ಧಾರವಾಡ: ರೈತರ ಪಹಣಿಯಲ್ಲಿವ 'ವಕ್ಫ್' ಹೆಸರು ತೆಗೆದು ಹಾಕುವಂತೆ ಬೃಹತ್ ಪ್ರತಿಭಟನೆ
ಧಾರವಾಡ, ಅಕ್ಟೋಬರ್ 31: 'ಜಮೀನು ವಕ್ಫ್ ಆಸ್ತಿಗೆ ಒಳಪಟ್ಟಿರುತ್ತದೆ' ಎಂದು ನಮೂದಿಸಿರುವುದನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಹಾಗೂ ಭಾರತ್ ಕಿಸಾನ್ ಸಂಘ ಸಹಿತ ವಿವಿಧ ಸಂಘಟನೆಗಳು ಧಾರವಾಡ ನಗರದಲ್ಲಿ ಪ್ರತಿಭಟನೆ ನಡೆಸಿದರು. ಧಾರವಾಡ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
'ನಮ್ಮ ಪಿತ್ರಾರ್ಜಿತ ಆಸ್ತಿಯ ಪಹಣಿಯಲ್ಲಿ 'ವಕ್ಫ್' ಹೆಸರು ನಮೂದಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಲೋಪ ಆಗಿದೆ. ಲೋಪ ಸರಿಪಡಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು' ಎಂದು ಉಪ್ಪಿನಬೆಟಗೇರಿಯ ರೈತ ಗಂಗಪ್ಪ ಜಾವಳಗಿ ಎಚ್ಚರಿಕೆ ನೀಡಿದರು.

'ಪಹಣಿಯಲ್ಲಿ 'ವಕ್ಫ್' ಹೆಸರು ನಮೂದಾಗಿರುವುದನ್ನು ತೆಗೆದು ಹಾಕುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ವಹಿಸಿಲ್ಲ. ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರು ಲೋಪ ಎಸಗಿದ್ದಾರೆ' ಎಂದು ಉಪ್ಪಿನಬೆಟಗೇರಿಯ ಮರಿಬಸಪ್ಪ ಮಸೂತಿ ಆರೋಪಿಸಿದರು.
ಭಾರತ್ ಕಿಸಾನ್ ಸಂಘದ ವಿವೇಕ ಮೋರೆ ಮಾತನಾಡಿ, 'ವಕ್ಫ್ ಹೆಸರಿನಲ್ಲಿ ರೈತರ ಜಮೀನು ಕಬಳಿಸುವ ಹುನ್ನಾರ ನಡೆದಿದೆ. ರೈತರಿಗೆ ಬೆನ್ನಿಗೆ ಚೂರಿ ಹಾಕುವ ಸಂಚು ನಡೆದಿದೆ' ಎಂದು ದೂರಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ವಕ್ಫ್ ಹೆಸರು ನೋಂದಣಿ ಮಾಡುವಂತೆ ಜಮೀರ್ ಅಹಮದ್ ಒತ್ತಡ ಹೇರಿದ್ದಾರೆ. ಜಮೀರ್ ಅವರು ಎರಡನೇ ಟಿಪ್ಪು ಮತ್ತು ಔರಂಗಜೇಬ್. ರೈತರ ಪಹಣಿಯಲ್ಲಿ ನಮೂದಿಸಿರುವ 'ವಕ್ಫ್' ಹೆಸರನ್ನು ವಾರದೊಳಗೆ ತೆಗೆದುಕೊಳ್ಳಬೇಕು. ಉಪವಿಭಾಗಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಶ್ರೀರಾಮ ಸೇನೆ ಹಾಗೂ ಭಾರತ್ ಕಿಸಾನ್ ಸಂಘ ಸಹಿತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ದೊಡ್ಡಪ್ಪ ಹೂಗಾರ, ನವೆಂಬರ್ 5ರಂದು ವಿಚಾರಣೆಗೆ ಹಾಜರಾಗುವಂತೆ ವಕ್ಫ್ ಅಧಿಕಾರಿಗೆ ನೋಟಿಸ್ ನೀಡಲಾಗಿದೆ. ದಾಖಲೆ ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ್ ದೇಸಾಯಿ ಮೊದಲಾದವರು ಪಾಲ್ಗೊಂಡಿದ್ದರು.












Click it and Unblock the Notifications