ಕುಂದಗೋಳದಲ್ಲಿ ಬಿಜೆಪಿಗೆ ಆತಂಕ ತಂದಿಟ್ಟ ಡಿ.ಕೆ.ಶಿವಕುಮಾರ್ ತಂತ್ರ
ಕುಂದಗೋಳ, ಮೇ 15: ಕುಂದಗೋಳದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಾನಂದ ಬೆಂತೂರು ಬೆ ಡಿ.ಕೆ.ಶಿವಕುಮಾರ್ ಅವರ ಮುಂದಾಳತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕುಂದಗೋಳ ಉಪಚುನಾವಣೆಗೆ ಶಿವಾನಂದ ಬೆಂತೂರು ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಆದರೆ ಜಮೀರ್ ಅಹ್ಮದ್, ವಿನಯ್ ಕುಲಕರ್ಣಿ ಅವರ ಸಂಧಾನದ ನಂತರ ನಾಮಪತ್ರ ವಾಪಸ್ ಪಡೆದು ರಾಜಕೀಯವಾಗಿ ನಿವೃತ್ತಿಯಾಗುವುದಾಗಿ ಹೇಳಿದ್ದರು. ಆದರೆ ಡಿಕೆಶಿ ಅವರು ಮನವೊಲಿಸಿದ ನಂತರ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಶಿವಾನಂದ ಬೆಂತೂರು ಉತ್ತಮ ಬೆಂಬಲಿಗರನ್ನು ಹೊಂದಿದ್ದು, ಅವರು ಕಾಂಗ್ರೆಸ್ ಪಕ್ಷ ಸೇರಿರುವುದು ಕಾಂಗ್ರೆಸ್‌ಗೆ ಹೆಚ್ಚಿನ ಬಲ ತಂದುಕೊಡಲಿದೆ. ಶಿವಾನಂದ ಬೆಂತೂರು ಅವರು ಪಕ್ಷೇತರವಾಗಿ ಸ್ಪರ್ಧಿಸಿದ್ದರೆ ಉತ್ತಮ ಮತಗಳಿಸುವ ಅಭ್ಯರ್ಥಿ ಆಗಿದ್ದರು, ಇದೀಗ ಅವರು ಕಾಂಗ್ರೆಸ್‌ಗೆ ಬಂದಿರುವುದು ಆ ಮತಗಳು ಕಾಂಗ್ರೆಸ್ ನತ್ತ ತಿರುಗುವು ಸಾಧ್ಯತೆ ಇದೆ.

ಡಿಕೆಶಿ, ಶಿವಾನಂದ ನಡುವೆ ನಡೆದ ಸಂಭಾಷಣೆ ವೈರಲ್
ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಮತ್ತು ಶಿವಾನಂದ ಬೆಂತೂರು ಅವರ ನಡುವೆ ನಡೆದದ್ದು ಎನ್ನಲಾದ ಸಂಭಾಷಣೆಯ ಆಡಿಯೋ ಒಂದು ವೈರಲ್ ಆಗಿತ್ತು. ಅದರನ್ವಯ ಡಿ.ಕೆ.ಶಿವಕುಮಾರ್ ಅವರು ಶಿವಾನಂದ ಬೆಂತೂರು ಅವರಿಗೆ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನದ ಭರವಸೆ ಕೊಟ್ಟಿದ್ದಾರೆ, ಹಾಗಾಗಿಯೇ ಅವರು ಕಾಂಗ್ರೆಸ್ ಸೇರಿದ್ದಾರೆ ಎನ್ನಲಾಗಿದೆ.

ಮುಂದಿನ ಬಾರಿ ಟಿಕೆಟ್ ಶಿವಾನಂದ ಬೆಂತೂರ್‌ಗೆ
ವೈರಲ್ ಆದ ಫೋನ್ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರದ್ದು ಎನ್ನಲಾದ ಧ್ವನಿಯು, ಪ್ರಸ್ತುತ ಉಪಚುನಾವಣೆ ಸ್ಪರ್ಧಿಸಿರುವ ಕುಸುಮ ಶಿವಳ್ಳಿ ಟೆಂಪರರಿ ಅಭ್ಯರ್ಥಿ, ಮುಂದಿನ ಬಾರಿ ಟಿಕೆಟ್ ನಿಮಗೆ ಎಂದು ಹೇಳಿರುವುದು ದಾಖಲಾಗಿದೆ. ಮುಂದಿನ ಬಾರಿಯ ಚುನಾವಣೆ ಟಿಕೆಟ್ ಭರವಸೆ ಸಿಕ್ಕದ್ದರಿಂದ ಶಿವಾನಂದ ಬೆಂತೂರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆಂಬ ಮಾತುಗಳು ಹರಿದಾಡುತ್ತಿವೆ.

ರಾಜಕೀಯ ನಿವೃತ್ತಿ ಪಡೆವುದಾಗಿ ಹೇಳಿದ್ದರು
ನಾಮಪತ್ರ ವಾಪಸ್ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಿವಾನಂದ ಬೆಂತೂರು, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದರು, ಕುಸುಮಾ ಶಿವಳ್ಳಿ ಅವರಿಗೆ ಬೆಂಬಲ ನೀಡುವುದಿಲ್ಲ ಎಂದೂ ಹೇಳಿದ್ದರು, ಆದರೆ ಡಿಕೆ.ಶಿವಕುಮಾರ್ ಅವರ ಮಾತುಕತೆ ನಂತರ ಈಗ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್-ಬಿಜೆಪಿ ನಡುವೆ ತುರುಸಿನ ಪೈಪೋಟಿ
ಕುಂದಗೋಳ ಶಾಸಕರಾಗಿದ್ದ ಕಾಂಗ್ರೆಸ್‌ನ ಶಿವಳ್ಳಿ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಮೇ 19 ರಂದು ಮತದಾನ ನಡೆಯುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡ ಅವರು ಸ್ಪರ್ಧಿಸಿದ್ದಾರೆ. ಫಲಿತಾಂಶ ಮೇ 23ರಂದು ಬರಲಿದೆ.