ಗದಗ ಜಿಲ್ಲೆಯಲ್ಲಿ ಜಾನುವಾರುಗಳಿಗೆ ರೋಗ ಬಾಧೆ; ಅನ್ನದಾತ ಕಂಗಾಲು
ಗದಗ, ಸೆಪ್ಟೆಂಬರ್, 21: ಜಿಲ್ಲೆಯಲ್ಲಿ ಮಳೆಯ ಹೊಡೆತಕ್ಕೆ ಈಗಾಗಲೇ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ಅನ್ನದಾತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಸು ಮತ್ತು ಎತ್ತುಗಳಲ್ಲಿ ಚರ್ಮ ಹಾಗೂ ಗಂಟು ರೋಗದ ಬಾಧೆ ತಗುಲಿ ರೈತರು ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ರೋಗ ಉಲ್ಭಣಗೊಳ್ಳುತ್ತಿದ್ದು, ಈ ಕಾಯಿಲೆ ರೈತರ ನಿದ್ದೆಗೆಡಿಸಿದೆ. ರೋಗವನ್ನು ಹತೋಟಿಗೆ ತರುವಂತೆ ಪಶು ವೈದ್ಯರ ಮೊರೆ ಹೋಗಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರಗಳಿಗೆ ಚರ್ಮ ಹಾಗೂ ಗಂಟು ರೋಗ ಹರಡುತ್ತಿದೆ. ಜಾನುವಾರುಗಳು ಕಾಯಿಲೆಗಳಿಗೆ ತುತ್ತಾಗಿ ನರಕ ಅನುಭವಿಸುತ್ತಿವೆ. ಸೂಕ್ತವಾದ ಚಿಕಿತ್ಸೆ ಸಿಗದೆ ಎತ್ತು ಹಾಗೂ ಹಸುಗಳು ಗೋಳಾಡುತ್ತಿವೆ. ಇದನ್ನು ಕಂಡ ರೈತರು ಕಂಗಾಲಾಗಿದೆ. ಇನ್ನು ಜಾನುವಾರುಗಳ ಸಮೇತವಾಗಿ ರೈತರು ಲಕ್ಷ್ಮೇಶ್ವರ ಪಟ್ಟಣದ ಪಶು ಆಸ್ಪತ್ರೆಗೆ ಬಂದರೆ ಅಲ್ಲಿ ವೈದ್ಯರೇ ಇರುವದಿಲ್ಲ. ಬದಲಾಗಿ ಸಹಾಯಕ ಸಿಬ್ಬಂದಿಯವರೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಸರಿಯಾಗಿ ಸ್ಪಂದನೆ ನೀಡುವುದಿಲ್ಲ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಔಷಧಿ ಮತ್ತು ಲಸಿಕೆಯನ್ನು ಹೊರಗಡೆ ಕೊಂಡುಕೊಳ್ಳಿ ಎಂದು ಸೂಚನೆ ನೀಡುತ್ತಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ರೋಗದ ಪ್ರಮುಖ ಲಕ್ಷಣಗಳು
ರೋಗ ತಗುಲಿದ ಪ್ರಾಣಿಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ವಾರದ ಬಳಿಕ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಚರ್ಮದಲ್ಲಿ ತುರಿಕೆ ಆರಂಭ ಆಗುತ್ತಿವೆ. ರೋಗ ಕಾಣಿಸಿಕೊಂಡ ಹಸುಗಳಲ್ಲಿ ಹಾಲಿನ ಪ್ರಮಾಣ ಗಣನೀಯವಾಗಿ ಇಳಿಕೆ ಆಗುತ್ತದೆ. ಅತಿಯಾದ ಜ್ವರ, ಮೂಗು ಮತ್ತು ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ಮೈಮೇಲೆ ದೊಡ್ಡ ಗಂಟುಗಳು ಬರುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.

ಚಾಮರಾಜನಗರದಲ್ಲೂ ಕಾಲುಬಾಯಿ ರೋಗ
ಈ ಹಿಂದೆ ಚಾಮರಾಜನಗರ ಜಿಲ್ಲೆಯ ದನಕರುಗಳಿಗೆ ಕಾಲುಬಾಯಿ ರೋಗ ಆವರಿಸಿದ್ದು, ಯಡಿಯೂರು ಗ್ರಾಮದಲ್ಲಿ 4 ಹಸುಗಳು, ಕೊಳ್ಳೇಗಾಲ ತಾಲೂಕಿನ 3 ಹಾಗೂ ಕೆಂಪನಪುರ ಗ್ರಾಮದ ಹಸುವೊಂದು ಕಾಲುಬಾಯಿ ಜ್ವರದಿಂದ ಮತಪಟ್ಟಿವೆ. ಗ್ರಾಮದ ನಂಜುಂಡಪ್ಪ ಅವರ 40 ಸಾವಿರ ರೂಪಾಯಿ ಬೆಲೆಯ 1 ಹಸು, ಶಿವಕುಮಾರಸ್ವಾಮಿ ಅವರಿಗೆ ಸೇರಿದ 50 ಸಾವಿರ ರೂಪಾಯಿ ಬೆಲೆಯ 2 ಹಸು, ಮರಿಸ್ವಾಮಿ ಅವರಿಗೆ ಸೇರಿದ 15 ಸಾವಿರ ರೂಪಾಯಿ ಬೆಲೆ ಬಾಳುವ 1 ಹಸು ಮೃತಪಟ್ಟಿವೆ. 15 ದಿನಗಳಿಂದ ಈಚೆಗೆ ರೋಗ ಉಲ್ಬಣಗೊಂಡಿದ್ದು, ಗ್ರಾಮದಲ್ಲಿ ಈಗಾಗಲೇ 40 ಹಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಹುಲ್ಲನ್ನು ತಿನ್ನದೇ ಬಾಯಲ್ಲಿ ಜೊಲ್ಲು, ರಸ ಸುರಿಸುತ್ತ ಬಿದ್ದಿವೆ. ಜ್ವರ ಸೋಂಕಿತ ರಾಸುಗಳಿಗೆ ಈಗಾಗಲೇ ಒಂದನೇ ಹಂತದ ಚುಚ್ಚುಮದ್ದನ್ನು ಕೊಡಿಸಿದ್ದರು. ಆದರೂ ಚೇತರಿಸಿಕೊಂಡಿರಲಿಲ್ಲ. ಸಾಲ ಮಾಡಿ ಹಸುವನ್ನು ತಂದ ರೈತರು ಅನಿರೀಕ್ಷಿತ ಆಘಾತದಿಂದಾಗಿ ಸಾಲಮರುಪಾವತಿ ಹೇಗೆ ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 2.91 ಲಕ್ಷ ಜಾನುವಾರುಗಳಿದ್ದು, ಶೇಕಡಾ 59ರಷ್ಟು ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಆದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಮತಪಟ್ಟ ಹಸುಗಳಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಸಿದ್ದರು.












Click it and Unblock the Notifications