UPSC Results 2023: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಣ್ಣಿಗೇರಿಯ KSRTC ಬಸ್ ಚಾಲಕನ ಪುತ್ರ ಪಾಸ್
ಧಾರವಾಡ, ಮೇ, 23: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಪುತ್ರ ಸಿದ್ದಲಿಂಗಪ್ಪ ಪೂಜಾರ ಎಂಬ ವಿದ್ಯಾರ್ಥಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಈ ಮೂಲಕ ಸಿದ್ದಲಿಂಗಪ್ಪ ಪೂಜಾರ ರಾಜ್ಯಕ್ಕೆ ಮತ್ತು ಅಣ್ಣಿಗೇರಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ.
ಸಿದ್ದಲಿಂಗಪ್ಪ ಪೂಜಾರ ಅವರು 589 ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆ ಹೊಂದಿದ್ದು, ಇವರ ಸಾಧನೆಗೆ ಅಣ್ಣಿಗೇರಿ ಪಟ್ಟಣವೇ ಹೆಮ್ಮೆ ಪಡುವಂತಾಗಿದೆ. ಸಾಮಾನ್ಯವಾಗಿ ಅದೆಷ್ಟೋ ಶ್ರೀಮಂತರ ಮಕ್ಕಳು ಮೋಜು ಮಸ್ತಿ ಮಾಡುತ್ತಲೇ ಜೀವನವನ್ನು ಕಳೆಯುತ್ತಿರುತ್ತಾರೆ. ಆದರೆ ಬಡವರ ಮಕ್ಕಳು ಮಾತ್ರ ತಮ್ಮ ತಂದೆ-ತಾಯಿ ಕಷ್ಟಗಳನ್ನು ಅರ್ಥ ಮಾಡಿಕೊಂಡು ತಾವು ಉನ್ನತ ಸ್ಥಾನಕ್ಕೆ ಏರಬೇಕೆಂದು ಕನಸ್ಸು ಕಾಣುತ್ತಾರೆ.

ಬಡವರ ಮಕ್ಕಳು ಕಂಡ ಕನಸ್ಸನ್ನು ನನಸು ಮಾಡುವವರೆಗೂ ತಮ್ಮ ಹಠವನ್ನು ಬಿಡುವುದಿಲ್ಲ ಎನ್ನುವುದಕ್ಕೆ ಕೆಎಸ್‌ಆರ್‌ಟಿಸಿ ಚಾಲಕನ ಪುತ್ರ ಸಿದ್ದಲಿಂಗಪ್ಪ ಪೂಜಾರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿರುವುದೇ ಪ್ರಮುಖ ಉದಾಹರಣೆ ಆಗಿದೆ.
ಸಾಧಿಸುವವನಿಗೆ ಪ್ರಮುಖವಾಗಿ ಛಲವೊಂದಿದ್ದರೆ ಸಾಕು. ಅಲ್ಲದೆ ಅವರಿಗೆ ಕಷ್ಟಗಳೆಲ್ಲವೂ ಪಾಠಗಳ ರೀತಿಯಲ್ಲೇ ಕಾಣಿಸುತ್ತವೆ. ಕೊನೆಗೆ ತಾವು ಅಂದುಕೊಂಡಂತೆ ಸಾಧನೆಯನ್ನು ಕೂಡ ಮಾಡಿ ತಂದೆ-ತಾಯಿಗೆ ಹೆಸರು ತರುವುದೇ ಇವರ ಪ್ರಮುಖ ಉದ್ದೇಶ ಆಗಿರುತ್ತದೆ. ಅಷ್ಟೇ ಅಲ್ಲದೆ ಸಾಧಕನಿಗೆ ಪ್ರಮುಖವಾಗಿ ಬಾದಕಗಳ ಬಗ್ಗೆ ಅರಿವಿರುತ್ತದೆ ಅನ್ನುವುದಕ್ಕೆ ಸಿದ್ದಲಿಂಗಪ್ಪ ಪೂಜಾರ ಅವರ ಸಾಧನೆಯೇ ಉದಾಹರಣೆ ಆಗಿದೆ.
ಕರ್ನಾಟಕದಿಂದ 26 ಮಂದಿ ಪಾಸ್
ಕೇಂದ್ರ ಲೋಕ ಸೇವಾ ಆಯೋಗವು 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ದಾವಣಗೆರೆಯ ಅವಿನಾಶ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಬಂದಿದ್ದಾರೆ. ಆಯ್ಕೆ ಆಗಿರುವ ಒಟ್ಟು 933 ಅಭ್ಯರ್ಥಿಗಳ ಪೈಕಿ ಕರ್ನಾಟಕದ 26 ಅಭ್ಯರ್ಥಿಗಳು ಇದ್ದಾರೆ. ಮೊದಲ ಪ್ರಯತ್ನದಲ್ಲಿಯೇ ದಾವಣಗೆರೆ ಮೂಲದ ವಿ.ಅವಿನಾಶ್ ಅವರು 31ನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಅವಿನಾಶ್ ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿ ಆಗಿದ್ದಾರೆ. ಇನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದವರಾದ ಶೃತಿ ಯರಗಟ್ಟಿ 362ನೇ ರ‍್ಯಾಂಕ್, ಬಿ.ವಿ.ಶ್ರೀದೇವಿಗೆ 525ನೇ ರ‍್ಯಾಂಕ್, ಆದಿನಾಥ್ ಪದ್ಮಣ್ಣಗೆ 566ನೇ ರ‍್ಯಾಂಕ್, ಐಎನ್ ಮೇಘನಾ 617ನೇ ರ‍್ಯಾಂಕ್ ಪಡೆದಿದ್ದಾರೆ.












Click it and Unblock the Notifications