ಕುಡಿಯುವ ನೀರಿಗಾಗಿ ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆಗೆ ಆದೇಶ
ಧಾರವಾಡ, ಜನವರಿ 22: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟಿದೆ. ಇದರಿಂದಾಗಿ ಜನವರಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಈಗಿರುವ ನೀರನ್ನು ಮಳೆಗಾಲ ಆರಂಭವಾಗುವ ತನಕ ಎಚ್ಚರಿಕೆಯಿಂದ ಬಳಕೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
2023ನೇ ಸಾಲಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆಯ ಮೂಲಕ ಧಾರವಾಡ ಜಿಲ್ಲೆಯಲ್ಲಿನ ನವಲಗುಂದ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕುಗಳ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳಿಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ನೀರು ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಕುಡಿಯುವ ನೀರು ತುಂಬಿಸಿಕೊಳ್ಳುವ ಸಲುವಾಗಿ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರು ಜನವರಿ 22ರಂದು ಸಾಯಂಕಾಲ 6 ಗಂಟೆಯಿಂದ ಫೆಬ್ರವರಿ 1, 2024ರ ವರೆಗೆ ನೀರನ್ನು ಕಾಲುವೆಗೆ ಬಿಡಲು ಆದೇಶಿಸಿರುತ್ತಾರೆ.

ಖಡಕ್ ಸೂಚನೆ; ಡ್ಯಾಂನಿಂದ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸುವಂತೆ ಪ್ರಾದೇಶಿಕ ಆಯುಕ್ತರ ವಿನಂತಿಸಿದ್ದಾರೆ.
ಈ ಸಮಯದಲ್ಲಿ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಸಾರ್ವಜನಿಕರು ಸದರ ನೀರನ್ನು ಕೃಷಿ ಹಾಗೂ ಇನ್ನಿತರೆ ಬೇರೆ ಯಾವುದೇ ಉದ್ದೇಶಕ್ಕೆ ಪಂಪಸೆಟ್‍ನಿಂದ ಹಾಗೂ ಇನ್ನಿತರೇ ಉಪಕರಣಗಳಿಂದ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಸಿ.ಆರ್.ಪಿ.ಸಿ. 1973 ರ ಕಲಂ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ನಿರ್ಬಂಧವನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅಂತಹ ಪಂಪ್‌ಸೆಟ್ ಹಾಗೂ ಇತರೆ ಉಪಕರಣಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು ಹಾಗೂ ನಿರ್ಬಂಧವನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಎಲ್ಲ 8 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಂದಾಜು 1.89 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 0.22 ಲಕ್ಷ ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆ ಸೇರಿ ಒಟ್ಟು ಅಂದಾಜು 2.11 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ.
ಎಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್‍ಗಳ ಮಾರ್ಗ ಸೂಚಿಯಂತೆ ರೂ. 212 ಕೋಟಿಗಳ ಇನ್ ಪುಟ್ ಸಬ್ಸಿಡಿ ಪರಿಹಾರಕ್ಕಾಗಿ ಈಗಾಗಲೇ ಧಾರವಾಡ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕಾಲುವೆ ಮುಖಾಂತರ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ ಮತ್ತು ಈಗಾಗಲೇ ಕಳೆದ ನವೆಂಬರ್ 7 ರಿಂದ 16ರವರೆಗೂ ಸಹ ನೀರು ಬಿಡಲಾಗಿತ್ತು. ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಕುಡಿಯುವ ನೀರು ಸರಬರಾಜು ಮಾಡಲು ತಾಲೂಕುವಾರು ಟೆಂಡರ್ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ.
ರಾಜ್ಯ ಸರ್ಕಾರವು ಕಳೆದ ನವೆಂಬರ್ 3 ರಂದು ಧಾರವಾಡ ಜಿಲ್ಲೆಗೆ ಬರ ಪರಿಹಾರಕ್ಕಾಗಿ ರೂ.12 ಕೋಟಿಗಳನ್ನು ಬಿಡುಗಡೆ ಮಾಡಿದೆ ಮತ್ತು ಜಿಲ್ಲೆಯ ಪ್ರತಿ ತಾಲೂಕಿಗೆ ರೂ. 50 ಲಕ್ಷಗಳನ್ನು ಅಂದರೇ 4 ಕೋಟಿ ರೂ.ಗಳನ್ನು ತಾಲೂಕು ಆಡಳಿತಗಳಿಗೆ ಬಿಡುಗಡೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ವಿಪತ್ತು ನಿರ್ವಹಣಾ ಪಿಡಿ ಖಾತೆಯಲ್ಲಿ ರೂ. 3.28 ಕೋಟಿ ಅನುದಾನ ಮತ್ತು ತಹಶೀಲ್ದಾರರ ಖಾತೆಯಲ್ಲಿ ರೂ. 1.99 ಕೋಟಿ ಅನುದಾನ ಸೇರಿದಂತೆ ಒಟ್ಟು 6.27 ಕೋಟಿ ಅನುದಾನವು ಬರ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಲಭ್ಯವಿದೆ.












Click it and Unblock the Notifications