ಧಾರವಾಡಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ಧಾರವಾಡ, ಮಾರ್ಚ್ 31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುಗಾದಿ ಹಬ್ಬದ ಸಂದರ್ಭದಲ್ಲಿಯೇ ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದೆ. ಈ ಕುರಿತು ಧಾರವಾಡ ಸಂಸದ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲ ಶಕ್ತಿ ಸಚಿವ ಸಿ. ಆರ್. ಪಾಟೀಲ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಪ್ರಹ್ಲಾದ್ ಜೋಶಿ, 'ಧಾರವಾಡ ಜಿಲ್ಲೆಯ ರೈತರಿಗೆ ಯುಗಾದಿಯ ಈ ಸಂದರ್ಭದಲ್ಲಿ ಸಂತೋಷದ ಸುದ್ದಿ. ನನ್ನ ವಿನಂತಿಗೆ ಸ್ಪಂದಿಸಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ಹಲವು ಕಾಮಗಾರಿಗೆ ಒಪ್ಪಿಗೆ ಸಿಕ್ಕಿದ್ದು, ಇದರಿಂದ ಸುಮಾರು 6 ಸಾವಿರಕ್ಕಿಂತ ಹೆಚ್ಚು ರೈತರು ಲಾಭ ಪಡೆಯಲಿದ್ದಾರೆ' ಎಂದು ಹೇಳಿದ್ದಾರೆ.

ಯಾವ-ಯಾವ ಯೋಜನೆಗಳು: ಸಚಿವ ಪ್ರಹ್ಲಾದ್ ಜೋಶಿ ಅವರ ಪೋಸ್ಟ್‌ನ ಮಾಹಿತಿಯಂತೆ, ಧಾರವಾಡ ಜಿಲ್ಲೆಯ ಸುಮಾರು 2244 ಹೆಕ್ಟೇರ್ ಜಮೀನುಗಳಿಗೆ 50 ಮೇಲ್ಮೈ ಸಣ್ಣ ನೀರಾವರಿ (ಎಸ್‌ಎಂಐ) ಯೋಜನೆಗಳಾದ ಚೆಕ್ ಡ್ಯಾಮ್,ಬ್ಯಾರೇಜ್ ಮತ್ತು ಬಂದರು ನಿರ್ಮಾಣ ಕಾರ್ಯಗಳಿಗೆ ಕೇಂದ್ರ ಜಲ ಶಕ್ತಿ ಸಚಿವ ಸಿ. ಆರ್. ಪಾಟೀಲ್ ಅವರು ಅನುಮೋದನೆ ನೀಡಿದ್ದಾರೆ.
76 ಕೋಟಿ ರೂಪಾಯಿಯ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ 45.81 ಕೋಟಿ ಅನುದಾನವನ್ನು ನೀಡಲು ಒಪ್ಪಿಗೆ ನೀಡಿದ್ದು, ನಮ್ಮ ರೈತರಿಗೆ ಇದು ವರದಾನವಾಗಲಿದೆ. ನಮ್ಮ ಜಿಲ್ಲೆಯು ಮಳೆ ಆಶ್ರಿತ ಕೃಷಿ ಭೂಮಿಯನ್ನು ಹೆಚ್ಚಾಗಿ ಹೊಂದಿದ್ದು ಮುಂಗಾರು ಮಳೆಯ ನೀರನ್ನು ಶೇಖರಿಸಿ ರೈತರಿಗೆ ವಿಶೇಷವಾಗಿ ಮುಂಗಾರು ಮುಗಿಯುವ ಮತ್ತು ಹಿಂಗಾರು ಆರಂಭದ ಸಂದರ್ಭದಲ್ಲಿ ನೀರಿನ ಸರಬರಾಜು ಮಾಡಲು ಈ ಯೋಜನೆಗಳು ಅನಕೂಲವಾಗಲಿವೆ ಹಾಗೂ ಹಳ್ಳದ ದಂಡಿಯ ಹೊಲಗಳಿಗೆ ಮಳೆ ಇಂದ ಉಂಟಾಗುವ ಹಾನಿ ತಪ್ಪಿಸಲು ಈ ಯೋಜನೆ ಪರಿಣಾಮಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
'ನನ್ನ ವಿನಂತಿಯ ಮೇರೆಗೆ ಈ ಯೋಜನೆಗಳ ಕುರಿತು ಬಜೆಟ್ ನಂತರ ಪ್ರಥಮ ಪ್ರಾತಿನಿಧ್ಯ ನೀಡುವದಾಗಿ ಕೇಂದ್ರ ಸಚಿವರು ಆಶ್ವಾಸಗೆ ನೀಡಿದಂತೆ ಈಗ ಈ ಯೋಜನೆಗಳು ಧಾರವಾಡ ರೈತರಿಗೆ ದೊರಿತಿದ್ದು, ನಾನು ಈ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಜಲ ಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ ಅವರಿಗೆ ನಮ್ಮ ಜಿಲ್ಲೆಯ ರೈತರ ಪರ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಯೋಜನೆಗಳ ಅನುಮೋದನೆಗಾಗಿ ಸತತವಾಗಿ ಪ್ರಯತ್ನಿಸಿದ ಕುಂದಗೋಳದ ಶಾಸಕರಾದ ಎಮ್. ಆರ್. ಪಾಟೀಲ ಅವರ ಪ್ರಯತ್ನ ಅಭಿನಂದನಾರ್ಹ' ಎಂದು ಪ್ರಹ್ಲಾದ್ ಜೋಶಿ ಪೋಸ್ಟ್ ಹಾಕಿದ್ದಾರೆ.
ಏನಿದು ಪಿಎಂಕೆಎಸ್‌ವೈ ಯೋಜನೆ?: ಕೇಂದ್ರ ಸರ್ಕಾರ 2015-16ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಆರಂಭಿಸಿತು. ಜಮೀನಿನಲ್ಲಿ ನೀರಿನ ಭೌತಿಕ ಪ್ರವೇಶವನ್ನು ಹೆಚ್ಚಿಸಲು ಮತ್ತು ಖಚಿತ ನೀರಾವರಿ ಅಡಿಯಲ್ಲಿ ಕೃಷಿ ಪ್ರದೇಶವನ್ನು ವಿಸ್ತರಿಸಲು, ಜಮೀನಿನಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸಲು, ಸುಸ್ಥಿರ ಜಲ ಸಂರಕ್ಷಣಾ ಪದ್ಧತಿಗಳನ್ನು ಪರಿಚಯಿಸಲು ಯೋಜನೆ ಜಾರಿಗೊಳಿಸಲಾಗಿದೆ.
ಪಿಎಂಕೆಎಸ್‌ವೈಯನ್ನು ಜಲಶಕ್ತಿ ಸಚಿವಾಲಯವು ಜಾರಿಗೊಳಿಸುತ್ತಿದೆ. ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ ಮತ್ತು ಹರ್ ಖೇತ್ ಕೋ ಪಾನಿ ಎಂಬ ಎರಡು ಮಹತ್ವದ ವಿಭಾಗವನ್ನು ಈ ಯೋಜನೆ ಒಳಗೊಂಡಿದೆ.
ಇದರಡಿಯಲ್ಲಿ ಕಮಾಂಡ್ ಏರಿಯಾ ಅಭಿವೃದ್ಧಿ ಮತ್ತು ನೀರು ನಿರ್ವಹಣೆ, ಮೇಲ್ಮೈ ಸಣ್ಣ ನೀರಾವರಿ, ಜಲಮೂಲಗಳ ದುರಸ್ತಿ, ನವೀಕರಣ ಮತ್ತು ಪುನಃಸ್ಥಾಪನೆ ಮತ್ತು ಅಂತರ್ಜಲ ಅಭಿವೃದ್ಧಿ ಎಂದು ಘಟಕಗಳನ್ನು ಮಾಡಿಕೊಂಡು ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ನೀಡಲಾಗುತ್ತದೆ.












Click it and Unblock the Notifications