Monsoon Rain: ಆಗಸ್ಟ್‌ವರೆಗೆ ಭಾರೀ ಮಳೆ ಮುನ್ಸೂಚನೆ: ಸನ್ನದ್ಧರಾಗಲು ಡಿಸಿ ಕರೆ
ಧಾರವಾಡ, ಮೇ 13: ಕರ್ನಾಟಕ ರಾಜ್ಯಾದ್ಯಂತ ಮುಂಗಾರು ಮಳೆಯ ಋತುವಿನಲ್ಲಿ ಭಾತೀ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಪ್ರಕಾರ, ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುವ ಲಕ್ಷಣಗಳು ಇವೆ ಎಂಬ ಕಾರಣಕ್ಕೆ ಎಂತದ್ಧೆ ಪರಿಸ್ಥಿತಿ ಎದುರಿಸಲು ಸಿದ್ಧವಾಗುವಂತೆ ಜಿಲ್ಲಾಧಿಕಾರಿಗಳು ಖಡಕ್ ತಾಕೀತು ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಕೆಲವೇ ಗಂಟೆ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾದವರು. ಜನ ಜಾನವಾರುಗಳು ಸಂಕಷ್ಟ ಅನುಭವಿಸಬೇಕಾಯಿತು. ವಾಹನ ಸಂಚಾರಕ್ಕೆ ಅಡ್ಡಿ ಆಯಿತು. ಕೃಷಿ-ತೋಟಗಾರಿಕೆ ಬೆಳೆಗೆ ಹಾನಿ ಉಂಟಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು. ಒಟ್ಟಾರೆ ಎರಡೇ ಮಳೆಗೆ ಎಲ್ಲ ವರ್ಗದ ಜನರಿಗೆ ತೊಂದರೆ ಆಗಿದೆ.

ಬರಗಾಲದಿಂದ ಮೊದಲೇ ಕಂಗೆಟ್ಟಿರುವ ಜನರಿಗೆ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಬಾಧಿಸದಂತೆ, ವಿಪುತ್ತು ಸ್ಥಿತಿ ನಿರ್ವಹಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಧಾರವಾಡ ಜಿಲ್ಲಾಧಿಕಾರಿಗಳ ದಿವ್ಯ ಪ್ರಭು ಅವರು ಸೋಮವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೂರು ತಿಂಗಳು ಕಾಲ ಹೆಚ್ಚು ಮಳೆ ಸಂಭವ
ಕರ್ನಾಟಕದಲ್ಲಿ ಜೂನ್, ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳು ಇದೆ. ಮಳೆ, ಗುಡುಗು, ಮಿಂಚು ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಜೀವ ಹಾನಿಯಾಗದಂತೆ ತಡೆಯಲು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಈ ಕುರಿತು ಎಲ್ಲ ತಹಶೀಲ್ದಾರರು, ತಾ.ಪಂ. ಇಓಗಳು, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಧ್ವನಿವರ್ಧಕ ಬಳಸಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತ ಸಂಬಂಧಿತ ಎಲ್ಲ ಸಂಘ, ಸಂಸ್ಥೆಗಳಲ್ಲಿ ಮಳೆ, ಗುಡುಗು, ಮಿಂಚಿನಿಂದ ತಪ್ಪಿಸಿಕೊಳ್ಳಲು ಮುಂಜಾಗೃತ ಕ್ರಮಗಳನ್ನು ಪ್ರಚಾರಗೊಳಿಸಬೇಕು.
ಗ್ರಾಮಗಳಲ್ಲಿ ಕೆರೆಗಳು ಭರ್ತಿಯಾಗುವ ಹಾಗೂ ದುರ್ಬಲ ಬಂಡ/ಬದುಗಳನ್ನು ಮುಂಜಾಗೃತವಾಗಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಈಗಲೇ ದುರಸ್ಥಿ ಕಾರ್ಯ ಕೈಗೊಳ್ಳಲಬೇಕು ಎಂದು ಹೇಳಿದರು.
ಪ್ರವಾಹ ಪೀಡಿತ 78 ಗ್ರಾಮಗಳನ್ನು ಪರಿಶೀಲಿಸಿ
ಜಿಲ್ಲೆಯಲ್ಲಿ 2019 ಹಾಗೂ 2021ರಲ್ಲಿ 78 ಗ್ರಾಮಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿತ್ತು. ತಹಶೀಲ್ದಾರರು ಹಾಗೂ ತಾ.ಪಂ ಇಓಗಳು ತಮ್ಮ ವ್ಯಾಪ್ತಿಯ ಪ್ರವಾಹ ಸಂಭವನಿಯ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸತಬೇಕು. ಮುಂಜಾಗೃತ ಕ್ರಮಗಳು ಹಾಗೂ ಪರ್ಯಾಯ ವ್ಯವಸ್ಥೆಗಳ ಬಗ್ಗೆ ವರದಿ ಸಿದ್ಧಪಡಿಸಿಕೊಳ್ಳಬೇಕು. ಈ ಮೂಲಕ ರೈತರು, ಗ್ರಾಮೀಣ ಭಾಗದ ಜನರ ರಕ್ಷಣೆಗೆ ಅವರು ಕರೆ ನೀಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ರಾಜ ಕಾಲುವೆ ಹಾಗೂ ಚರಂಡಿಗಳನ್ನು ತಕ್ಷಣವೇ ಸ್ವಚ್ಛಗೊಳಿಸತಕ್ಕದು. ಹಾಗೂ ನೀರು ಸರಾಗವಾಗಿ ಹೊಗುವಂತೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಾದ ಈಶ್ವರ ಉಳಾಗಡ್ಡಿ ಅವರಿಗೆ ತಿಳಿಸಿದರು.

ರಸ್ತೆ ಬದಿಯಲ್ಲಿ ಅಪಾಯಕಾರಿ ಗಿಡ ಮರಗಳನ್ನು ಹಾಗೂ ಟೊಂಗೆಗಳನ್ನು ಈಗಲೇ ತೆರವುಗೊಳ್ಳಿಸತಕ್ಕದು. ಮ್ಯಾನಹೋಲ್‍ಗಳನ್ನು ತಕ್ಷಣವೆ ಮುಚ್ಚತಕ್ಕದು ಎಂದರು.
ನಾಳೆ ಮೇ 14 ರಿಂದ 58 ಕೆರೆಗೆ ನೀರು ಬಿಡುವ ಕಾರ್ಯ
ಇನ್ನೂ ಹೆಸ್ಕಾಂ ಅಧಿಕಾರಿಗಳು ಅಪಾಯಕಾರಿ ವಿದ್ಯುತ್ ಕಂಬಗಳ ಬಗ್ಗೆ ಈಗಲೇ ಗಮನ ವಹಿಸಿ, ಸ್ಥಳಾಂತರಗೊಳ್ಳಿಸಬೇಕು. ವಿದ್ಯುತ್ ಸಂಪರ್ಕದಿಂದ ಯಾವುದೇ ಅನಾಹುತಗಳು ಆಗದಂತೆ ವಿವಿಧ ಸ್ಥಳನ್ನು ಗುರುತಿಸಿ, ಕ್ರಮವಹಿಸಬೇಕು. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ 78 ಖಾಸಗಿ ಕೊಳವೆ ಭಾವಿಗಳಿಂದ 51 ಗ್ರಾಮಗಳಲ್ಲಿ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುವ ಕಾರ್ಯ ಮೇ 14 ರಿಂದ ಆರಂಭವಾಗಲಿದೆ ಎಂದು
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ ಎಂ. ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯ ಅಜೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಧಾರವಾಡ ಮಾತ್ರವಲ್ಲದೇ ರಾಜ್ಯದ ನಾನಾ ಕಡೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ಹೀಗಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಪ್ರತಿ ಭಾರಿ ಕೆಲವೇ ನಿಮಿಷಗಳು ಮಳೆಯಾದರೂ ತತ್ತರಿಸುವ ಬೆಂಗಳೂರಿನಲ್ಲೂ ಬಿಬಿಎಂಪಿಯು ಸಂಬಂಧಿಸಿದ ಬೆಸ್ಕಾಂ, ವಿಪತ್ತು ನಿರ್ವಹಣೆ, ಜಲಮಂಡಳಿ ಹಾಗೂ ಇನ್ನಿತರ ಅಧಿಕಾರಿಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಮುಂಗಾರು ಪೂರ್ವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.












Click it and Unblock the Notifications