Amarnath Yatra: ಸುರಕ್ಷಿತವಾಗಿ ಶ್ರೀನಗರಕ್ಕೆ ಬಂದಿಳಿದ ಧಾರವಾಡದ ಐವರು
ಧಾರವಾಡ, ಜುಲೈ, 10: ಅಮರನಾಥ ಯಾತ್ರೆಗೆ ಹೋಗಿ ಪಂಚತರಣಿಯಲ್ಲಿ ಸಿಲುಕಿಕೊಡಿದ್ದ ಧಾರವಾಡದ ಐದು ಜನ ಯಾತ್ರಾರ್ಥಿಗಳು ಸುರಕ್ಷಿತವಾಗಿ ಶ್ರೀನಗರಕ್ಕೆ ಬಂದಿಳಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಮರನಾಥನ ದರ್ಶನ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಾರ್ಗ ಬಂದ್ ಆಗಿದ್ದರಿಂದ ಯಾತ್ರಾರ್ಥಿಗಳನ್ನು ಪಂಚತರಣಿಯಲ್ಲಿ ಸೇನಾ ಪಡೆಯವರು ಸುರಕ್ಷಿತವಾಗಿಟ್ಟಿದ್ದರು. ವಿಪರೀತ ಮಳೆ ಹಾಗೂ ಗುಡ್ಡ ಕುಸಿತದಿಂದ ಯಾತ್ರಾರ್ಥಿಗಳನ್ನು ಮುಂದೆ ಹೋಗಲು ಸೇನಾ ಪಡೆಯವರು ಬಿಟ್ಟಿರಲಿಲ್ಲ.

ನಿನ್ನೆ (ಜುಲೈ 09) ಮಧ್ಯಾಹ್ನ ಯಾತ್ರಾರ್ಥಿಗಳನ್ನು ಅಲ್ಲಿಂದ ಏರ್ ಲಿಫ್ಟ್ ಮಾಡಲಾಗಿದೆ. ಧಾರವಾಡದ ರಾಕೇಶ್ ನಾಝರೆ, ವಿಠ್ಠಲ ಬಾಚಗುಂಡಿ, ಹರೀಶ್ ಸಾಳುಂಕೆ, ನಾಗರಾಜ ಹಾಗೂ ಮಡಿವಾಳಪ್ಪ ಕೊಟಬಾಗಿ ಅವರನ್ನು ಕೂಡ ಪಂಚತರಣಿಯಿಂದ ಶ್ರೀನಗರಕ್ಕೆ ಏರ್ ಲಿಫ್ಟ್ ಮಾಡಲಾಗಿದ್ದು, ಇದೀಗ ಅವರು ಸುರಕ್ಷಿತವಾಗಿ ತಮ್ಮೂರಿಗೆ ಬರುವಂತಾಗಿದೆ. ಈ ಯಾತ್ರಾರ್ಥಿಗಳು 4200 ರೂಪಾಯಿ ಕೊಟ್ಟು ಹೆಲಿಕಾಪ್ಟರ್ ಮೂಲಕ ಶ್ರೀನಗರಕ್ಕೆ ಬಂದಿಳಿದಿದ್ದಾರೆ ಎಂದು ತಿಳಿದುಬಂದಿದೆ.
ರಾಮನಗರ ಜಿಲ್ಲೆಯ 5 ಮಂದಿ ಸೇಫ್
ಹಾಗೆಯೆ ಮತ್ತೊಂದೆಡೆ ಅಮರನಾಥ ಯಾತ್ರೆಗೆ ತೆರಳಿದ್ದ ಜಿಲ್ಲೆಯ 5 ಮಂದಿ ನಾವು ಸುರಕ್ಷಿತವಾಗಿದ್ದೇವೆ ಎಂದು ವಿಡಿಯೋ ಕಾಲ್ ಮೂಲಕ ತಿಳಿಸಿದ್ದಾರೆ. ಈ ಸಂದೇಶದಿಂದ ಯಾತ್ರಿಕರ ಕುಟುಂಬದವರ ಆತಂಕ ದೊರವಾದಂತಾಗಿದೆ.
ಕಳೆದ ಶನಿವಾರ ಜುಲೈ 2ರಂದು ಅಮರನಾಥ ಯಾತ್ರೆಗೆ ತೆರಳುತ್ತಿದ್ದ ಸುಮಾರು 40 ಮಂದಿ ತಂಡದೊಂದಿಗೆ ಮಾಗಡಿಯಿಂದ 5 ಮಂದಿ ಅಮರನಾಥ ಯಾತ್ರೆಗೆ ತೆರಳಿದ್ದರು. ಯಾತ್ರೆಯ ದಾರಿಯಲ್ಲಿ ಅತಿಯಾದ ಮಳೆಯಿಂದಾಗಿ ಭೂ ಕುಸಿತವಾದ ಹಿನ್ನೆಲೆಯಲ್ಲಿ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ಮಾಗಡಿಯಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಡಾಬಾ ಮಹೇಶ್, ಕೆ.ಎನ್.ಕೃಷ್ಣಮೂರ್ತಿ, ಭಾರತ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಚೆನ್ನಮ್ಮನಪಾಳ್ಯದ ನಾಗರಾಜು, ಶಿವಕುಮಾರ್ ಹಾಗೂ ಬಾಲಾಜಿ ಶ್ರೀನಿವಾಸ್ ಪ್ರಕೃತಿ ವಿಕೋಪದ ನಡುವೆ ಸಿಆರ್‌ಪಿಎಫ್ 46 ಬೆಟಾಲಿಯನ್ ನೆರವಿನಿಂದ ಸುರಕ್ಷಿತವಾಗಿ ಬೇಸ್ ಕ್ಯಾಂಪ್‌ನಲ್ಲಿ ಉಳಿದಿರುವುದಾಗಿ ವಿಡಿಯೋ ಕಾಲ್ ಮೂಲಕ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಅಮರನಾಥ ದರ್ಶನ ಮುಗಿಸಿ ಶ್ರೀನಗರ ವೈಷ್ಣೋವಿದೇವಿ ದರ್ಶನಕ್ಕೆ ತೆರಳುವ ಸಮಯದಲ್ಲಿ ಉಂಟಾದ ಭೂ ಕುಸಿತದಿಂದ ಮಾರ್ಗ ಮಧ್ಯದಲ್ಲಿ ಸಿಲುಕಿದ್ದ ಯಾತ್ರಿಗಳನ್ನು ಸೈನಿಕರು ರಕ್ಷಣೆ ಮಾಡಿದ್ದಾರೆ. ನಂತರ ಅವರಿಗೆ ಸಿಆರ್‌ಪಿಎಫ್ 46 ಬೆಟಾಲಿಯನ್ ಶಿಬಿರದಲ್ಲಿ ಉಳಿಯುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಯಾತ್ರಿಕರು ಪ್ರಕೃತಿ ವಿಕೋಪದಲ್ಲಿ ಸಿಲುಕಿರುವ ಸುದ್ದಿ ತಿಳಿದು ಮಾಗಡಿಯ ಅಮರನಾಥ ಯಾತ್ರಿಕರ ಮನೆಗಳಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೆ ಕುಟುಂಬದವರು ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತ, ಸ್ಥಳೀಯ ಶಾಸಕರು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಇದೀಗ ಅಮರನಾಥ ಯಾತ್ರಿಕರು ವಿಡಿಯೋ ಕಾಲ್ ಮಾಡಿ ತಾವು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದರಿಂದ ಕೊಂಚ ನಿರಾಳರಾಗಿರುವ ಕುಟುಂಬಸ್ಥರು ತಮ್ಮವರನ್ನು ರಕ್ಷಣೆ ಮಾಡಿ, ಉಳಿಯುವ ವ್ಯವಸ್ಥೆ ಮಾಡಿರುವ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಮಿಲಿಟರಿ ಶಿಬಿರದಲ್ಲಿರುವ ತಮ್ಮ ಯಾತ್ರಿಕರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅಮರನಾಥ ಯಾತ್ರಿಕರ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ.
ಮಾಗಡಿ ಅಮರನಾಥ ಯಾತ್ರಿಕರ ರಕ್ಷಣೆಯ ಬಗ್ಗೆ ಸದನದಲ್ಲಿ ಧ್ವನಿ ಎತ್ತಿರುವ ಶಾಸಕ ಹೆಚ್.ಸಿ.ಬಾಲಕೃಷ್ಣ, ಸರ್ಕಾರ ರಾಜ್ಯದ ಅಮರನಾಥ ಯಾತ್ರಿಕರನ್ನು ಸುರಕ್ಷಿತವಾಗಿ ತರೆತರುವ ಭರವಸೆ ನೀಡಿದೆ ಎಂದು ಟ್ವಿಟ್ ಮಾಡಿದ್ದಾರೆ. ನಮ್ಮ ಕ್ಷೇತ್ರದಿಂದ ಜಮ್ಮು ಕಾಶ್ಮೀರದ ಅಮರನಾಥ ಯಾತ್ರೆಗೆ ತೆರಳಿರುವ ಯಾತ್ರಾರ್ಥಿಗಳು ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಸದನದ ಗಮನ ಸೆಳೆದು ಸರ್ಕಾರದಿಂದ ಯಾತ್ರಾರ್ಥಿಗಳನ್ನು ರಕ್ಷಿಸಲು ಒತ್ತಾಯಿಸಿದ್ದೇನೆ ಎಂದರು.
ನನ್ನ ಮನವಿಗೆ ಉತ್ತರಿಸಿದ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ತಮ್ಮ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications