Karnataka Rains : ಧಾರವಾಡ, ಹಾವೇರಿ ಸೇರಿ ವಿವಿಧೆಡೆ ಗುಡುಗು ಸಹಿತ ಜೋರು ಮಳೆ, ಕಾಂಗ್ರೆಸ್ 'ಪ್ರಜಾಧ್ವನಿ ಯಾತ್ರೆ' ರದ್ದು
ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿದೆ. ಬುಧವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೋರು ಮಳೆ ಆಗಿದೆ. ಹಲವೆಡೆ ಗುಡುಗು ಸಹಿತ ಮಳೆ ದಾಖಲಾಗಿದೆ.
ಬೆಂಗಳೂರು, ಮಾರ್ಚ್ 15: ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿದೆ. ಬುಧವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೋರು ಮಳೆ ಆಗಿದೆ. ಹಲವೆಡೆ ಗುಡುಗು ಸಹಿತ ಮಳೆ ದಾಖಲಾಗಿದೆ.
ಧಾರವಾಡ, ಕಲಘಟಗಿ, ಹಾವೇರಿ, ಬೆಂಗಳೂರಿನ ಒಂದೆರಡು ಪ್ರದೇಶ, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ದಾಖಲಾಗಿದೆ. ರಾಜ್ಯದ ವಿವಿಧೆಡೆ ಬೆಳಗ್ಗೆಯಿಂದ ಕಂಡು ಬಂದ ಬಿಸಿಲು ಮಧ್ಯಾಹ್ನದ ವೇಳೆ ಮರೆಯಾಗಿತ್ತು. ಸಂಜೆ ನಂತರ ಗುಡುಗು ಮಿಂಚು ಸಹಿತ ಅನೇಕ ಕಡೆಗಳಲ್ಲಿ ಆರ್ಭಟಿಸಿತು.

ಹಾವೇರಿಯ ಹಲವೆಡೆ ಆಲಿಕಲ್ಲು ಸಹಿತ ಜೋರು ಮಳೆ ಆಗಿದೆ. ಜೋರು ಗಾಳಿ ಬೀಸಿದೆ. ಇತ್ತ ಕಲಘಟಗಿಯಲ್ಲೂ ಬಿಟ್ಟು ಮಳೆ ಬಿದ್ದಿದೆ. ಹೀಗೆ ಸಾಕಷ್ಟು ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರಿದೆ. ರೈತರು, ಬೀದಿ ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ಅಕಾಲಿಕ ಮಳೆಯಿಂದ ಕೆಲ ಕಾಲ ತೊಂದರೆ ಉಂಟಾಯಿತು.
ಅಲ್ಲದೇ ಮುಂದಿನ ಮೂರು ದಿನ ಕರಾವಳಿ ಭಾಗದ ಜಿಲ್ಲೆಗಳು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗ ಸಹಿತ ಜೋರು ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ವಿವಿಧ ಪಕ್ಷಗಳ ನಾಯಕರು ಸಕ್ರಿಯರಾಗಿದ್ದಾರೆ. ಅವರು ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳಿಗೂ ವರುಣ ಅಡ್ಡಿಪಡಿಸಿದ್ದಾನೆ ಎಂದು ತಿಳಿದು ಬಂದಿದೆ.

ಮಳೆಗೆ ಪ್ರಜಾಧ್ವನಿ ಕಾರ್ಯಕ್ರಮ ರದ್ದು
ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಕಾರ್ಯಕ್ರಮ ಮಳೆಯಿಂದ ರದ್ದಾಗಿದೆ. ಇಲ್ಲಿ ಬುಧವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಬಿದ್ದಿದೆ. ಹೀಗಾಗಿ ಪ್ರಜಾಧ್ವನಿ ಕಾರ್ಯಕ್ರಮ ರದ್ದಾಗಿದೆ. ಇನ್ನೂ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿನ ಕಾರ್ಯಕ್ರಮಕ್ಕೆ ಸಾವಿರಾರು ಜನರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡಲು ಹೊರಟಿದ್ದ ಸಂತೋಷ ಲಾಡ್ ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಉಂಟು ಮಾಡಿದೆ.
ಇನ್ನೂ ಇದೇ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾರಂಭದಲ್ಲಿ ಕರ್ತವ್ಯ ನಿರತ ಪತ್ರಕರ್ತನ ಮೇಲೆ ಕಲಘಟಗಿಯ ಪೋಲಿಸ್ ಇನ್ಸಪೆಕ್ಟರ್ ದರ್ಪ ಮೆರೆದಿದ್ದಾರೆ. ಕಾರ್ಯಕ್ರಮದ ವರದಿಗೆ ಖಾಸಗಿ ವಾಹಿನಿಯ ಪತ್ರಕರ್ತರು ತೆರಳಿದ್ದರು. ಈ ವೇಳೆ ಏಕಾಏಕಿ ಮಳೆಬಂದ ಹಿನ್ನೆಲೆಯಲ್ಲಿ ಜನರು ವಾಹನಗಳತ್ತ ಮುಖ ಮಾಡಿದ್ದರು. ಈ ವೇಳೆ ಜನರ ವಿಡಿಯೋ ಮಾಡುತ್ತಿದ್ದ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರಿಗೆ ಏಕಾಏಕಿ ಕಲಘಟಗಿ ಪೋಲಿಸ್ ಠಾಣೆಯ ಸಿಪಿಐ ಎಸ್.ಎಸ್.ಕೌಜಲಗಿ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications