Dharwad Heavy Rain: ಕೆರೆಯಂತಾದ ರಸ್ತೆಗಳಿಂದ ಸಂಚಾರ ಅಸ್ತವ್ಯಸ್ತ: ನಡು ರಸ್ತೆಯಲ್ಲೇ ತಪಸ್ಸಿಗೆ ಕುಳಿತ ವೃದ್ಧ: ವಿಡಿಯೋ
ಧಾರವಾಡ, ಜೂನ್ 08: ವಿದ್ಯಾಕಾಶಿ, ಪೇಡಾನಗರಿ ಎಂದೆಲ್ಲ ಕರೆಸಿಕೊಳ್ಳುವ ಉತ್ತರ ಕರ್ನಾಟಕದ ಧಾರವಾಡ, ಹಾವೇರಿ ಹಾಗೂ ಇನ್ನಿತರ ಕಡೆಗಳಲ್ಲಿ ಶುಕ್ರವಾರ ಭರ್ಜರಿ ಮಳೆ ಆಗಿದೆ. ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ಮತ್ತೊಂದೆಡೆ ವಯೋವೃದ್ಧರೊಬ್ಬರು ನಡು ರಸ್ತೆಯಲ್ಲಿಯೇ ತಪಸ್ಸಿಗೆ ಕುಳಿತ ದೃಶ್ಯ ಧಾರವಾಡದಲ್ಲಿ ಕಂಡು ಬಂದಿದೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.
ಧಾರವಾಡದಲ್ಲಿ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ರಸ್ತೆಗಳೆಲ್ಲ ಜಲಾವೃತಗೊಂಡು ಸಂಚಾರಕ್ಕೆ ತೊಂದರೆ ಆಯಿತು. ವಾಹನಗಳು ನೀರಿನಲ್ಲೇ ನಿಂತ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ NTTF ಬಳಿಯ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದಿದೆ.

ಇನ್ನು ನಗರದ ದೈವಜ್ಞ ಕಲ್ಯಾಣ ಮಂಟಪ ಎದುರಿನ ರಸ್ತೆ ಸಂಪೂರ್ಣವಾಗಿ ನೀರಿನಿಂದ ಆವೃತವಾಗಿತ್ತು. ರಸ್ತೆ ಕಾಣದಂತೆ ಒಂದು ಅಡಿಯಷ್ಟು ನೀರು ನಿಂತು ತೀವ್ರ ಸಮಸ್ಯೆ ಉಂಟಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನಿಂತ ಅವಾಂತರ ಸೃಷ್ಟಿ ಆಯಿತು. ವಾಹನ ಸವಾರರು ಪರದಾಡಿದ್ದಾರೆ. BRTS ಕಾರಿಡಾರ್ ರಸ್ತೆಯಲ್ಲಿ ಬಹಳ ಹೊತ್ತು ನೀರು ನಿಂತದ್ದು ಕಂಡು ಬಂತು.
ನಿಂತ ನೀರಿನಲ್ಲಿಯೇ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಮಳೆ ನೀರು ಒಳಚರಂಡಿಗೆ ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದ ಹಿನ್ನೆಲೆ ರಸ್ತೆಯಲ್ಲೇ ನೀರು ನಿಂತಿದೆ. ಮೇಲ್ಭಾಗದಿಂದ ಬಂದ ನೀರೆಲ್ಲ ರಸ್ತೆಯಲ್ಲೇ ಜಲಾವೃತವಾಗಿದೆ. ಇದರಿಂದ ಜನರು ಪಡಬಾರದ ಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಮಳೆಯಲ್ಲೇ ತಪಸ್ಸಿಗೆ ಕುಳಿತ ವೃದ್ಧ: ವಿಡಿಯೋ
ಭಾರೀ ಮಳೆ ಬರುವಾಗ ಎಲ್ಲರೂ ರಕ್ಷಣೆಗೆ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಬಳಿ ಓಡದರೆ, ಇಲ್ಲೊಬ್ಬ ವಯೋವೃದ್ಧ ನಡು ರಸ್ತೆಯಲ್ಲಿ ತಪ್ಪಸ್ಸಿನ ಭಂಗಿಯಲ್ಲಿ ಕುಳಿತ ದೃಶ್ಯ ಕಂಡು ಬಂತು. ಇದನ್ನು ಯುವಕನೊಬ್ಬು ವಿಡಿಯೋ ಮಾಡಿದ್ದಾನೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮಳೆ ಬರುವಾಗಲೇ ತಪಸ್ಸಿಗೆ ಕುಳಿತ ಹಿರಿಯ ವ್ಯಕ್ತಿ ಸಾರ್ವಜನಿಕರ ಗಮನ ಸೆಳೆದರು. ಈ ಘಟನೆ ನಡೆದಿರುವುದು ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಮುಂದೇ. ನಟ್ಟ ನಡು ರಸ್ತೆಯಲ್ಲಿ ಮುಂಗಾರು ಮಳೆ ಆರ್ಭಟದ ಮಧ್ಯೆ ಕಣ್ಣು ಮುಚ್ಚಿ ಕುಳಿತ ವೃದ್ಧನ ನಿರ್ಧಾರದಿಂದ ಸ್ಥಳೀಯರು ತಬ್ಬಿಬ್ಬಾದರು. ಇವರಿಗೆ ಏನಾಯಿತೆಂದು ಆಶ್ಚರ್ಯದಿಂದ ನೋಡಿದರು.
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ರೈತರು ಬರಗಾಲ ಅನುಭವಿಸಿದ್ದಾರೆ. ಇದೀಗ ಮಳೆ ಬಂದಿದೆ. ಹೀಗಾಗಿ ರೈತರ ಪರವಾಗಿ ಅವರು ತಪಸ್ಸು ಕುಳಿತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅದೇನೆ ಇರಲಿ, ವಯಸ್ಸಾದ ವ್ಯಕ್ತಿಯೊಬ್ಬರು ಹೀಗೆ ರಸ್ತೆಯಲ್ಲಿ ಕುಳಿತಿರುವುದನ್ನು ನೋಡಲು ಆಗದು ಎಂದು ಕೆಲವು ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದು, ಈ ವೇಳೆ ಕಂಡು ಬಂತು.
ಧಾರವಾಡದ ಜೊತೆಗೆ ಹುಬ್ಬಳ್ಳಿ, ಲಕ್ಷ್ಮೇಶ್ವರ ತಾಲೂಕು ಮತ್ತು ಹಾವೇರಿ, ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲೂ ಶುಕ್ರವಾರ ಆಗಾಗ ಜೋರು ಮಳೆ ಬಂದಿದೆ. ಈ ಮಳೆ ಬಿತ್ತನೆಗೆ ಸಜ್ಜಾಗಿರುವ ಅನೇಕ ರೈತರ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದೆ.












Click it and Unblock the Notifications