ಐಐಟಿ ಧಾರವಾಡ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ ನೀಡಿದ ಉಪರಾಷ್ಟ್ರಪತಿ
ಧಾರವಾಡ: 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಅಂದ್ರೆ ಐಐಟಿ ಧಾರವಾಡದಲ್ಲಿ ಇಂದು ಸಂಭ್ರಮ ಮೇಳೈಸಿತ್ತು. ಏಕೆಂದರೆ ಈ ಕ್ಯಾಂಪಸ್‌ನಲ್ಲಿ ನಿರ್ಮಾಣವಾದ ಕೇಂದ್ರೀಯ ಕಲಿಕಾ ಕಟ್ಟಡ, ಜ್ಞಾನ ಸಂಪನ್ಮೂಲ & ದತ್ತಾಂಶ ಕೇಂದ್ರ ಸೇರಿ 2 ಹೊಸ ಪ್ರವೇಶ ದ್ವಾರಗಳನ್ನು ಭಾರತದ ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ಉದ್ಘಾಟಿಸಿದರು. ಈ ಮೂಲಕ ಐಐಟಿ ಧಾರವಾಡ ಕ್ಯಾಂಪಸ್‌ನಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಉದ್ಘಾಟನೆ ನೆರವೇರಿಸಿದ ನಂತರ ಮಾತನಾಡಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು, ರಾಷ್ಟ್ರ ನಿರ್ಮಾಣದಲ್ಲಿ ಐಐಟಿ ರೀತಿ ಶ್ರೇಷ್ಠ ಸಂಸ್ಥೆಗಳ ಪಾತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಹಾಗೂ ದೇಶದ ಯುವಕರು ಪ್ರಜಾಪ್ರಭುತ್ವ & ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನೂ ವಹಿಸುತ್ತಾರೆ. ಧಾರವಾಡ ಐಐಟಿಯ ಪ್ರತಿಭಾನ್ವಿತ ಪ್ರಾಧ್ಯಾಪಕರಿಂದ ಈ ಕಿರಿಯ ಐಐಟಿಯಲ್ಲಿ ವಿದ್ಯಾರ್ಥಿಗಳು ಗಣನೀಯ ನೆರವು ಪಡೆಯುತ್ತಾರೆ. ಈ ಶ್ರೇಷ್ಠ ಕಲಿಕಾ ಕೇಂದ್ರವು ಬೆಳವಣಿಗೆಯ ಹೊಂದುವ & ಮುಂದಿನ ಹಂತಕ್ಕೆ ಹೋಗಲು ಬೇಕಾದ ಸಾಕಷ್ಟು ಸಾಮರ್ಥ್ಯ ಹೊಂದಿದೆ ಅಂತ ಹೆಮ್ಮೆ ವ್ಯಕ್ತಪಡಿಸಿದರು.

ಭಾರತ 3ನೇ ಅತಿದೊಡ್ಡ ಆರ್ಥಿಕತೆ...
ಹಾಗೇ ತಮ್ಮ ಮಾತು ಮುಂದುವರಿಸಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು, ಐಐಟಿ ಧಾರವಾಡದ ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ ಮಹೋನ್ನತ ಬೆಳವಣಿಗೆಗೆ ನೆರವಾಗಲಿ ಅಂತ ಕರೆ ನೀಡಿದರು. ಸಂಸ್ಥೆಯ ಬೆಳವಣಿಗೆಗೆ ನೆರವು ನೀಡಲು, ಭಾರತೀಯ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ & ಐಐಟಿ ಧಾರವಾಡ ಮಧ್ಯೆ ಒಪ್ಪಂದ ಸಾಧ್ಯವಾಗಿಸಲು ಅನುಕೂಲ ಮಾಡುತ್ತೇವೆ, ಎಂದು ಇದೇ ವೇಳೆ ತಿಳಿಸಿದರು.
ಹಾಗೆ ಭಾರತ ಮುಂದಿನ ಕೆಲ ವರ್ಷಗಳಲ್ಲಿ ಜಾಗತಿಕವಾಗಿ 3ನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ. ಭಾರತ ತನ್ನ ಗುರಿಗಳನ್ನ ಸಾಧಿಸಲು ಮತ್ತು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲು ತಂತ್ರಜ್ಞಾನ ಶಕ್ತಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆ ನೀಡಿದರು.

ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ದಾರಿ
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಧಾರವಾಡ ಐಐಟಿ & ಐಐಐಟಿ ಉಪಸ್ಥಿತಿಯೊಂದಿಗೆ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿದೆ. ಹಾಗೂ, ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಹುಬ್ಬಳ್ಳಿ & ಧಾರವಾಡ ಅವಳಿ ನಗರಗಳು ಕರ್ನಾಟಕದ ಉದಯೋನ್ಮುಖ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿ ಕೇಂದ್ರಗಳಲ್ಲಿ ಸೇರಿಕೊಂಡಿವೆ ಎಂದರು.
ಐಐಟಿ ಹೊಸ ಕಟ್ಟಡಗಳ ವಿಶೇಷತೆ?
ಇದೀಗ ಉದ್ಘಾಟನೆ ಆಗಿರುವ ಕಟ್ಟಡಗಳಿಂದ ವಿದ್ಯಾರ್ಥಿಗಳಿಗೆ ಭಾರಿ ಅನುಕೂಲ ಆಗಲಿದೆ. ಅದರಲ್ಲೂ ಸಿಎಲ್‌ಟಿಯು 19,135 ಚ.ಮೀ.ನಷ್ಟು ಬಿಲ್ಟ್ ಅಪ್ ಏರಿಯಾವನ್ನ ಹೊಂದಿರುವ ಕಟ್ಟಡವಾಗಿದೆ. 30 ರಿಂದ 600 ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬಹು ಉಪನ್ಯಾಸ ಹಾಲ್ ಗಳು & ಸಭಾಂಗಣಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಕಟ್ಟಡವು, ಎಲ್ಲಾ ಸಭಾಂಗಣಗಳಿಗೆ ಪ್ರವೇಶ ಒದಗಿಸುವ ವಿಶಿಷ್ಟವಾದ ರಾಂಪ್ ವಿನ್ಯಾಸವನ್ನು ಹೊಂದಿದೆ. ಮತ್ತು 60 ಮೀ ಅಗಲದ ಅದ್ಭುತ ಮೆಂಬರೇನ್ ಫ್ಯಾಬ್ರಿಕ್ ಗುಮ್ಮಟ ಹೊಂದಿದೆ. ಇದೆಲ್ಲ ಕಟ್ಟಡಕ್ಕೆ ಅಪೂರ್ವ ವಾಸ್ತು & ಶಿಲ್ಪ ರಚನೆ ಎಂಬ ಹೆಗ್ಗಳಿಕೆ ಒದಗಿಸಿದ್ದು, ಐಐಟಿ ಧಾರವಾಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.
ಕೆಆರ್‌ಡಿಸಿಯು 8540 ಚ.ಮೀ. ಬಿಲ್ಟ್ ಅಪ್ ಏರಿಯಾ ಹೊಂದಿದ್ದು, ಕೇಂದ್ರ ಗ್ರಂಥಾಲಯ, ಓದುವ ಕೋಣೆ, ದತ್ತಾಂಶ ಕೇಂದ್ರ, ಡಿಜಿಟಲ್ ಕಲಿಕಾ ಸೌಲಭ್ಯಗಳನ್ನ ಹೊಂದಿದೆ. ಈ ಕಟ್ಟಡ ದೇವಾಲಯದಂತಹ ಗೋಪುರದ ರಚನೆಯನ್ನು ಒಳಗೊಂಡಿದೆ. ಇದರ ವೀಕ್ಷಣಾ ಗ್ಯಾಲರಿಯು 46 ಮೀ ಎತ್ತರ ಇದ್ದು, ಧಾರವಾಡ ನಗರದ ಅಂದವನ್ನ ಇದರ ಮೇಲೆ ನಿಂತು ಸವಿಯುವುದಕ್ಕೆ ಸಾಧ್ಯವಿದೆ.












Click it and Unblock the Notifications