ಹುಬ್ಬಳ್ಳಿ ಕೇಂದ್ರ ಕಾರಾಗೃಹಕ್ಕೆ ಸಿವಿಲ್ ನ್ಯಾಯಾಧೀಶರ ದಿಢೀರ್ ಭೇಟಿ, ಪರಿಶೀಲನೆ
ಧಾರವಾಡ, ಜುಲೈ 16 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡಮನಿ ಅವರು ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮಕ್ಕೆ ಹಾಗೂ ಹುಬ್ಬಳ್ಳಿ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಹಾಗೂ ಸಾರ್ವಜನಿಕರ, ಖೈದಿಗಳ ಕುಂದು ಕೊರತೆ ಆಲಿಸಿದರು.
ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎನ್ನುವ ದೂರು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕುಂದಗೋಳ ತಹಶೀಲ್ದಾರ್ ಶೈಲೇಶ ಪರಮಾನಂದ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು.

ಪರಶುರಾಮ ಎಫ್. ದೊಡಮನಿ ಅವರ ಭೇಟಿ ಬಳಿಕ ಸುಮಾರು ಒಂದು ಗಂಟೆಯ ನಂತರ ಜೆ.ಜೆ.ಎಂ. ಮೂಲಕ ಮೊದಲ ಬಾರಿಗೆ ಗ್ರಾಮಕ್ಕೆ ನೀರನ್ನು ಪೂರೈಸಲಾಯಿತು. ಗ್ರಾಮಕ್ಕೆ ಆಸರೆಯಾಗಿರುವ 3 ಕೆರೆಗಳಲ್ಲಿ ಹೂಳು ತುಂಬಿರುವ ಕುರಿತು ಗ್ರಾಮಸ್ಥರ ದೂರಿನ ಮೇರೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯನ್ನು ವೀಕ್ಷಣೆ ಮಾಡಿದರು. ಹಂತ ಹಂತವಾಗಿ ಕೆರೆಗಳಲ್ಲಿ ಹೂಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೆಗೆದು ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡಲು ಕೆರೆಗಳ ದಂಡೆಗಳಲ್ಲಿ ಉಪಯುಕ್ತವಾದ ಸಸಿ ನೆಡಲು ಸೂಚಿಸಿದರು.
ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ ಪರಶುರಾಮ ಎಫ್. ದೊಡಮನಿ ಅವರು, ದುರಸ್ತಿ ಮಾಡಬೇಕಾದ ಕಟ್ಟಡಗಳ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಬಳಿಕ ಅವರು ಹುಬ್ಬಳ್ಳಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಖೈದಿಗಳಿಗೆ ನೀಡಿರುವ ಜೈಲು ಕೊಠಡಿ, ಊಟ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಮತ್ತು ಖೈದಿಗಳ ಅಹವಾಲುಗಳನ್ನು ಆಲಿಸಿದರು.
ಕುಂದಗೋಳ : ಮಕ್ಕಳ ಹಕ್ಕುಗಳ ದಿನಾಚರಣೆ
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಮಾನವ ಹಕ್ಕುಗಳ ತಿಳುವಳಿಕೆ ಕಾರ್ಯಕ್ರಮ ಕುಂದಗೋಳ ಪಟ್ಟಣದ ಹರಭಟ್ಟ ಪ್ರೌಢ ಶಾಲೆ ಆವರಣದಲ್ಲಿ ನಡೆದಿದೆ.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಧಾರವಾಡ ಪಿ.ಎಫ್.ದೊಡ್ಡಮನಿ ಅವರ ನೇತೃತ್ವದಲ್ಲಿ ನಡೆದ ಮಕ್ಕಳ ಹಕ್ಕುಗಳ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆದು ಚಾಲನೆ ನೀಡಲಾಯಿತು. ಬಳಿಕ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕರ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಜೆ.ಪರಮೇಶ್ವರ್ ಹಾಗೂ ನ್ಯಾಯಾಧೀಶೆ ಗಾಯತ್ರಿ ಮಕ್ಕಳಿಗೆ ವಿವಿಧ ಕಾನೂನು ಅರಿವಿನ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು, ಹಾಗೂ ಆಡಳಿತ ಸಿಬ್ಬಂದಿ ಸೇರಿದಂತೆ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications