ಯಶಸ್ವಿ ಉದ್ಯಮಿ ಗುರುರಾಜ ದೇಶಪಾಂಡೆ ಸಂದರ್ಶನ
ಹುಬ್ಬಳ್ಳಿ, ಫೆಬ್ರವರಿ, 5 : ನಮ್ಮದು ಹಳ್ಳಿಗಳ ರಾಷ್ಟ್ರ, ಹೀಗಾಗಿ ದೇಶದ ಡಿಜಿಟಲ್ ಸೇವೆ ಪ್ರತಿಯೊಂದು ಹಳ್ಳಿಹಳ್ಳಿಗಳಿಗೂ ತಲುಪಿಸುವುದೇ ನಮ್ಮ ಗುರಿ ಎಂದು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದ್ದಾರೆ.
ಅವರು ಒನ್ಇಂಡಿಯಾದೊಂದಿಗೆ ಮಾತನಾಡುತ್ತ, ಈ ಹಿಂದೆ ಐದಾರು ಹಳ್ಳಿಗಳಿಗೆ ಸೇರಿ ಒಂದು ಪೋಸ್ಟ್ ಆಫೀಸ್ ಇರುತ್ತಿತ್ತು. ಅಲ್ಲೊಂದೇ ಫೋನ್ ಇರುತ್ತಿತ್ತು. ತಮ್ಮವರೊಂದಿಗೆ ಸಂಪರ್ಕ ಮಾಡಬೇಕೆಂದರೆ ಟೆಲಿಗ್ರಾಫ್ ಅಥವಾ ಟೆಲಿಫೋನ್ ಮುಖಾಂತರ ಮಾಡಲಾಗುತ್ತಿತ್ತು. ಅದೇ ರೀತಿಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಒಬ್ಬ ಪರಿಣಿತರನ್ನು ತರಬೇತಿಗೊಳಿಸಿದರೆ ಅವರು ನಮ್ಮ ದೇಶದ ಬೆನ್ನೆಲುಬಾದ ರೈತರ ಏಳ್ಗೆಯನ್ನು ತುಂಬಾ ಸರಳವಾಗಿ ಮಾಡಬಹುದು ಎಂದು ತಮ್ಮ ಕನಸುಗಳನ್ನು ಬಿಚ್ಚಿಟ್ಟರು.
ಈ ಬಗ್ಗೆ ತಾವು ಈಗಾಗಲೇ ಹಲವಾರು ಜನರನ್ನು ತರಬೇತಿಗೊಳಿಸಿದ್ದಾಗಿ ಹೇಳಿದ ಗುರುರಾಜ, ನಮ್ಮಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ತಮ್ಮ ಐಚ್ಛಿಕ ಕ್ಷೇತ್ರದಲ್ಲಿ ಯಶಸ್ಸು ಹೊಂದಿ ಈಗ ನಮ್ಮ ಮತ್ತು ದೇಶದ ಹೆಸರನ್ನು ತರುತ್ತಿದ್ದಾರೆ ಸಂತೋಷ ವ್ಯಕ್ತಪಡಿಸಿದರು. [ಅಭಿವೃದ್ಧಿ ಸಂವಾದದ ಕುರಿತ ವಿವರಗಳು]

ಇಡೀ ಕರ್ನಾಟಕದಲ್ಲಿ ಒಂದೇ ಇರುವ ದೇಶಪಾಂಡೆ ಫೌಂಡೇಶನ್ ಲಾಭದ ದೃಷ್ಟಿಯಿಂದ ಮಾಡಿದ್ದಲ್ಲ. ಕೇವಲ ಸೇವೆ ಮತ್ತು ದೇಶದ ಅಭಿವೃದ್ಧಿಗೆ ತಮ್ಮದೊಂದು ಕೊಡುಗೆ ಇರಲಿ ಎಂದು ಹೇಳಿದ ಗುರುರಾಜ, ತಾವು 8 ಕಂಪನಿಗಳನ್ನು ನಡೆಸುತ್ತಿದ್ದು, ಅದೆಲ್ಲಕ್ಕಿಂತ ಹೆಚ್ಚಿಗೆ ಈ ಪೌಂಡೇಶನ್ ನಲ್ಲಿ ನನಗೆ ಮಾನಸಿಕ ನೆಮ್ಮದಿ ಸಿಗುತ್ತಿದೆ ಎಂದರು.
ಹುಬ್ಬಳ್ಳಿಗೆ ದೇಶದ ಮತ್ತು ಅಂತಾರಾಷ್ಟ್ರೀಯ ಪ್ರತಿಷ್ಠಿತ ವ್ಯಕ್ತಿಗಳನ್ನು ಕರೆಯಿಸಿದ ಕೀರ್ತಿ ಹೊಂದಿದ ಗುರುರಾಜ, ತಮ್ಮ ಫೌಂಡೇಶನ್ ನಲ್ಲಿ ಹಲವಾರು ರೀತಿಯ ವಿದ್ಯಾರ್ಥಿಗಳು ಬರುತ್ತಾರೆ ಜೀವನದ ಪಾಠ ಮತ್ತು ದುಡಿಮೆಯ ಪಾಠವನ್ನು ಕಲಿತುಕೊಂಡು ಯಶಸ್ಸಿನ ಮೆಟ್ಟಿಲು ಏರುತ್ತಿರುವುದು ಇಡೀ ಸಮಾಜಕ್ಕೆ ಗೊತ್ತಿದೆ. ಹೀಗಾಗಿ ನಮ್ಮ ಫೌಂಡೇಶನ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ ಎಂದರು.
1995ರಿಂದ ನಡೆಸುತ್ತಿರುವ ಈ ಸಂಸ್ಥೆ, ಅನೇಕ ಇತರ ಸಂಸ್ಥೆಗಳಿಗೂ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿದೆ. ದೇಶದ ಮುಖ್ಯ ಸಮಸ್ಯೆ ಎಂದರೆ ನಿರುದ್ಯೋಗ ಮತ್ತು ಅನಕ್ಷರತೆ. ಈ ಬಗ್ಗೆ ವಿಶೇಷ ಗಮನ ಹರಿಸಿರುವ ತಾವು ಅದಕ್ಕಾಗಿ ವಿಶೇಷ ಪರಿಣಿತರನ್ನು ತಯಾರಿ ಮಾಡುತ್ತಿದ್ದೇವೆ. ಇದು ನಮ್ಮ ಸಮಾಜಕ್ಕೆ ಅತ್ಯುತ್ತಮ ರೀತಿಯಲ್ಲಿ ಸದುಪಯೋಗವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷ ಉದ್ಯಮಶೀಲತಾ ತರಬೇತಿ ಮತ್ತು ತಾಂತ್ರಿಕತೆಗೆ ಒತ್ತು ನೀಡುವ ನಮ್ಮ ಸಂಸ್ಥೆಗೆ ಹಲವಾರು ಜನರು ಬೆಂಬಲವಾಗಿ ನಿಂತಿದ್ದಾರೆ. ಇದು ನಮ್ಮ ಸೌಭಾಗ್ಯ. ಕೇವಲ, ವಿದ್ಯೆ ಕಲಿತು ದುಡ್ಡು ಗಳಿಸಿಕೊಂಡರೆ ಜೀವನ ಸಾರ್ಥಕವೆನಿಸುವುದಿಲ್ಲ. ತಮ್ಮ ತಾಯ್ನಾಡಿಗೆ ಮತ್ತು ತಮ್ಮ ಜನತೆಗೆ ಏನು ಮಾಡಿ ಹೋಗಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಸದ್ಯದಲ್ಲಿಯೇ ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳುವುದಾಗಿ ವಿವರಿಸಿದರು.
ಗುರುರಾಜ ಅವರಿಗೆ ಸಾಥ್ ನೀಡಿರುವ ಅವರ ಧರ್ಮಪತ್ನಿ ಹಾಗೂ ಫೌಂಡೇಶನ್ ನ ಸಂಸ್ಥಾಪಕರಲ್ಲೊಬ್ಬರಾದ ಜಯಶ್ರೀ ದೇಶಪಾಂಡೆ, ನಮಗೆ ಇಬ್ಬರು ಮಕ್ಕಳು, ಈ ಫೌಂಡೇಶನ್ ನಲ್ಲಿ ಕಲಿಯಲು ಬರುವ ಎಲ್ಲರೂ ನನ್ನ ಮಕ್ಕಳ ಸಮಾನ ಎಂದು ತಮ್ಮ ಸೇವೆಯಲ್ಲಿನ ಸಂತೋಷವನ್ನು ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಫೆ. 6ರಿಂದ ಎರಡು ದಿನಗಳ ಕಾಲ ನಡೆಯಲಿರುವ 'ಅಭಿವೃದ್ಧಿ ಸಂವಾದ' ನನ್ನ ಕನಸಿನ ಕೂಸಾಗಿದ್ದು, ಸತತ 7ನೇ ವರ್ಷದಲ್ಲಿ ನಡೆಯುತ್ತಿರುವ ತುಂಬಾ ಸಂತಸ ತಂದಿದೆ ಎನ್ನುವ ದೇಶಪಾಂಡೆ, ಈ ಬಾರಿ ಭಾಗವಹಿಸಲು ಸಾಧ್ಯವಿಲ್ಲದವರು ಮುಂದಿನ ಬಾರಿಯಾದರೂ ಭಾಗಿಯಾಗಿ ಯಶಸ್ಸಿನ ಮತ್ತು ಅಭಿವೃದ್ಧಿಯ ಮಂತ್ರ ಕಲಿತು ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ಕೋರಿದರು.
ಕೇವಲ ಉದ್ಯಮಿಗಳಿಗಷ್ಟೇ ಸೀಮಿತವಲ್ಲದ ಈ ಸಂವಾದಲ್ಲಿ ಶೈಕ್ಷಣಿಕ, ವೈದ್ಯಕೀಯ, ಕೃಷಿ ಕ್ಷೇತ್ರದ ವಿಷಯಗಳನ್ನು ಚರ್ಚಿಲಾಗುತ್ತದೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ, ಪತ್ರಕರ್ತ ಶೇಖರ್ ಗುಪ್ತಾ, ಶೈಕ್ಷಣಿಕ ದಿಗ್ಗಜ ಮಾಧವ ಚವ್ಹಾಣ, ವೈದ್ಯಕೀಯ ಕ್ಷೇತ್ರದ ಆರ್.ವಿ. ರಮಣಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications