ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವಂತೆ ಜೆ.ಪಿ. ನಡ್ಡಾ ಮತ್ತು ಕಟೀಲ್‌ಗೆ ಪತ್ರ ಬರೆದ ಮೇಯರ್
ಹುಬ್ಬಳ್ಳಿ, ಮಾರ್ಚ್, 23: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ನಡುವೆ ಟಿಕೆಟ್‌ಗಾಗಿ ಸಮರ ಏರ್ಪಟ್ಟಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರಿಗೆ ಮೇಯರ್ ಈರೇಶ ಅಂಚಟಗೇರಿ ನನಗೆ ಟಿಕೆಟ್ ಕೊಡುಂವಂತೆ ಪತ್ರ ಬರೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮೇಯರ್ ಈರೇಶ ಅಂಚಟಗೇರಿ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಪತ್ರ ಬರೆದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಪರಿಗಣಿಸಬೇಕೆಂದು ಪತ್ರದಲ್ಲಿ ನಮೂದಿಸಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಅಭ್ಯರ್ಥಿಯಾಗಿ ಪರಿಗಣಸಬೇಕೆಂದು ಪತ್ರ ಬರೆದು ಗಮನ ಸೆಳೆದಿದ್ದಾರೆ.

ಬಿಜೆಪಿಯಲ್ಲೇ ಟಿಕೆಟ್ ಫೈಟ್ ಶುರು
ಇನ್ನು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಹಾಲಿ ಶಾಸಕಾರಗಿರುವ ಅರವಿಂದ ಬೆಲ್ಲದ್‌ಗೆ ಪಕ್ಷದಲ್ಲೇ ಫೈಟ್ ಎದುರಾಗಿದೆ. ನಾನೇ ಅಭ್ಯರ್ಥಿ ಎಂದು ಓಡಾಡುತ್ತಿರುವ ಅರವಿಂದ ಬೆಲ್ಲದ್‌ಗೆ ಇದೀಗ ಆಪ್ತ ವಲಯದಲ್ಲೇ ಎದುರಾಳಿಗಳು ಹುಟ್ಟಿಕೊಂಡಿದ್ದಾರೆ. ಒಂದು ಕಡೆ ಕಾಂಗ್ರೆಸ್‌ನಿಂದ ಪಂಚಮಸಾಲಿ ಸಮುದಾಯದ ಮೋಹನ್ ಲಿಂಬಿಕಾಯಿಯನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದ್ದು, ಅವರನ್ನು ಬೆಲ್ಲದ್ ವಿರುದ್ಧ ಸ್ಪರ್ಧೆಗಿಳಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು.
ಈ ನಡುವೆ ಬಿಜೆಪಿಯಲ್ಲಿಯೇ ಟಿಕೆಟ್ ಫೈಟ್ ಶುರುವಾಗಿದೆ. ಈರೇಶ್ ಅಂಚಟಗೇರಿ ಟಿಕೆಟ್ ಕೇಳಿ ಪತ್ರ ಬರೆದಿರುವುದರಿಂದ ಬೆಲ್ಲದ್ ಆತಂಕದಲ್ಲಿ ಇದ್ದಾರೆ. ಮತ್ತೊಂದೆಡೆ ನನಗೆ ಟಿಕೆಟ್ ಸಿಗುವ ಭರವಸೆಯಿದೆ ಎಂದು ಪತ್ರದಲ್ಲಿ ನಮೂದಿಸಿರುವುದು ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. ಆದರೆ ಇವೆರಡು ಪಕ್ಷಗಳಿಗಿಂತ ಮುಂಚೆಯೇ ಆಮ್ ಆದ್ಮಿ ಪಕ್ಷವು ಇತ್ತೀಚೆಗಷ್ಟೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಧಾರವಾಡ ಜಿಲ್ಲೆಯ ಮೂರು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಎಎಪಿ ಪಕ್ಷದ ಮುಖಂಡ ಅನಂತಕುಮಾರ್ ಬುಗಡಿ ತಿಳಿಸಿದರು.
ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ವಿಕಾಸ ಸೊಪ್ಪಿನ, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಕ್ಕೆ ಬಸವರಾಜ ತೆರದಾಳ, ಕಲಘಟಗಿ ಕ್ಷೇತ್ರಕ್ಕೆ ಮಂಜುನಾಥ ಜಕ್ಕಣ್ಣನವರ ಅವರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಜನರು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದರು.
ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯವಾಗಿರುವ ಎಎಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಲವು ವಿಚಾರಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ. ಇದೀಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲೂ ಮುಂದಾಗಿದ್ದರು.
ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಮಾರ್ಚ್ 20ರಂದು ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಒಟ್ಟು 80 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ 7 ಮಂದಿ ರೈತರು ಹಾಗೂ 7 ಮಂದಿ ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲು ಮುಂದಾಗಿದೆ.
ಅಭ್ಯರ್ಥಿಗಳ ಪಟ್ಟಿ ಘೋಷಣೆ ಬಳಿಕ ಮಾತನಾಡಿರುವ ಪೃಥ್ವಿ ರೆಡ್ಡಿ, ಎಎಪಿ ಪಕ್ಷವು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಲು ಹೆಮ್ಮೆ ಪಡುತ್ತದೆ. ಎಎಪಿಯು ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಹುಟ್ಟಿಕೊಂಡ ಪಕ್ಷವಾಗಿದೆ. ಭ್ರಷ್ಟಾಚಾರದಿಂದಾಗಿ ಈ ದೇಶದ ಜನರು ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ ಹಾಗೂ ಭಾರತವು ವಿಶ್ವದ ನಂಬರ್ ಒನ್ ಸ್ಥಾನ ಅಲಂಕರಿಸುವುದಕ್ಕೆ ಭ್ರಷ್ಟಾಚಾರ ಅಡ್ಡಿಯಾಗಿದೆ ಎಂದರು.












Click it and Unblock the Notifications