ಧಾರವಾಡ ಜಿಲ್ಲೆಯ ಈ 7 ಕ್ಷೇತ್ರಗಳಲ್ಲಿ ನೋಟಾ ಮತಗಳಿಂದ ಸಂಕಷ್ಟಕ್ಕೆ ಸಿಲುಕಿದ ಅಭ್ಯರ್ಥಿಗಳ ವಿವರ
ಹುಬ್ಬಳ್ಳಿ, ಮೇ, 18: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ವಿಧಾನಸಭಾ ಚುನಾವಣೆ ಬಹುತೇಕ ಪೂರ್ಣಗೊಂಡಿದ್ದು, ಸಚಿವ ಸಂಪುಟದ ವಿಸ್ತರಣೆಯೊಂದೆ ಬಾಕಿ ಉಳಿದಿದೆ. ಇದರ ಮಧ್ಯದಲ್ಲಿ ಈಗ ಮತ್ತೊಂದು ಗಮನಾರ್ಹ ವಿಷಯವೊಂದು ಬೆಳಕಿಗೆ ಬಂದಿದ್ದು, ಅಭ್ಯರ್ಥಿಗಳಲ್ಲಿ ಶೇಕಡಾ 80ರಷ್ಟು ತಮ್ಮ ಠೇವಣಿ ಕಳೆದುಕೊಂಡಿರುವುದು ಗಮನ ಸೆಳೆದಿದೆ.
ಜನಪ್ರತಿನಿಧಿ ಆಗಬೇಕೆಂಬ ಉದ್ದೇಶದಿಂದ ಧಾರವಾಡ ಜಿಲ್ಲೆಯಲ್ಲಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಶೇಕಡಾ 80ರಷ್ಟು ಠೇವಣಿ ಕಳೆದುಕೊಂಡಿದ್ದು, ಅಭ್ಯರ್ಥಿಗಳು ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿರುವುದು ಗಮನಾರ್ಹ ಸಂಗತಿ. ನೋಟಾ ಮತಗಳು ಬಹಳಷ್ಟು ಅಭ್ಯರ್ಥಿಗಳ ಠೇವಣಿ ನಷ್ಟವಾಗುವಂತೆ ಮಾಡಿವೆ. ಹೀಗೆ ನೋಟಾ ಕಾಟ ತೀವ್ರವಾಗಿ ಬಾಧಿಸಿದೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳಿಗೆ ಆಶಾಭಾವನೆಗಿಂತ ನಿರಾಸೆ ಭಾವವನ್ನು ಹುಟ್ಟು ಹಾಕಿದೆ.

ಇನ್ನು ವಿಧಾನಸಭಾ ಚುನಾವಣೆ ಕಣದಲ್ಲಿ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಾದ ನವಲಗುಂದ, ಕುಂದಗೋಳ, ಕಲಘಟಗಿ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಹಾಗೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಅಂತಿಮವಾಗಿ ಒಟ್ಟು 92 ಅಭ್ಯರ್ಥಿಗಳು ಉಳಿದಿದ್ದರು. ಈ ಪೈಕಿ ಬರೋಬ್ಬರಿ 77 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕ್ಷೇತ್ರದಲ್ಲಿ ಮಾನ್ಯವಾದ ಒಟ್ಟು ಮತಗಳಲ್ಲಿ ಆರನೇ ಒಂದು ಭಾಗ (ಶೇಕಡಾ 16.66) ಮತಗಳನ್ನು ಪಡೆದ ಅಭ್ಯರ್ಥಿಯ ಠೇವಣಿ ಉಳಿಯುತ್ತದೆ. ಸಾಮಾನ್ಯ ಕ್ಷೇತ್ರದಲ್ಲಿ ಅಭ್ಯರ್ಥಿಗೆ 10 ಸಾವಿರ ರೂಪಾಯಿ ಠೇವಣಿ ಇದ್ದರೆ, ಮೀಸಲು ಕ್ಷೇತ್ರದಲ್ಲಿ 5 ಸಾವಿರ ರೂಪಾಯಿ ಠೇವಣಿ ಕಟ್ಟಬೇಕು. ಈ ರೀತಿ ಕಟ್ಟಿದ ಠೇವಣಿ ಹಣವು ಶೇಕಡಾ 16.66 ರಷ್ಟು ಮತ ತೆಗೆದುಕೊಂಡವರಿಗೆ ಮಾತ್ರ ವಾಪಸ್ ನೀಡಲಾಗುವುದು.
ಇಲ್ಲದಿದ್ದರೆ ಚುನಾವಣಾ ಆಯೋಗಕ್ಕೆ ಜಮೆ ಆಗುತ್ತದೆ. ಈ ನಿಟ್ಟಿನಲ್ಲಿ ಶೇಕಡಾ 80ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು, ಬಹುತೇಕರು ನೋಟಾಗಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.
ಶಿರಹಟ್ಟಿ ಮಠದ ಸ್ವಾಮೀಜಿಯಿಂದ ಆಕ್ರೋಶ
ಮತ್ತೊಂದೆಡೆ ನಾನು ಹಿಂದೆ ಯಡಿಯೂರಪ್ಪನ ಕಣ್ಣೀರನಲ್ಲಿ ಬಿಜೆಪಿ ಸರ್ಕಾರಕೊಚ್ಚಿ ಹೋಗುತ್ತದೆ ಎಂದಿದ್ದೆ. ಇವತ್ತು ಆ ಪಕ್ಷದ ನಾಯಕರಿಗೆ ಅರಿವಾಗಿದೆ. ಅಲ್ಲದೆ ಅಧಿಕಾರ ಬಂದ ಸಂದರ್ಭದಲ್ಲಿ ಆ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ತಿನ್ನಬಾರದ ಪೆಟ್ಟು ತಿನ್ನುತ್ತಾರೆ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ಇತ್ತೀಚೆಗಷ್ಟೇ ಹೇಳಿದ್ದರು.
ಹುಬ್ಬಳ್ಳಿ ತಾಲೂಕಿನ ನೂಲ್ವಿ ಹೊರವಲಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಅವತ್ತು ಒಬ್ಬ ವ್ಯಕ್ತಿ ಉದ್ದೇಶಿಸಿ ಮಾತಾಡಿರಲಿಲ್ಲ. ಯಡಿಯೂರಪ್ಪ ಎಲ್ಲರಿಗೂ ಬೇಕಾದ ನಾಯಕರು. ಅವತ್ತು ಎಲ್ಲ ಸಮಾಜದ ನಾಯಕರು ಯಡಿಯೂರಪ್ಪರನ್ನು ಮಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂದಿದ್ದರು. ಆದರೆ ಯಾವುದೋ ಕೆಟ್ಟ ಉದ್ದೇಶ, ಅಥವಾ ಸ್ವಾರ್ಥಕ್ಕೆ ತೆಗೆದುಕೊಂಡ ನಿರ್ಣಯ ಇಂದಿನ ಹೀನಾಯ ಪರಿಸ್ಥಿತಿಗೆ ಕಾರಣವಾಗಿದೆ ಎಂದಿದ್ದರು.
ಹಿಂದೆ ಪರ್ಸೆಂಟೇಜ್ ಬಗ್ಗೆ ದುರಹಂಕಾರಿಯಾಗಿ ಮಾತನಾಡಿದ್ದರು. ಗುಂಡಾ ವೃತ್ತಿಯಲ್ಲಿ ದಾಳಿ ಮಾಡಿದ್ದರು. ಅದರ ಪರಿಣಾಮವೇ ಇಂದು ಕಾಡುತ್ತಿದೆ ಎಂದು ಸ್ವಾಮೀಜಿ ಹೇಳಿದರು. ಅಲ್ಲದೆ ಸ್ವಾಮೀಜಿ ಗಂಭಿರ ಹೇಳಿಕೆ ಮಾಡಿದಾಗ, ಚಿಂತನ ಮಂಥನ ಮಾಡಬೇಕು. ಕೇಸರಿ ಪಡೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಖಾವಿಧಾರಿಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಖಾವಿ ದಾರಿಗಳು ಪಾಠ ಮಾಡಿದ್ದರು, ಆದರೆ ಅವರು ಪಾಠವನ್ನು ಕಲಿಯಲಿಲ್ಲ. ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೆ ಬಿಜೆಪಿ ಇಂದಿನ ಸ್ಥಿತಿಗೆ ಕಾರಣವಾಗಿದೆ. ಯಡಿಯೂರಪ್ಪ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರನ್ನು ಕಡೆಗಣಸಿರೋದೆ ಇದಕ್ಕೆಲ್ಲ ಕಾರಣ. ಪಕ್ಷ ಕಟ್ಟದ ವ್ಯಕ್ತಿ ಮಾತು ಕೇಳಬೇಕು ಅಂದರೆ ಏನು.? ಎಂದ ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಬಿ.ಎಲ್.ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications