಮಣ್ಣ ಲಮಾಣಿ ಟಿಕೆಟ್‌ಗಾಗಿ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ್ದ ಅವರು ಬಿ. ಎಲ್. ಸಂತೋಷ್ ಭೇಟಿಯಾಗಿ ಟಿಕೆಟ್ ಕುರಿತು ಚರ್ಚೆ ನಡೆಸಿದರು.












Click it and Unblock the Notifications