ಧಾರವಾಡ; ಕ್ರಷರ್‌ನಲ್ಲಿ ಸಂಗ್ರಹಿಸಿದ್ದ ಅಕ್ರಮ ಸ್ಫೋಟಕ ವಶಕ್ಕೆ
ಧಾರವಾಡ, ಮಾರ್ಚ್ 17; ಕ್ರಷರ್ ಮೇಲೆ ದಾಳಿ ನಡೆಸಿದ ಧಾರವಾಡ ಪೊಲೀಸರು 1,650 ಜಿಲೆಟಿನ್ ಕಡ್ಡಿ ಮತ್ತು 700 ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬುಧವಾರ ಧಾರವಾಡದ ಎಸ್‍ಪಿ ಕೃಷ್ಣಕಾಂತ .ಪಿ ಈ ಕುರಿತು ಮಾಹಿತಿ ನೀಡಿದರು. ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಹದ್ದೆಯಲ್ಲಿರುವ ಮೇ. ಡಿ. ಬಿ. ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್‌ನಲ್ಲಿ ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಸಂಗ್ರಹಿಸಿದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮಾರ್ಚ್ 15ರ ಸಂಜೆ ಖಚಿತ ಮಾಹಿತಿ ಆಧರಿಸಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವಿಜಯಕುಮಾರ ಬಿರಾದಾರ ಮತ್ತು ಶ್ರೀಧರ. ವಿ ಸತಾರೇ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ದಾಳಿ ಮಾಡಿದರು.

ಯಾವುದೇ ದಾಖಲೆಗಳು ಇಲ್ಲದ ಹಾಗೂ ಅನಧಿಕೃತವಾಗಿ ಸಂಗ್ರಹಿಸಿದ್ದ 9 ರಟ್ಟಿನ ಬಾಕ್ಸ್‌ಗಳಲ್ಲಿದ್ದ ರೂ. 16,500 ಮೌಲ್ಯದ 1650 ಜಿಲೆಟಿನ್ ಕಡ್ಡಿ, ಕಟ್ಟಿಗೆ ಬಾಕ್ಸ್‌ನಲ್ಲಿದ್ದ 3,500 ರೂ. ಮೌಲ್ಯದ 700 ಎಲೆಕ್ಟ್ರಾನಿಕ್ ಡಿಟೋನೇಟರ್ ವಶಕ್ಕೆ ಪಡೆಯಲಾಯಿತು.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್ ಮಾಲೀಕ ಧಾರವಾಡದ ದಯಾನಂದ ಬಸವರಾಜ ಮಾಸೂರ, ಕ್ರಷರ್‌ನ ಕಾರಕೂನ ಆಗಿರುವ ಕರಡಿಗುಡ್ಡ ಗ್ರಾಮದ ಶಂಕರಗೌಡ ಶಿವನಗೌಡ ಗೌಡ್ರ ಹಾಗೂ ಸ್ಪೋಟಕ ವಸ್ತು ಪೂರೈಸಿದ್ದ ಬಾಗಲಕೋಟೆಯ ನವೀನ ಕುಮಾರ ಎ. ವಾಲಿ ಮೇಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

ಈ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ಶಂಕರಗೌಡ ಶಿವನಗೌಡ ಗೌಡ್ರ ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರು ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications