ಧಾರವಾಡ; ಕಂಬಾರಗಣವಿ ಸಂಪರ್ಕಕ್ಕೆ ಹೊಸ ಸೇತುವೆ
ಧಾರವಾಡ, ಜುಲೈ 23; ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅಳ್ನಾವರ ತಾಲೂಕಿನ ಕಂಬಾರಗಣವಿ ಸಂಪರ್ಕ ಸೇತುವೆ ಜಲಾವೃತವಾಗಿದೆ. ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಅಧಿಕಾರಿಗಳ ಜೊತೆ ಚರ್ಚಿಸಿದರು.
ಭಾನುವಾರ ಸಚಿವರು ಅಳ್ನಾವರ ತಹಶೀಲದ್ದಾರ್ ಬಸವರಾಜ ಬೆಣ್ಣಿಶಿರೂರ, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ತಳಕಲ್ಲ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಾಟೀಲ ಜೊತೆ ಕಂಬಾರಗಣವಿ ಗ್ರಾಮದ ಸೇತುವೆ ಪರಿಶೀಲಿಸಿದರು. ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಪ್ರತಿ ವರ್ಷ ಮಳೆಗಾಲದಲ್ಲಿ ಅಳ್ನಾವರ ತಾಲೂಕಿನ ಕಂಬಾರಗಣವಿ ಸಂಪರ್ಕದ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ, ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಇದಕ್ಕಾಗಿ 1.5 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ" ಎಂದು ಹೇಳಿದರು.
"ಕಂಬಾರಗಣವಿ ಗ್ರಾಮ ಅರಣ್ಯ ಪ್ರದೇಶದಲ್ಲಿ ಇದೆ. ನಿರಂತರವಾಗಿ ಮಳೆ ಆದರೆ ಸುತ್ತಲಿನ ಮಳೆ ನೀರು ಇದೇ ಸೇತುವೆ ಮೂಲಕ ಹೋಗುತ್ತದೆ. 30 ಮೀಟರ್ ಉದ್ದದ ಮತ್ತು 5 ಮೀಟರ್ ಅಗಲದ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಸ್ವಲ್ಪ ಮಳೆ ಕಡಿಮೆ ಆದ ತಕ್ಷಣ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದರು.
"ಹೊಸ ಸೇತುವೆ ಕಾಮಗಾರಿ ಆರಂಭಿಸುವ ತನಕ ಸೇತುವೆ ಬಗ್ಗೆ ನಿಗಾವಹಿಸಿ. ಅತಿಯಾದ ನೀರು ಹರಿದುಬಂದು ರಸ್ತೆ ಬಂದ್ ಆದರೆ ತಕ್ಷಣ ಸೇತುವೆಗೆ ಸಿಲುಕಿದ ಕಟ್ಟಿಗೆ, ಕಸ, ಕಡ್ಡಿಗಳನ್ನು ತೆಗೆದು ಗ್ರಾಮಸ್ಥರ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಸಚಿವರು ತಿಳಿಸಿದರು.
ಅಂಗನವಾಡಿ, ಶಾಲಾ ಕೊಠಡಿ ದುರಸ್ತಿ; ಸಚಿವ ಸಂತೋಷ್ ಲಾಡ್ ಜಿಲ್ಲೆಯ ಅಂಗನವಾಡಿ ಮತ್ತು ಶಾಲಾ ಕಟ್ಟಡಗಳ ದುರಸ್ತಿ ಬಗ್ಗೆಯೂ ಮಾತನಾಡಿದರು. "ಕುಂಬಾರಗಣವಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಕಳೆದ ವರ್ಷ ನೂತನ ಕಟ್ಟಡ ನೀಡಲಾಗಿದೆ. ಕಟ್ಟಡದ ಸುತ್ತ ಮಳೆ ನೀರು ಸಂಗ್ರಹ ವಾಗುತ್ತಿದ್ದು, ಇದ್ದನ್ನು ತೆರವುಗೊಳಿಸಿ ಕಟ್ಟಡದ ಸುತ್ತ ಆವರಣ ಗೋಡೆ ನಿರ್ಮಿಸಲು ನೂತನ ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶ ನೀಡಲಾಗಿದೆ" ಎಂದರು.
"ಜಿಲ್ಲೆಯ ಎಲ್ಲ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸಾಮರ್ಥ್ಯ ಹಾಗೂ ಬಳಸಲು ಯೋಗ್ಯವಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶಿಥಿಲಗೊಂಡ 62 ಅಂಗನವಾಡಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 19 ಕಟ್ಟಡಗಳ ದುರಸ್ತಿಗೆ ಕ್ರಮವಹಿಸಲಾಗಿದೆ. 32 ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಮತ್ತು 11 ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ" ಎಂದು ಸಚಿವರು ವಿವರಣೆ ನೀಡಿದರು.
ಸಚಿವರು ಮಾತನಾಡಿ, "ಅಪಾಯದ ಸ್ಥಿತಿಯಲ್ಲಿರುವ ಅಂಗನವಾಡಿ ಕಟ್ಟಡಗಳ ಬದಲಿಗೆ ಬೇರೆ ಕಟ್ಟಡಗಳಲ್ಲಿ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದು ಅದರಂತೆ ಕ್ರಮವಹಿಸಿ ವರದಿ ನೀಡಿದ್ದಾರೆ. ಅಳ್ನಾವರ ತಾಲೂಕಿನ ಶಿವನಗರ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಹಾಗೂ ರಸ್ತೆ ನಿರ್ಮಾಣದ ಕುರಿತು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿದ್ದು ಶೀಘ್ರದಲ್ಲಿ ಈ ಸಮಸ್ಯೆ ಬಗೆ ಹರಿಯಲಿದೆ" ಎಂದರು.
"ಜಿಲ್ಲೆಯಲ್ಲಿ ಒಟ್ಟು 763 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 111 ಸರ್ಕಾರಿ ಪ್ರೌಢಶಾಲೆಗಳಿವೆ. ಇವುಗಳ ಪೈಕಿ 126 ಪ್ರಾಥಮಿಕ ಹಾಗೂ 10 ಪ್ರೌಢಶಾಲೆಗಳ ಸುಮಾರು 1135 ಕೊಠಡಿಗಳನ್ನು ದುರಸ್ತಿ ಹಾಗೂ ಕೆಲವು ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರವು ನೀಡಿರುವ ರೂ. 30 ಲಕ್ಷಗಳ ಅನುದಾನವನ್ನು ಉಪಯೋಗಿಸಿಕೊಂಡು 64 ಶಾಲೆಗಳ 177 ಕೊಠಡಿಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ" ಎಂದು ಸಚಿವರು ಹೇಳಿದರು.
"ಎನ್‍ಡಿಆರ್‌ಎಫ್ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ 261 ಶಾಲೆಗಳ 724 ಕೊಠಡಿಗಳ ದುರಸ್ತಿಗೆ ಕ್ರಮಕೈಗೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಶಿಥಿಲ ಕಟ್ಟಡದ ಕಾಮಗಾರಿಗಳ ಪ್ರಗತಿ ಕುರಿತು ಪರಿಶೀಲಿಸಿ ಕ್ರಮವಹಿಸಲು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ" ಎಂದು ಸಚಿವರು ತಿಳಿಸಿದರು.












Click it and Unblock the Notifications