ನಕಲಿ ಗೊಬ್ಬರ ಮಾರಾಟಗಾರರನ್ನು ಪೊಲೀಸರಿಗೆ ಒಪ್ಪಿಸಿದ ರೈತರು
ಗದಗ, ಜುಲೈ, 30: ಗದಗ ಜಿಲ್ಲೆಯಲ್ಲಿ ಕೃಷಿ ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿ ರೈತರು ಪರದಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ನಕಲಿ ಗೊಬ್ಬರ ಮಾರಿ ರೈತರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುತ್ತಿರುವುದು ಇದೀಗ ಬಯಲಿಗೆ ಬಂದಿದೆ. ಬೆಂಗಳೂರು ಮೂಲದ ನಕಲಿ ಗೊಬ್ಬರ ತುಂಬಿದ ಲಾರಿಯನ್ನು ಅಲ್ಲಿನ ರೈತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆ ಇದೇ ನಕಲಿ ಗೊಬ್ಬರವನ್ನು ಖದೀಮರು ಇಲ್ಲಿನ ರೈತರಿಗೆ ಮಾರಾಟ ಮಾಡಿದ್ದರು ಎಂದು ಆರೋಪಗಳು ಕೇಳಿಬಂದಿವೆ.

ಮಂಗಳಾ ಡಿಎಪಿ ಎಂದು ಹೇಳಿ ಸವಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ನಕಲಿ ಗೊಬ್ಬರವನ್ನು ಮಾರಾಟ ಮಾಡಿ ಕಾಲ್ಕಿತ್ತಿದ್ದರು ಎನ್ನುವ ಸತ್ಯವೊಂದು ಬಯಲಿಗೆ ಬಿದ್ದಿದೆ. ಆದರೆ ಗೊಬ್ಬರದಿಂದ ಯಾವುದೇ ರಿಸಲ್ಟ್ ಕಾಣದ ಕಾರಣ ರೈತರಿಗೆ ಅನುಮಾನ ಮೂಡಿದೆ. ನೂರಾರು ರೈತರಿಗೆ ಈ ನಕಲಿ ಗೊಬ್ಬರ ಮಾರಾಟ ಮಾಡಿದ್ದು, ಸತ್ಯ ತಿಳಿಯುತ್ತಿದ್ದಂತೆ ರೈತರು ರೊಚ್ಚಿಗೆದ್ದಿದ್ದರು. ಮಾರಾಟ ಮಾಡಿದ್ದ ಸಿಬ್ಬಂದಿಗೆ ಕರೆ ಮಾಡಿ ಮತ್ತೆ 500 ಚೀಲದ ಗೊಬ್ಬರ ಲೋಡ್ ಬೇಕು ಅಂತ ತಿಳಿಸಿದ್ದಾರೆ.

ಮೊದಲೇ ಹಣ ಕೂಡಿಸಿ ನಕಲಿ ಮಾರಾಟದ ಕಂಪನಿ ಸಿಬ್ಬಂದಿಗೆ ಕೈಗೆ ಇಟ್ಟ ಬಳಿಕ ಗೊಬ್ಬರದ ಲಾರಿಯನ್ನ ಗ್ರಾಮಕ್ಕೆ ತಂದಿದ್ದಾರೆ. ಬಳಿಕ ಲಾರಿ ಸಮೇತ ಸಿಬ್ಬಂದಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ರೋಣ ಕೃಷಿ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದು ಮೇಲ್ನೋಟಕ್ಕೆ ನಕಲಿ ಗೊಬ್ಬರವಾಗಿದ್ದು, ಈ ಬಗ್ಗೆ ಬೆಂಗಳೂರು ಪ್ರಯೋಗಾಲಯಕ್ಕೆ ಕಳಿಸಿದ್ದೇವೆ. ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಮತ್ತೆ ಎಲ್ಲಿಯಾದರೂ ಈ ರೀತಿ ಅನುಮಾನ ಬರುವ ರೀತಿಯಲ್ಲಿ ಗೊಬ್ಬರ ಮಾರಾಟಗಾರರು ಕಂಡು ಬಂದರೆ ಅವರನ್ನ ಹಿಡಿದುಕೊಡಿ ಅಂತ ರೈತರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications