'ಸಂಸದೀಯ ಕಾರ್ಯದರ್ಶಿಗಳ ನೇಮಕದ ಅಗತ್ಯವೇನಿದೆ?'
ಹುಬ್ಬಳ್ಳಿ, ನವೆಂಬರ್ 09 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಅತೃಪ್ತರನ್ನು ಸಂತೃಪ್ತಪಡಿಸಲು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿಕೊಂಡಿದ್ದಾರೆ. ರಾಜ್ಯದ ರೈತರು ಬರದ ಬೇಗೆಯಲ್ಲಿ ಬೇಯುತ್ತ, ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಅಗತ್ಯವಿರಲಿಲ್ಲ' ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಅಕ್ಕಿಆಲೂರಿನಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಅವರು, 'ಭೀಕರ ಬರದಿಂದ ರೈತ ಸಮುದಾಯ ಕಂಗೆಟ್ಟಿದೆ. ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ನೊಂದವರ ಸಂಕಷ್ಟ ಬಗೆಹರಿಸದೇ ಪಕ್ಷದ ಅತೃಪ್ತರನ್ನು ಸಂತೃಪ್ತಪಡಿಸಲು ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿದರು. [ಸಂಸದೀಯ ಕಾರ್ಯದರ್ಶಿಗಳಿಗೆ ಯಾವ ಖಾತೆ ಹೊಣೆ?]

ಸಂಸದೀಯ ಕಾರ್ಯದರ್ಶಿಗಳ ನೇಮಕ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ. ಶನಿವಾರ ನೂತನ ಸಂಸದೀಯ ಕಾರ್ಯದರ್ಶಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸದೀಯ ಕಾರ್ಯದರ್ಶಿಗಳು ಸಂಪುಟ ದರ್ಜೆ ಅಥವಾ ರಾಜ್ಯ ಸಚಿವರ ಸ್ಥಾನಮಾನ ಪಡೆಯಲಿದ್ದಾರೆ. ಸಚಿವರಿಗೆ ಸಲಹೆ ನೀಡುವ ಕೆಲಸವನ್ನು ಸಂಪುಟ ಕಾರ್ಯದರ್ಶಿಗಳು ಮಾಡಲಿದ್ದಾರೆ. [10 ಸಂಸದೀಯ ಕಾರ್ಯದರ್ಶಿಗಳ ನೇಮಕ]
ಐದು ವರ್ಷ ಮೈತ್ರಿ ಮುಂದುವರೆಸಿ : 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತದ ವಿಷಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ತಕರಾರು ಮಾಡುತ್ತಿರುವುದು ತಪ್ಪು' ಎಂದು ಹೇಳಿದ ಹೊರಟ್ಟಿ ಅವರು, 'ಈ ಹಿಂದೆಯೂ ಬಿಜೆಪಿಯೊಂದಿಗೆ ಮುರಿದುಕೊಂಡ ಮೈತ್ರಿಯಿಂದ ಪಕ್ಷಕ್ಕೆ ಹಾನಿಯಾಗಿದೆ' ಎಂದರು. [ಬಿಬಿಎಂಪಿಯಲ್ಲಿನ ಮೈತ್ರಿ 5 ವರ್ಷ ಅಂದ್ರು ದೇವೇಗೌಡ್ರು!]
'ಬಿಬಿಎಂಪಿಯಲ್ಲಿ ಕಾಂಗ್ರೆಸ್‌ನೊಂದಿಗೆ ಮಾಡಿಕೊಂಡಿರುವ ಮೈತ್ರಿಯನ್ನು ಐದು ವರ್ಷಗಳವರೆಗೂ ಮುಂದುವರೆಸಬೇಕು' ಎಂದು ಬಸವರಾಜ ಹೊರಟ್ಟಿ ಹೇಳಿದರು. 'ಕಳೆದ ವಾರ ಕಾಂಗ್ರೆಸ್ ಬಿಬಿಎಂಪಿಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾವು ನೀಡಿರುವ ಒಂದು ವರ್ಷಕ್ಕೆ ಮಾತ್ರ ಸೀಮಿತ' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.












Click it and Unblock the Notifications