NWKRTC Good News: ಯುಗಾದಿ - ರಂಜಾನ್ ಹಬ್ಬಕ್ಕೆ ವಿಶೇಷ ಸೇವೆ, UPI ಬಳಕೆ!
NWKRTC: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಗುಡ್‌ನ್ಯೂಸ್ ಕೊಟ್ಟಿದೆ. 2025ನೇ ಸಾಲಿನ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ನಡೆಸಲು ಮುಂದಾಗಿದೆ. 2025ನೇ ಸಾಲಿನ ಯುಗಾದಿ ಮತ್ತು ರಂಜಾನ ಹಬ್ಬದ ಪ್ರಯುಕ್ತ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳುವುದರಿಂದ, ವಾ.ಕ.ರ.ಸಾ.ಸಂಸ್ಥೆಯಿಂದ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಬಸ್ ಸೇವೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪರಿಚಯಿಸಿದೆ. ಹುಬ್ಬಳ್ಳಿ - ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಅನುಕೂಲವಾಗಲಿದೆ.
NWKRTCಯಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ಭಾಗಗಳಿಂದ ಸುಮಾರು 137 ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಾರ್ಚ್ 28 ರಂದು ಶುಕ್ರವಾರ ಮತ್ತು ಮಾರ್ಚ್ 29 ರಂದು ಶನಿವಾರ ವಾರಂತ್ಯ ದಿನಗಳು ಹಾಗೂ ಮಾರ್ಚ್ 30 ರಂದು ಭಾನುವಾರ ಯುಗಾದಿ ಹಬ್ಬ ಮತ್ತು ಮಾರ್ಚ್ 31ರಂದು ಸೋಮವಾರ ರಂಜಾನ್ ಹಬ್ಬವಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರಿನಿಂದ ರಾಜ್ಯ/ಅಂತರರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಮಾರ್ಚ್ 28 ರಿಂದ ಮಾರ್ಚ್ 30 ರವರೆಗೆ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಿಶೇಷ ಸಾರಿಗೆಗಳ ಸದುಪಯೋಗ ಪಡಿಸಿಕೊಳ್ಳುವದರೊಂದಿಗೆ, ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ಮತ್ತು ವಿಶೇಷ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೇಳಿದೆ.
UPI ಮೂಲಕ ಹಣ ಪಾವತಿಸುವ ವ್ಯವಸ್ಥೆ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ಗಳಲ್ಲಿ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಿ, ಸಾರಿಗೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆಯನ್ನು ಉತ್ತಮಪಡಿಸಲು ನಗದುರಹಿತ "UPI" ವಹಿವಾಟುಗಳ ಮೂಲಕ ಟಿಕೆಟ್ ವಿತರಣೆ ಪರಿಚಯಿಸಿದ್ದು. ಇದರಿಂದ ಭರ್ಜರಿ ಆದಾಯ ಸಂಗ್ರಹವಾಗಿದೆ.
2023 ರಿಂದ ಈ ಸೇವೆ ಪ್ರಾರಂಭವಾಗಿದ್ದು. ಪ್ರಸ್ತುತ ಸಂಸ್ಥೆಯ 50 ಘಟಕಗಳಲ್ಲಿ ನಿರ್ವಹಿಸಲಾಗುತ್ತಿದೆ. ಈ ವರ್ಷ ಮಾರ್ಚ್ 20 ವರೆಗೆ UPI ವಹಿವಾಟಿನಿಂದ ಒಟ್ಟು 1.06 ಕೋಟಿ ವಹಿವಾಟು (Transaction) ಗಳಿಂದ ರೂ. 104.68 ಕೋಟಿ ಸಂಗ್ರಹವಾಗಿದೆ. ಅಲ್ಲದೇ, ಸಂಸ್ಥೆಯ ವಿವಿಧ ವಿಭಾಗಗಳ ವಾಣಿಜ್ಯ ಆದಾಯದ ಹಣವನ್ನು UPI ಮೂಲಕ ಪಾವತಿಸಿಕೊಳ್ಳುವ ವ್ಯವಸ್ಥೆಯನ್ನು ಆಗಸ್ಟ್ 2024 ರಿಂದ ಪ್ರಾರಂಭಿಸಲಾಗಿದ್ದು ಫೆಬ್ರವರಿ-2025 ರ ಅಂತ್ಯದವರೆಗೆ UPI ವಹಿವಾಟಿನಿಂದ ಒಟ್ಟು 43719 ವಹಿವಾಟು (Transaction) ಗಳಿಂದ ರೂ. 11.98 ಕೋಟಿ ವಾಣಿಜ್ಯ ಆದಾಯ ಸಂಗ್ರಹವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರು ತಿಳಿಸಿದ್ದಾರೆ.












Click it and Unblock the Notifications