ಬಿಸಿಲು: ಮತದಾರರ ಆರೋಗ್ಯ ಕಾಳಜಿಗೆ ಮತಗಟ್ಟೆಯಲ್ಲಿ ಮೆಡಿಸಿನ್ ಕಿಟ್
ಧಾರವಾಡ, ಮೇ 05: ಬೇಸಿಗೆಯ ಬಿಸಿಲಿನ ಝಳ, ಶಾಖದ ಅಲೆಯ ನಡುವೆಯೇ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಮತದಾನಕ್ಕೆ ತಯಾರಿ ಮಾಡಿಕೊಂಡಿದ್ದು, ಬಿಸಿಲಿನ ಕಾರಣಕ್ಕೆ ಮತದಾನದ ಪ್ರಮಾಣ ಕಡಿಮೆಯಾಗದಂತೆಯೂ ಕಾಳಜಿ ಕೈಗೊಂಡಿದೆ.
ಮೇ 7ರ ಮಂಗಳವಾರ ಮತದಾನ ನಡೆಯಲಿರುವ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಎಲ್ಲಾ 14 ಲೋಕಸಭಾ ಕ್ಷೇತ್ರಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿಯೇ ಇದೆ.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿ ಮತ್ತು ಮತದಾನಕ್ಕಾಗಿ ಬರುವ ಮತದಾರರ ಆರೋಗ್ಯ ಕಾಳಜಿಗೆ ಮೆಡಿಸಿನ್ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಮಾಹಿತಿ: ಮತಗಟ್ಟೆ ಸಿಬ್ಬಂದಿ, ಮತಗಟ್ಟೆಗೆ ಬರುವ ಮತದಾರರ ಆರೋಗ್ಯ ಕಾಳಜಿಗೆ ಮೆಡಿಸಿನ್ ಕಿಟ್ ವಿತರಣೆ ಮಾಡುವ ಕುರಿತು ಚುನಾವಣಾಧಿಕಾರಿ ದಿವ್ಯ ಪ್ರಭು ಮಾಹಿತಿ ನೀಡಿದ್ದಾರೆ.
ಮೇ 7ರ ಮತದಾನ ನಡೆಯುವ ದಿನದಂದು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 1,652 ಮತದಾನ ಕೇಂದ್ರಗಳಿಗೆ 1,268 ವೈದ್ಯಕೀಯ ತಂಡಗಳನ್ನು ನಿಯೋಜಿಸಿ, 1,850 ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ಅವಶ್ಯಕ ಔಷಧಿಗಳೊಂದಿಗೆ ಸಿದ್ಧಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಉಷ್ಣ ವಾತಾವರಣ ಹೆಚ್ಚಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಮತಗಟ್ಟೆಗಳಿಗೆ ತಲುಪಿದ ಮೇಲೆ ಮತ್ತು ಮತದಾನದ ದಿನದಂದು ಯಾವುದೇ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗದಂತೆ ಮುನ್ನೆಚ್ಚರಿಕೆಯಾಗಿ ಓಆರ್‍ಎಸ್ ಪ್ಯಾಕೇಟ್‍ಗಳು, ಜ್ವರ, ತಲೆನೋವು, ಹೊಟ್ಟೆನೋವು, ವಾಂತಿ, ಆಸಿಡಿಟಿ ಮುಂತಾದ ಸಮಸ್ಯೆಗಳಿಗೆ ಒಳಗಾದಲ್ಲಿ ಅವುಗಳ ಪರಿಹಾರಕ್ಕಾಗಿ ಅಗತ್ಯವಿರುವ ಮಾತ್ರೆಗಳು, ಸ್ಯಾನಿಟೈಸರ್, ಸಣ್ಣ ಪುಟ್ಟ ಗಾಯಗಳಾದಲ್ಲಿ ಬ್ಯಾಂಡ್ ಏಡ್‍ನ್ನು ಒಳಗೊಂಡ ಕಿಟ್ ಅನ್ನು ಸಿದ್ದಪಡಿಸಿದ್ದು, ಮಾಸ್ಟರಿಂಗ್ ದಿನದಂದು ಚುನಾವಣಾ ಸಾಮಗ್ರಿಗಳ ಜೊತೆಗೆ ಇದನ್ನು ವಿತರಿಸಲಾಗುತ್ತಿದೆ.
ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಹಾಗೂ ಮತದಾರರ ಆರೋಗ್ಯ ಕಾಳಜಿ, ಅಗತ್ಯವೆನಿಸಿದರೆ ಪ್ರಾಥಮಿಕ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ನೇತೃತ್ವದಲ್ಲಿ ಅಗತ್ಯ ಸಿದ್ದತೆ, ಆರೋಗ್ಯ ಸಿಬ್ಬಂದಿಗಳ ನೇಮಕ ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಮತಗಟ್ಟೆಗಳ ವೈದ್ಯಕೀಯ ಮೇಲ್ವಚಾರಣೆಗಾಗಿ 55 ಸೆಕ್ಟರಲ್ ಅಧಿಕಾರಿಗಳನ್ನು, 10 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಮತದಾನದ ದಿನ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೇಂದ್ರ ಸ್ಥಾನವಾಗಿ ಇಟ್ಟು ಕೊಂಡು ಒಟ್ಟು 29 ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಾಸ್ಟರಿಂಗ್ ಮತ್ತು ಡಿಮಾಸ್ಟರಿಂಗ್ ದಿನದಂದು 8 ಕೇಂದ್ರಗಳಿಗೆ ವೈದ್ಯಕೀಯ ತಂಡಗಳೊಂದಿಗೆ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ.
ಅಧಿಕಾರಿಗಳಿಗೆ ತರಬೇತಿ: ಬಿಸಿಗಾಳಿಯಿಂದ ಉಂಟಾಗುವ ಅನಾರೋಗ್ಯ ನಿಯಂತ್ರಣಕ್ಕಾಗಿ ಮುಂಜಾಗೃತೆಯನ್ನು ವಹಿಸುವ ಕುರಿತು ಚುನಾವಣಾ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ತರಬೇತಿ ನೀಡಲಾಗಿದೆ. ಮತದಾನ ಕೇಂದ್ರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಓಆರ್‍ಎಸ್ ಪ್ಯಾಕೇಟ್‍ಗಳನ್ನು ನೀಡಲಾಗಿದೆ.
ಉಷ್ಣತೆಯಿಂದ ಸಂಭವಿಸುವ ಕಾಯಿಲೆಗಳಿಗೆ ಅಗತ್ಯವಿರುವ ಔಷಧಿಗಳ ದಾಸ್ತಾನುಗಳನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಾಲೂಕಾ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ. ವಿಶೇಷ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ 5, ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ 2 ಹಾಸಿಗೆಗಳನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 1 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.
ಮತದಾನ ಕೇಂದ್ರಕ್ಕೂ ಬಿಸಿಗಾಳಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ವಹಿಸಿಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಕರಪತ್ರಗಳನ್ನು ವಿತರಿಸಲಾಗಿದೆ ಮತ್ತು ಸ್ವಿಪ್ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಗೆ ಸೂಚಿಸಲಾಗಿದೆ.












Click it and Unblock the Notifications