ನಾಡೋಜ ಡಾ.ಚೆನ್ನವೀರ ಕಣವಿ ಪತ್ನಿ ಶಾಂತಾದೇವಿ ಇನ್ನಿಲ್ಲ
ಧಾರವಾಡ, ಮೇ 22: ಹಿರಿಯ ಕವಿ, ಸಾಹಿತಿ, ನಾಡೋಜ ಡಾ.ಚೆನ್ನವೀರ ಕಣವಿ ಅವರ ಪತ್ನಿ, ಲೇಖಕಿ ಶಾಂತಾದೇವಿ ಕಣವಿ ಅವರು ಇಂದು ನಿಧನರಾಗಿದ್ದಾರೆ. ಶಾಂತಾದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ ಪತಿ ಡಾ.ಚೆನ್ನವೀರ ಕಣವಿ, ಪುತ್ರಿ, ನಾಲ್ವರು ಪುತ್ರರು ಇದ್ದಾರೆ.
ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ಇವರು ಕಥೆಗಳು, ಲಲಿತ ಪ್ರಬಂಧ, ಮಕ್ಕಳ ಸಾಹಿತ್ಯಗಳನ್ನು ರಚಿಸಿದ್ದಾರೆ. ಇವರ ಬಯಲು-ಆಲಯ ಕಥಾಸಂಕಲನಕ್ಕೆ 1974ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ. 1987ರಲ್ಲಿ ಅಕಾಡೆಮಿಯ ಗೌರವ ಪ್ರಶಸ್ತಿ ದೊರೆತಿದೆ.

ಚೆನ್ನವೀರ ಕಣವಿ ಅವರೊಂದಿಗೆ ಸಾಹಿತ್ಯ ಕೃಷಿಯಲ್ಲಿ ಅವರು ತೊಡಗಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಶನಿವಾರ ಧಾರವಾಡದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.












Click it and Unblock the Notifications