ಶಾಸಕದ ಕ್ಷೇತ್ರದಲ್ಲಿ 25 ವರ್ಷಗಳಿಂದ ದುರಸ್ತಿ ಕಾಣದ ರಸ್ತೆ: ಶವ ಸಾಗಿಸಲು ಗ್ರಾಮಸ್ಥರ ಪರದಾಟ
ಧಾರವಾಡ, ಸೆಪ್ಟಂಬರ್ 01: ಗ್ರಾಮಗಳು ದೇಶದ ಜೀವಾಳ. ಗ್ರಾಮ ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿ ಆದಂತೆ ಎಂಬ ಮಾತಿದೆ. ಆದರೆ ಹಳ್ಳಿಗಳೇ ಆಯಾ ಜನಪ್ರತಿನಿಧಿಗಳ ನಿರ್ಲಕ್ಷ್ಯ ಒಳಗಾಗಿರುವುದು ಇದೇ ಮೊದಲೇನಲ್ಲ. ಅಭಿವೃದ್ಧಿಪರ ಇರಬೇಕಾದವರ ನಾಯಕರು ಗಾಢ ನಿದ್ರೆಗೆ ಜಾರಿದರೆ, ಅಂತಹ ಪ್ರದೇಶಗಳಲ್ಲಿ ಅಭಿವೃದ್ಧಿ ಮರಿಚಿಕೆಯಾಗುತ್ತದೆ. ಇದಕ್ಕೊಂದು ತಾಜಾ ಉದಹಾರಣೆ, ಧಾರವಾಡ ಜಿಲ್ಲೆಯ ಮಜ್ಜಿಗುಡ್ಡ ಗ್ರಾಮ. ಇಲ್ಲಿ ಮೃತರ ಮೃತದೇಹ ರವಾನಿಸಲು ಸರಿಯಾದ ರಸ್ತೆ ಇಲ್ಲದೇ ಗ್ರಾಮಸ್ಥರು ಪರದಾಡಿದ ವಿಡಿಯೋ ಹರಿದಾಡುತ್ತಿದೆ.
ಹೌದು, ಮಜ್ಜಿಗುಡ್ಡ ಗ್ರಾಮ ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಶಾಸಕ ಎನ್ ಎಚ್ ಕೋನರೆಡ್ಡಿ ಅವರು ಪ್ರತಿನಿಧಿಸುವ ಈ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳೇ ಸರಿಯಾಗಿಲ್ಲ ಎಂಬುದು ಜಗಜ್ಜಾಹಿರಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಸಾಮಾನ್ಯ ಎನ್ನಬಹುದು. ಡಾಂಬರು ರಸ್ತೆಗಳು ಕಾಂಕ್ರೀಟು ರಸ್ತೆಗಳು ಆಗುತ್ತಿರುವ ಇಂದಿನ ದಿನಮಾನದಲ್ಲಿ ಕೆಸರು ಗದ್ದೆಯಂತಿರುವ ರಸ್ತೆಯಲ್ಲಿಯೇ ಶವ ಸಾಗಿಸಿದ ವಿಡಿಯೋ ಹರಿದಾಡುತ್ತಿದೆ.

ನವಲಗುಂದ ಕ್ಷೇತ್ರದ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮವು ಬದ್ರಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಒಂದು ಗ್ರಾಮವಾಗಿದೆ. ಇಲ್ಲಿ ಯಾರಾದರೆ ಮೃತಪಟ್ಟರೆ ಅವರನ್ನು ಸ್ಮಶಾನಕ್ಕೆ ಒಯ್ದು ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಇಂತಹ ಕಾರ್ಯಕ್ಕೆ ಜನರಿಗೆ ಮೂಲಸೌಕರ್ಯ ಇಲ್ಲದೇ ಪರದಾಡುತ್ತಿದ್ದಾರೆ.
100 ರಸ್ತೆ ಅಭಿವೃದ್ಧಿ ಎಂದು ಶಾಸಕರ ಸುಳ್ಳು ಹೇಳಿಕೆ?
ಗ್ರಾಮಸ್ಥರಿಗೆ ಸ್ಮಶಾನಕ್ಕೆ ತೆರಳಲು ರಸ್ತೆಯೇ ಇಲ್ಲದೇ ಚಕ್ಕಡಿ ದಾರಿಯಲ್ಲಿ, ಕೆಸರಿನಲ್ಲಿ ಶವ ಹೊತ್ತು ಸಾಗಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ. ನವಲಗುಂದ ಕ್ಷೆತ್ರದಲ್ಲಿ 100 ಕೋಟಿ ಖರ್ಚು ಚಕ್ಕಡಿ ದಾರಿ ಅಭಿವೃದ್ಧಿ ಮಾಡಿಸುತ್ತಿದ್ದೆನೆ ಎಂದು ಶಾಸಕರು ಹೇಳಿದ್ದಾರೆ.
25 ವರ್ಷಗಳಿಂದ ಇದೇ ಸಮಸ್ಯೆ
ಮತ್ತೊಂದು ಕಡೆ ಜನರು ಪರದಾಡುತ್ತಿದ್ದಾರೆ. ಸುಮಾರು 25 ವರ್ಷಗಳಿಂದ ಇಂತಹ ರಸ್ತೆಯಲ್ಲೆ ತೆರಳಿ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿರುವ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವಲಗುಂದ ಕ್ಷೆತ್ರದ ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸ್ಮಶಾನದ ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಕ್ಷೇತ್ರದ ಪ್ರಮುಖ ರಸ್ತೆಯಲ್ಲಿ 3 ಅಡಿ ತೆಗ್ಗು ಬಿದ್ದಿದೆ. ಇನ್ನೂ ಕ್ಷೇತ್ರದಲ್ಲಿ ಇರುವ ಚಕ್ಕಡಿ ದಾರಿಗಳನ್ನು ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಶಾಸಕರು ತಿರುಗಾಡುತ್ತಿದ್ದಾರೆ. ಏಕೆ ಅವರಿಗೆ ಅನುದಾನ ಸಿಗಲಿಲ್ಲವೇ. ಇಲ್ಲಿನ ಜನರ ಕಷ್ಟಗಳು ಅವರಿಗೆ ಕಾಣುತ್ತಿಲ್ಲವೇ ಎಂದು ಜನರ ಪ್ರಶ್ನೆ ಮಾಡಿದ್ದಾರೆ.
ಸತ್ತವರ ಮೃತ ದೇಹ ಹೂಳಲು ಗ್ರಾಮಸ್ಥರು ಪರದಾಡುತ್ತಿದ್ದಾರೆ. ಸರಿಯಾದ ಮೂಲಸೌಕರ್ಯ ಇಲ್ಲದೇ ಪರದಾಡುತ್ತಿರುವ ಗ್ರಾಮಸ್ಥರು ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕ್ಕೊಂಡಿದ್ದಾರೆ. ಸದ್ಯ ಮಳೆ ಬಂದಾಗ ಹಾಳಾದ ಸ್ಮಶಾನದ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಇದರಲ್ಲಿಯೇ ತೆರಳಿ ಮಣ್ಣು ಮಾಡಬೇಕಾದ ದುಸ್ಥಿತಿ ಗ್ರಾಮದವರದ್ದಾಗಿದೆ.
ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












Click it and Unblock the Notifications