LS Poll 2024: ಮಂಡ್ಯ ಟಿಕೆಟ್ ಗೊಂದಲ ಬಗ್ಗೆ ಕೇಂದ್ರ ಸಚಿವ ಹೇಳಿದ್ದೇನು?
ಧಾರವಾಡ, ಫೆಬ್ರವರಿ 27: 2019ರ ಲೋಕಸಭಾ ಚುನಾವಣೆಯಿಂದ ಮಂಡ್ಯ ವಿಧಾನಸಭಾ ಕ್ಷೇತ್ರವು ಮುನ್ನೆಲೆಗೆ ಬರುತ್ತಿದೆ, ಇದೊಂದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಮಾಡಿಕೊಂಡಿದ್ದು, ಮಂಡ್ಯ ಜೊತೆಗೆ ಹಾಸನ ಲೋಕಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆಯು ಗೊಂದಲದಿಂದ ಕೂಡಿದೆ ಎಂಬ ಮಾತುಗಳ ಕೇಳಿ ಬಂದಿವೆ. ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಹಾಸನ ಮತ್ತು ಮಂಡ್ಯ ಎಂಪಿ ಟಿಕೆಟ್ ಹಂಚಿಕೆ ಗೊಂದಲ ಕುರಿತು ಈಗ ಚರ್ಚೆ ನಡೆಯುತ್ತಿದೆ. ಇದು ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಸಿಕ್ಕಂತಾಗುತ್ತಿದೆ. ಪಕ್ಷದ ಮುಖಂಡರು ಸೇರಿ ಈ ಸಮಸ್ಯೆ ಇತ್ಯರ್ಥಪಡಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಜೆಡಿಎಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯಂತಹ ಪ್ರಬುದ್ಧ ರಾಜಕೀಯ ನಾಯಕರಿದ್ದಾರೆ. ನಮ್ಮಲ್ಲಿಯೂ ಬಿಎಸ್ ಯಡಿಯೂರಪ್ಪ ಅವರಂತಹ ಹಿರಿಯರಿದ್ದಾರೆ. ನಾವೆಲ್ಲ ಸೇರಿ ಏನೇ ಸಮಸ್ಯೆಯಿದ್ದರೂ ಇತ್ಯರ್ಥಪಡಿಸುತ್ತೇವೆ. ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಯತ್ನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂ, ಮಠ, ಮಂದಿರ, ಸನಾತನ ಧರ್ಮ ಮುಗಿಸುತ್ತೇವೆ ಎಂದಿದ್ದರು. ಈ ಬಗ್ಗೆ ಅವರ ಡಿಎಂಕೆ ಪಾಲುದಾರರು ಹೇಳಿದ್ದರು. ಅವರ ಅನೇಕ ಪಾಟ್ನರ್ ಗಳು ಹೇಳಿಕೆ ಕೊಟ್ಟಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಸಹ ಇದಕ್ಕೆ ಬೆಂಬಲಿಸಿದ್ದರು ಎಂದು ಅವರು ಕಿಡಿ ಕಾರಿದರು.

ದೇವಸ್ಥಾನದ ಹುಂಡಿಗೆ ಕನ್ನ ಹಾಕುವುದರ ಹಿಂದೆ ವ್ಯವಸ್ಥಿತ ಯೋಜನೆಯಾಗಿದೆ. ಹಿಂದೂ, ಮಠ ಮಂದಿರ ಸಂಪತ್ತು ಕಡಿಮೆ ಮಾಡಲು ಹೊರಟಿದ್ದಾರೆ.ಈ ಮೂಲಕ ಸನಾತನ ಧರ್ಮದ ಶ್ರದ್ಧೆ ಹೆಚ್ಚಾಗದಂತೆ ತಡೆಯಲು ಹೊರಟಿದ್ದಾರೆ. ಸನಾತನ ಧರ್ಮ, ಹಿಂದೂತ್ವ ವಿರೋಧಿಸುವ ತೀರ್ಮಾನದಿಂದ ಇದೆಲ್ಲ ಮಾಡಿದ್ದಾರೆ.ಆದರ ಇದೆಲ್ಲ ನಡೆಯಲು ಬಿಡುವುದಿಲ್ಲ.
ಕಾಂಗ್ರೆಸ್‌ಗೂ ಜನ ಬುದ್ಧಿ ಕಲಿಸುತ್ತಾರೆ
ಇಂದಿರಾ ಗಾಂಧಿಯಂತವರನ್ನೇ ಜನರು ಮನೆಗೆ ಕಳುಹಿಸಿದ್ದಾರೆ.ಅವರು ಬಲಾಢ್ಯ ಇದ್ದರೂ ಭಗವಾಧ್ವಜ ಒಂದೀಚು ಜಾಗದಲ್ಲಿ ಹಾರಲು ಬಿಡುವುದಿಲ್ಲ ಎಂದಿದ್ದರು. ಅವರಿಗೆ ಜನ ಬುದ್ಧಿ ಕಲಿಸಿದ್ದರು. ಈಗ ಕಾಂಗ್ರೆಸ್ ಗೂ ಜನ ಬುದ್ಧಿ ಕಲಿಸುತ್ತಾರೆ ಎಂದು ಪ್ರಹ್ಲಾದ್ ಜೋಶಿಯವರು ಭವಿಷ್ಯ ನುಡಿದರು.
ಕಳೆದ ಬಾರಿ ಪಕ್ಷೇತರವಾಗಿ ಮಂಡ್ಯದಲ್ಲಿ ಸ್ಪರ್ಧಿಸಿ ಗೆದ್ದಿದ್ದ ಸುಮಲತಾ ಅಂಬರೀಶ್ ಅವರು ಈ ಬಾರಿ ಮಂಡ್ಯದಿಂದ ನಿಲ್ಲಲು ಕಸರತ್ತು ನಡೆಸಿದ್ದಾರೆ. ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ. ಇವರಿಗೆ ಕಳೆದ ಬಾರಿ ಜೆಡಿಎಸ್ ವಿರೋಧ ಪಕ್ಷ, ಬಿಜೆಪಿ ಬೆಂಬಲಿತ ಪಕ್ಷವಾಗಿತ್ತು.
ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಹಾಗಾದರೆ ಬಿಜೆಪಿ ಬೆಂಬಲಿತ ಸುಮಲತಾಗೆ ಮಂಡ್ಯ ಸಿಗಲಿದೆಯೋ? ಅಥವಾ ಮೈತ್ರಿ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸಿಗಲಿದೆಯೆ? ಎಂಬುದೆ ಕುತೂಹಲ ಕೆರಳಿಸಿದೆ.












Click it and Unblock the Notifications