ಧಾರವಾಡದಲ್ಲಿ ಭಾರೀ ಮಳೆ; ಅಧಿಕಾರಿಗಳಿಗೆ ಡಿಸಿ ಖಡಕ್ ಸೂಚನೆ
ಧಾರವಾಡ, ಜುಲೈ 20; ಧಾರವಾಡ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆಯಿಂದ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹುಬ್ಬಳ್ಳಿ-ಧಾರವಾಡ ಸಂಪರ್ಕಿಸುವ ರಸ್ತೆ ಸಹ ಜಲಾವೃತವಾಗಿದೆ. ಮಳೆ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಇಂದು ಬೆಳಿಗ್ಗೆಯಿಂದ ನಿರಂತರವಾಗಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿದೆ. ತಹಶೀಲ್ದಾರ್ ಸೇರಿದಂತೆ ಎಲ್ಲ ಇಲಾಖೆಗಳ ತಾಲೂಕು ಹಾಗೂ ಗ್ರಾಮಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯದ ಕೇಂದ್ರ ಸ್ಥಾನದಲ್ಲಿದ್ದು, ಮಳೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ತಕ್ಷಣ ಸ್ಪಂದಿಸಿ, ಅಗತ್ಯ ನೆರವು ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ.

ಧಾರವಾಡ ಜಿಲ್ಲೆಯಾದ್ಯಾಂತ ಕಳೆದ ಎರಡು ಮೂರು ದಿನಗಳಿಂದ ಉತ್ತಮವಾಗಿ ಮಳೆ ಆಗುತ್ತಿದೆ. ಗುರುವಾರ ಬೆಳಗ್ಗೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ತಾಲೂಕುಗಳ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ನಿರಂತರ ಮಳೆಯಿಂದಾಗಿ ವಿವಿಧ ಗ್ರಾಮಗಳಲ್ಲಿನ ಕೆಲವು ಮನೆಗಳಿಗೆ ಭಾಗಶಃ ಹಾನಿಯಾದ ವರದಿಯಾಗಿದೆ. ಈ ಕುರಿತು ಆಯಾ ಗ್ರಾಮಗಳ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ವಿವರವಾದ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಜನರಿಗೆ ತಕ್ಷಣವಾಗಿ ಸ್ಪಂದಿಸಿ; ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನ ಬಿಡುವ ಮೊದಲು ತಮ್ಮ ಮೇಲಾಧಿಕಾರಿಗಳ ಅನುಮತಿ ಪಡೆಯಬೇಕು. ತಮ್ಮ ವ್ಯಾಪ್ತಿಯ ಸ್ಥಳದಲ್ಲಿದ್ದು ಸಾರ್ವಜನಿಕರಿಗೆ ಅಗತ್ಯವಿದ್ದಲ್ಲಿ ತಕ್ಷಣ ಸ್ಪಂದಿಸಬೇಕು.
ಗ್ರಾಮಗಳ ಪ್ರಮುಖ ಕೆರೆ, ಹೊಂಡ, ಹಳ್ಳಗಳ ಬಗ್ಗೆ ಗಮನ ಹರಿಸಿ, ಸುರಕ್ಷತೆಯನ್ನು ಖಾತರಿ ಮಾಡಿಕೊಳ್ಳಬೇಕು. ವಿಶೇಷವಾಗಿ ಅಳ್ನಾವರದ ಇಂದಿರಮ್ಮನ ಕೆರೆ, ತುಪರಿಹಳ್ಳ, ಬೆಣ್ಣೆಹಳ್ಳಗಳ ಪಕ್ಕದ ಜನರಿಗೆ ಸುರಕ್ಷತೆ ಕುರಿತು ಮಾಹಿತಿ ನೀಡಿ, ನೀರಿನ ಹರಿವಿನ ಬಗ್ಗೆ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದ್ದಾರೆ.
ಎನ್‍ಡಿಆರ್‍ಎಫ್ ತಂಡದಿಂದ ಜಿಲ್ಲೆಯ ವಿವಿಧ ನಗರ ಹಾಗೂ ತಾಲೂಕುಗಳಲ್ಲಿ ಆಸಕ್ತ ಯುವಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ, ಗ್ರಾಮೀಣ ಸ್ವಯಂ ಸೇವಕರಿಗೆ ಅತಿವೃಷ್ಠಿಯಿಂದ ಉಂಟಾಗುವ ಸಮಸ್ಯೆಗಳು ಮತ್ತು ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳು, ಸುರಕ್ಷತಾ ಕ್ರಮಗಳ ಕುರಿತು ಅಗತ್ಯ ತರಬೇತಿಯನ್ನು ನೀಡಿ, ಯುವ ತಂಡಗಳನ್ನು ಈಗಾಗಲೇ ಸಿದ್ದಗೊಳಿಸಲಾಗಿದೆ.
ಈ ಕುರಿತು ತಾಲೂಕಾಧಿಕಾರಿಗಳು ಸಮನ್ವಯ ಸಾಧಿಸಿ, ಅಗತ್ಯವಿದ್ದಲ್ಲಿ ತರಬೇತಿ ಹೊಂದಿದ ಯುವಕರ, ತಂಡಗಳ ನೇರವು ಪಡೆಯಲು ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಅತಿಯಾದ ಮಳೆಯಿಂದ ತೊಂದರೆ ಉಂಟಾದಲ್ಲಿ ಜನರು ತಮ್ಮ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ, ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ತಹಶೀಲ್ದಾರ್ ಕೇಂದ್ರ ಸ್ಥಾನದಲ್ಲಿದ್ದು, ತಮ್ಮ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಂದ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ತಕ್ಷಣ ಸ್ಥಳಕ್ಕೆ ಹೋಗಿ ಪರಿಹರಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ನೈಋತ್ಯ ಮುಂಗಾರು ಮಳೆಯ ಕೊರತೆ ಉಂಟಾಗಿತ್ತು. ಇದರಿಂದಾಗಿ ಜಿಲ್ಲೆಯ ಸುಮಾರು 99 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬಂದಿತ್ತು. ಆದ್ದರಿಂದ ಹೊಸ ಬೋರ್‌ವೆಲ್ ಕೊರೆಯುವ ಯಂತ್ರ, ಬಾಡಿಗೆ ನೀರು ಪಡೆಯುವ, ಟ್ಯಾಂಕರ್ ನೀರು ಪೂರೈಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ನೀಡಿದ್ದರು.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಾರ್ಚ್‌ನಿಂದ ಮೇ ತನಕ ವಾಡಿಕೆಯಂತೆ 120 ಮಿ. ಮೀ. ಮಳೆಯಾಗಬೇಕಿತ್ತು. ಆದರೆ 91 ಮಿ. ಮೀ. ಮಳೆಯಾಗಿತ್ತು. ಜೂನ್‌ನಲ್ಲಿ ಮುಂಗಾರು ಮಳೆ ಕೊರತೆ ಆಗಿತ್ತು. ಜೂನ್ 27ರ ತನಕ 109 ಮಿ. ಮೀ. ವಾಡಿಕೆ ಮಳೆಗೆ, ಕೇವಲ 40 ಮಿ. ಮೀ. ಮಳೆಯಾಗಿತ್ತು. ಇದರಿಂದಾಗಿ ಕುಡಿಯುವ ನೀರಿನ ಕೊರತೆ ಉಂಟಾಗಿತ್ತು.












Click it and Unblock the Notifications