ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ, ತಕ್ಷಣ ಲೈಸನ್ಸ್ ರದ್ದು: ಜಿಲ್ಲಾಧಿಕಾರಿ ಖಡಕ್ ಸೂಚನೆ
ಧಾರವಾಡ, ಮೇ. 27: "ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬೀಜ, ರಸಗೊಬ್ಬರ ದಾಸ್ತಾನಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ಮಾರಾಟಗಾರರು ಬೀಜ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ, ತಕ್ಷಣ ಲೈಸನ್ಸ್ ರದ್ದುಪಡಿಸಿ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು" ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದ್ದಾರೆ.
ಸಂಕಷ್ಟದಲ್ಲಿರುವ ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ 31 ಕೇಂದ್ರಗಳ ಮೂಲಕ ರೈತರಿಗೆ ಅಗತ್ಯ ಬೀಜಗಳನ್ನು ಮತ್ತು ಸೊಸೈಟಿ, ಖಾಸಗಿ ಮಾರಾಟಗಾರರು ಸುಮಾರು ಐನೂರಕ್ಕು ಹೆಚ್ಚು ಕೇಂದ್ರಗಳಲ್ಲಿ ರಸಗೊಬ್ಬರ ವಿತರಿಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದಿದ್ದಾರೆ.

ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಬೀಜ, ಗೊಬ್ಬರ ನೀಡಲು ಅನಗತ್ಯ ಷರತ್ತು ವಿಧಿಸುವುದು, ಬೀಜ ಮತ್ತು ಗೊಬ್ಬರದ ಕೃತಕ ಅಭಾವ ಸೃಷ್ಟಿಸುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಲೈಸನ್ಸ್ ರದ್ದು ಪಡಿಸಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಚ್ಚರಿಕೆ ನೀಡಿದ್ದಾರೆ.
"ಧಾರವಾಡ ಜಿಲ್ಲೆಯ ವಾಡಿಕೆ ಮಳೆ 91.9 ಮಿ.ಮೀ. ಇದ್ದು 120.1 ಮಿ.ಮಿ. ನಷ್ಟು ಮಳೆಯಾಗಿದ್ದು ಪ್ರಮುಖವಾಗಿ ಮೇ ಮಾಹೆಯಲ್ಲಿ 50.5 ಮಿ.ಮೀ ವಾಡಿಕೆ ಮಳೆಗೆ 71.1 ಮಿ.ಮೀ ಮಳೆಯಾಗಿರುತ್ತದೆ. ಮೇ ಮಾಹೆಯಲ್ಲಿ ವಾಡಿಕೆ ಮಳೆಗಿಂತಲೂ ಶೇ 40.79 ರಷ್ಟು ಹೆಚ್ಚು ಮಳೆಯಾಗಿದ್ದು ರೈತರು ಬಿತ್ತನೇ ಪೂರ್ವ ಚಟುವಟಿಕೆಗಳನ್ನು ಹಾಗೂ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
14 ರೈತ ಸಂಪರ್ಕ ಕೇಂದ್ರಗಳು
ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಕಾಲಕ್ಕೆ ದೊರೆಯಬೇಕು ಎಂಬ ಸದುದ್ದೇಶದಿಂದ 14 ರೈತ ಸಂಪರ್ಕ ಕೇಂದ್ರಗಳ ಜೊತೆಗೆ 17 ಹೆಚ್ಚುವರಿಯಾಗಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ರಜಾ ದಿನಗಳಲ್ಲೂ ಸಹ ಬೀಜ ವಿತರಣಾ ಕೇಂದ್ರಗಳ ತೆರೆಯಲು ಸೂಚಿಸಲಾಗಿದೆ. ಹೀಗಾಗಿ ಬೀಜ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆ ಬಿಡಿಬಿಡಿಯಾಗಿ ಆಗುತ್ತಿದ್ದು, ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ದಟ್ಟಣೆ ಉಂಟಾದರೆ ತಕ್ಷಣ ಹೆಚ್ಚುವರಿ ಕೌಂಟರ್ ತೆರೆದು ಬೀಜ ವಿತರಿಸಲು ಕೃಷಿ ಇಲಾಖೆ ಮೂಲಕ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
"ಅನಗತ್ಯವಾಗಿ ರೈತರು ಬೀಜ ಮತ್ತು ಗೊಬ್ಬರ ವಿಷಯದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ರೈತರು ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ, ರಸಗೊಬ್ಬರ ಖರೀದಿ ಮಾಡುವದರಿಂದ ಉಳಿದ ರೈತರಿಗೂ ಅನುಕೂಲವಾಗುತ್ತದೆ. ಸಮರ್ಪಕ ವಿತರಣೆಗೂ ಸಹಾಯವಾಗುತ್ತದೆ. ಒಂದೇ ರೈತ ಸಂಪರ್ಕ ಕೇಂದ್ರಕ್ಕೆ ಎಲ್ಲರೂ ಒಮ್ಮೆಲೇ ಬಂದಾಗ ಸ್ವಲ್ಪ ಮಟ್ಟಿನ ಗೊಂದಲ, ಹೆಚ್ಚಿನ ಸರತಿ ಸಾಲು ಉಂಟಾಗುತ್ತದೆ. ಜಿಲ್ಲೆಯಲ್ಲಿ ಬೀಜ, ರಸಗೊಬ್ಬರದ ಅಗತ್ಯ ದಾಸ್ತಾನು ಇದ್ದು ರೈತರು ಮಳೆ, ಹವಾಮಾನ ನೋಡಿಕೊಂಡು, ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಬಿತ್ತನೆ ಮಾಡಬೇಕು" ಎಂದು ಹೇಳಿದ್ದಾರೆ.

ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಲೈಸನ್ಸ್ ರದ್ದು
ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಇದೆ. ಆದರೂ ಕೆಲವು ಕೃಷಿ ಪರಿಕರ ಮಾರಾಟಗಾರರು, ಸೊಸೈಟಿಗಳ ಸಿಬ್ಬಂದಿಗಳು ಬೀಜ ಖರೀದಿಗೆ ಬರುವ ರೈತರಿಗೆ ಅನಗತ್ಯ ಷರತ್ತು ವಿಧಿಸುವುದು, ಬೀಜ, ಗೊಬ್ಬರದ ಕೊರತೆ ಇದೆ ಎಂದು ಬಿಂಬಿಸಿ, ಬೀಜ ಮತ್ತು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಅಂತಹ ಮಾರಾಟಗಾರರ ಲೈಸನ್ಸ್ ತಕ್ಷಣ ರದ್ದುಪಡಿಸಿ, ಅವರ ಮೇಲೆ ಕಾನೂನು ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕ್ರಮಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಕೃಷಿ ಜಾಗೃತ ಕೋಶದ ಅಧಿಕಾರಿಗಳು ನಿಯಮಿತವಾಗಿ ಎಲ್ಲಾ ಮಾರಾಟ ಮಳಿಗೆಗಳನ್ನು ಭೇಟಿ ನೀಡಿ ಪರಿಶೀಲನೆ ಕೈಗೊಂಡು ಜಿಲ್ಲೆಯಾದ್ಯಂತ ಯಾವುದೇ ನಕಲಿ ಕೃಷಿ ಪರಿಕರಗಳ ವಿತರಣೆ ಆಗದಂತೆ ನಿಗಾ ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 650 ಕ್ಕೂ ಹೆಚ್ಚು ಬಿತ್ತನೆ ಬೀಜದ ಮಾದರಿಗಳನ್ನು ಹಾಗೂ ರಸಗೊಬ್ಬರದ 120 ಮಾದರಿಗಳನ್ನು ತೆಗೆದು ಗುಣಮಟ್ಟದ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಕೊಡಲಾಗಿದೆ ಎಂದಿದ್ದಾರೆ.
ರೈತ ಸಂಪರ್ಕ ಕೇಂದ್ರಗಳ ನಿಯಮಿತ ಪರಿಶೀಲನೆ
ಪ್ರತಿ ವಿತರಣಾ ಕೇಂದ್ರದಿಂದ ವಿತರಿಸಲಾಗುವ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣವನ್ನು ಅಲ್ಲಿಯೇ ಪರೀಕ್ಷಿಸಿ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ವಿತರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಮತ್ತು ಸಹಾಯಕ ಕೃಷಿ ನಿರ್ದೇಶಕರಿಗೆ ನಿಯಮಿತವಾಗಿ ಖುದ್ದು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಬೀಜ, ಗೊಬ್ಬರ ವಿತರಣೆ ಕಾರ್ಯವನ್ನು ಪರಿಶೀಲಿಸಿ, ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
'ಯಾವುದೇ ಕೃಷಿ ಪರಿಕರ ಮಾರಾಟ ಅಂಗಡಿಯವರು ಬೀಜ ಅಥವಾ ಗೊಬ್ಬರ ನೀಡಲು ಬೇರೆ ಕೃಷಿ ಪರಿಕರ ಖರೀದಿ ಮಾಡುವಂತೆ ಕಂಡೀಷನ್ ಹಾಕಿದರೆ, ರೈತರು ನೇರವಾಗಿ ಕೃಷಿ ಇಲಾಖೆ ಹಾಗೂ ಜಾಗೃತ ದಳದ ಅಧಿಕಾರಿಗಳಿಗೆ ಅಥವಾ ತಹಶಿಲ್ದಾರ ಕಚೇರಿ ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ನೀಡಬಹುದು. ಕಾನೂನುಬಾಹಿರವಾಗಿ ವರ್ತಿಸುವ ಅಂಗಡಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.












Click it and Unblock the Notifications