ಧಾರವಾಡದಲ್ಲಿ ಭಾವೈಕ್ಯತೆಯ ಶ್ರೀಕೃಷ್ಣ ಜನ್ಮಾಷ್ಟಮಿ: ಕೃಷ್ಣ-ರಾಧೆಯರ ವೇಷ ತೊಟ್ಟ ಮುಸ್ಲಿಂ ವಿದ್ಯಾರ್ಥಿಗಳು
ಧಾರವಾಡ, ಸೆಪ್ಟೆಂಬರ್ 07: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಧಾರವಾಡ ನಗರದ ಆಲೂರು ವೆಂಕಟರಾವ್ ವೃತ್ತದ ಬಳಿಯ ಶಿಕ್ಷಕರ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಸರ್ಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರು ಧರ್ಮಾತೀತವಾಗಿ ಭಾಗವಹಿಸಿ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಶ್ರೀಕೃಷ್ಣ ಲೀಲೆಗಳಿಗೆ ಮಾರು ಹೋಗದವರೇ ಇಲ್ಲ. ಹೀಗಾಗಿ ಹಿಂದೂ ದೇವರ ಪೈಕಿ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿದ ದೇವರೆಂದರೆ ಅದು ಶ್ರೀಕೃಷ್ಣನೇ. ಇಂತಹ ಶ್ರೀಕೃಷ್ಣನ ಲೀಲೆಗಳಿಗೆ ಧಾರವಾಡದ ಮುಸ್ಲಿಂ ಸಮಾಜದ ಭಾಂದವರು ಕೂಡ ಮಾರು ಹೋಗಿದ್ದು, ಸರ್ಕಾರಿ ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿದ್ದಾರೆ.

ಧಾರವಾಡದ ಸರ್ಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಈ ಶಾಲೆಯ ವಿಶೇಷವೇನೆಂದರೆ, ಶಾಲೆಯಲ್ಲಿ 1ರಿಂದ 8 ನೇ ತರಗತಿಯವರೆಗೆ 320 ಬಾಲಕಿಯರು ಓದುತ್ತಿದ್ದಾರೆ. ಈ ಪೈಕಿ ಶೇ. 60 ರಷ್ಟು ಬಾಲಕಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಆದರೂ ಇಲ್ಲಿ ಶ್ರೀಕೃಷ್ಣ-ರಾಧೆಯರ ವೇಷ ತೊಟ್ಟು ತಮ್ಮ ಪೋಷಕರೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಸಂಭ್ರಮದಿಂದ ಭಾಗಿಯಾಗಿದ್ದರು.
ಈ ಶಾಲೆಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ತೊಟ್ಟಿಲೊಂದಿದೆ. ಮೊದಲಿನಿಂದಲೂ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಇದೇ ತೊಟ್ಟಿಲನ್ನು ಬಳಸಲಾಗುತ್ತಿದೆ. ಪ್ರತಿವರ್ಷ ಶ್ರೀಕೃಷ್ಣನ ಪ್ರತಿಮೆಯನ್ನು ಇದರಲ್ಲಿ ಇಟ್ಟು ತೊಟ್ಟಿಲು ತೂಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಈ ವರ್ಷವು ಕೂಡ ಶಿಕ್ಷಕಿಯರು, ಮಕ್ಕಳ ತಾಯಂದಿರು ಕೃಷ್ಣನ ಪ್ರತಿಮೆಯನ್ನು ತೊಟ್ಟಿಲಲ್ಲಿ ಇಟ್ಟು ತೂಗಿ ಸಂಭ್ರಮಿಸಿದರು.

ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿ, ಅದರಿಂದ ಲಾಭ ಪಡೆದುಕೊಳ್ಳುತ್ತಿರುವ ಜನರ ಮಧ್ಯೆ ದೇವರು ಎಲ್ಲರಿಗೂ ಒಂದೇ ಎನ್ನುವ ಸಂದೇಶವನ್ನು ಧಾರವಾಡದ ಸರ್ಕಾರಿ ಶಾಲೆಯಲ್ಲಿ ಸಾರಿದ್ದಾರೆ.












Click it and Unblock the Notifications