ಅಂಜುಮನ್ ಸಂಸ್ಥೆ ಉದ್ಧಟತನ ತೊರಿದ್ರೆ,ನಮಾಜ್ ಅವಕಾಶ ರದ್ದಿಗೆ ಕೋರ್ಟ್‌ಗೆ ಹೋಗುತ್ತೇವೆ-ಮುತಾಲಿಕ್
ಧಾರವಾಡ, ಸೆಪ್ಟೆಂಬರ್ 15: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಐದು ವರ್ಷಗಳ ಅವಧಿಗೆ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಬಂಧ ಪಾಲಿಕೆ ಹೊರಡಿಸಿದ್ದ ಠರಾವು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ.
ಈ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಕಳೆದ ವರ್ಷವೇ ನ್ಯಾಯಾಲಯ ಅನುಮತಿ ನೀಡಿತ್ತು. ಇಷ್ಟಾದರೂ ಅಂಜುಮನ್ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯ ಮುಟ್ಟಿ ನೋಡುವ ರೀತಿಯಲ್ಲಿ ತೀರ್ಪು ಕೊಟ್ಟಿದೆ ಎಂದು ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದರು.

ಅಂಜುಮನ್ ಸಂಸ್ಥೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡಿದೆ. ಆ ಹಿನ್ನೆಲೆಯಲ್ಲಿ ಅಂಜುಮನ್ ಸಂಸ್ಥೆ ಪದೇಪದೇ ನ್ಯಾಯಾಲಯದ ಮೊರೆ ಹೋಗುತ್ತಿದೆ. ಈ ತೀರ್ಪಿನಿಂದಾಗಿ ಅಂಜುಮನ್ ಸಂಸ್ಥೆಗೆ ಮುಖಭಂಗವಾಗಿದೆ. ಅಂಜುಮನ್ ಸಂಸ್ಥೆ ಇದೇ ರೀತಿ ಉದ್ಧಟತನ ತೋರಿದರೆ ನಮಾಜ್‌ಗೂ ಅಡ್ಡಿಪಡಿಸಬೇಕಾಗುತ್ತದೆ. ವರ್ಷದಲ್ಲಿ ಎರಡು ಬಾರಿ ನಮಾಜ್‌ಗೆ ನೀಡಿರುವ ಅವಕಾಶ ರದ್ದು ಮಾಡುವಂತೆ ನ್ಯಾಯಾಲಯ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಣೇಶ ಅಂದರೆ ವಿಘ್ನ ನಿವಾರಕ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ದೇಶದ ಯಾವುದೇ ಮೂಲೆಯಲ್ಲಿ ವಿರೋಧವಿಲ್ಲ. ಆದರೆ ಇಲ್ಲಿ ಮಾತ್ರ ವಿರೋಧ ವ್ಯಕ್ತವಾಗುತ್ತಿತ್ತು. ಈಗ ಅದಕ್ಕೂ ಪೂರ್ಣವಿರಾಮ ಬಿದ್ದಂತಾಗಿದೆ. ಅಂಜುಮನ್ ಸಂಸ್ಥೆ ಮತ್ತು ಕಾಂಗ್ರೆಸ್ ಸರ್ಕಾರ ಪಾಠ ಕಲಿಯಬೇಕು. ಶಾಂತಿ ಸುವ್ಯವಸ್ಥೆ ಹೆಸರು ಹೇಳಿ ಏನಾದರೂ ಅವಕಾಶ ನೀಡದಿದ್ದಲ್ಲಿ ಮತ್ತೆ ಹೋರಾಡಬೇಕಾಗುತ್ತದೆ. ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಶತಸಿದ್ಧ ಎಂದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಐದು ವರ್ಷಗಳ ಕಾಲ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಪಾಲಿಕೆಯಲ್ಲಿ ಠರಾವು ಪಾಸು ಮಾಡಲಾಗಿತ್ತು. ಈ ಠರಾವನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯು ಈ ಠರಾವಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇಂದು ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಆ ಮೂಲಕ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡುವುದು ಪಾಲಿಕೆಗೆ ಬಿಟ್ಟಂತಾಗಿದೆ.













Click it and Unblock the Notifications