ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ನೇತ್ರದಾನ: ದುಃಖದ ನಡುವೆ ಮಾನವೀಯತೆ ಮೆರೆದ ಕುಟುಂಬ
ಧಾರವಾಡ, ಆಗಸ್ಟ್ 21: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿ ಮಾನವೀಯತೆ ಮೆರೆದ ಘಟನೆ ಧಾರವಾಡದಲ್ಲಿ ನಡೆದಿದೆ.
ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಮಾರುಕಟ್ಟೆಯಿಂದ ಮನೆ ಕಡೆಗೆ ವಾಪಸ್ ಆಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ಬಡಾವಣೆಯ ನಿವಾಸಿ ಚೆನ್ನಬಸಪ್ಪ ಶಿವಪ್ಪ ಹುಲ್ಲಲ್ಲಿ (35) ಸಾವನ್ನಪ್ಪಿದ್ದರು. ಇವರ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.

ಟಾಟಾ ಮಾರ್ಕೋಪೋಲ್ ಕಂಪನಿಯ ಉದ್ಯೋಗಿಯಾಗಿದ್ದ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ ಚೆನ್ನಬಸಪ್ಪ ಶಿವಪ್ಪ ಹುಲ್ಲಲ್ಲಿ ತನ್ನ ಇಬ್ಬರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಮಾರುಕಟ್ಟೆಯಿಂದ ಮನೆ ಕಡೆಗೆ ಹೋಗುತ್ತಿದ್ದರು. ಈ ವೇಳೆ ತೇಜಸ್ವಿ ನಗರ ಬಡಾವಣೆ ಬಳಿ ಮುಂಭಾಗದಿಂದ ವೇಗವಾಗಿ ಬಂದ ಬೈಕ್ ಸವಾರ ಚೆನ್ನಬಸಪ್ಪ ಅವರ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಚೆನ್ನಬಸಪ್ಪ ಮತ್ತು ಇವರ ಮಕ್ಕಳಾದ ಅಥರ್ವ (7) ಹಾಗೂ ಅಪೂರ್ವ (4) ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಗಾಯಾಳುಗಳನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ದುರಾದೃಷ್ಟವಶಾತ್ ಫಲಕಾರಿಯಾಗದೇ ಚೆನ್ನಬಸಪ್ಪ ಮೃತಪಟ್ಟಿದ್ದಾರೆ. ಘಟನೆಯಿಂದ ಕುಟುಂಬಸ್ಥರು ಅತೀವ ದುಃಖದಲ್ಲಿದ್ದರೂ ಚೆನ್ನಬಸಪ್ಪ ಅವರ ಕೊನೆಯ ಆಸೆಯಂತೆ ಕುಟುಂಬಸ್ಥರು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದರು. ಹೀಗಾಗಿ ಕೂಡಲೇ ಎಸ್‌ಡಿಎಂ ಆಸ್ಪತ್ರೆಗೆ ನೇತ್ರದಾನದ ಕುರಿತು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಕೋರಿಕೆ ಮೇರೆಗೆ ಎಸ್‌ಡಿಎಂ ಆಸ್ಪತ್ರೆ ವೈದ್ಯರು ಚೆನ್ನಬಸಪ್ಪ ಅವರ ಕಣ್ಣುಗಳನ್ನು ಪಡೆದಿದ್ದಾರೆ.

ಈ ಮೂಲಕ ಚೆನ್ನಬಸಪ್ಪ ಅವರು ಸಾವಿನ ಬಳಿಕ ಬೇರೆಯವರ ಬಾಳಿಗೆ ಬೆಳಕಾಗಿದ್ದಾರೆ. ಮನೆಯ ಯಜಮಾನನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬಸ್ಥರು ಇಂತಹ ಸಮಯದಲ್ಲೂ ಪರರಿಗೆ ನೆರವಾಗಲಿ ಎಂದು ಮಾತವೀಯತೆ ಮೆರೆದ ಚೆನ್ನಬಸಪ್ಪ ಅವರ ಕುಟುಂಬಸ್ಥರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications