ಯೋಗೇಶ್ ಗೌಡ ಹತ್ಯೆ; ಸಿಬಿಐ ತನಿಖೆ ಪ್ರಶ್ನಿಸಿದ್ದ ಅರ್ಜಿ ವಜಾ
ಧಾರವಾಡ, ಫೆಬ್ರವರಿ 07; ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆ ಪ್ರಶ್ನಿಸಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅರ್ಜಿ ವಜಾಗೊಂಡಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಹೊರಗಿದ್ದಾರೆ.
ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಯು. ಯು.ಲಲಿತ್, ರವೀಂದ್ರ ಭಟ್, ಪಿ. ಎಸ್. ನರಸಿಂಹ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿತು. ಈ ಮೂಲಕ ಹತ್ಯೆ ಪ್ರಕರಣದ ಆರೋಪಿ ವಿನಯ್ ಕುಲಕರ್ಣಿಗೆ ಭಾರೀ ಹಿನ್ನಡೆಯಾಗಿದೆ.
2019ರಲ್ಲಿ ಬಿಜೆಪಿ ಸರ್ಕಾರ ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್‌ನಲ್ಲಿ ವಿನಯ್ ಕುಲಕರ್ಣಿ ಪ್ರಶ್ನಿಸಿದ್ದರು. ಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು.

2016ರಲ್ಲಿ ನಡೆದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಭಾಗಿಯಾಗಿದ್ದಾರೆ ಎಂದು ಯೋಗೇಶ್ ಗೌಡ ಕುಟುಂಬ ಸದಸ್ಯರು ಆರೋಪ ಮಾಡಿದ್ದರು. ಪ್ರಕರಣದ ತನಿಖೆ ಕೈಗೊಂಡಿದ್ದ ಸಿಬಿಐ ವಿನಯ್ ಕುಲಕರ್ಣಿ ಬಂಧಿಸಿತ್ತು.
ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ್ದ ಸಿಬಿಐ 2020ರ ನವೆಂಬರ್ 6ರಂದು ವಿನಯ್ ಕುಲಕರ್ಣಿ ಬಂಧಿಸಿತ್ತು. ಬಳಿಕ ಕೋರ್ಟ್‌ಗೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ವಿಚಾರಣೆ ಪೂರ್ಣಗೊಂಡ ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳಿಸಿತ್ತು.
ಜೈಲು ಸೇರಿದ್ದ ವಿನಯ್ ಕುಲಕರ್ಣಿ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಜಾಮೀನು ಅರ್ಜಿ ತಿರಸ್ಕಾರ ಮಾಡಿತ್ತು. ಬಳಿಕ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಸುಮಾರು 9 ತಿಂಗಳ ಕಾಲ ವಿನಯ್ ಕುಲಕರ್ಣಿ ಜೈಲುವಾಸ ಅನುಭವಿಸಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಅವರು ಪ್ರಸ್ತುತ ಜಾಮೀನಿನ ಮೇಲೆಯೇ ಹೊರಗಿದ್ದಾರೆ.
2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆಯಾಗಿತ್ತು. ಧಾರವಾಡ ನಗರದ ಸಪ್ತಾಪುರದ ಉದಯ ಜಿಮ್‌ನಲ್ಲಿ ಯೋಗೇಶ್ ಗೌಡ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು.
ಮೊದಲು ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಧಾರವಾಡ ಪೊಲೀಸರು ಎಫ್‌ಐಆರ್ ದಾಖಲಿಸಿ 6 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ವಿನಯ್ ಕುಲಕರ್ಣಿ ಹೆಸರು ಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿತ್ತು. ಆದರೆ ಅವರು ಆರೋಪ ನಿರಾಕರಿಸಿದ್ದರು.
ಯೋಗೇಶ್ ಗೌಡ ಕುಟುಂಬ ಸದಸ್ಯರು ವಿನಯ್ ಕುಲಕರ್ಣಿ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಸರ್ಕಾರ ತನಿಖೆಗೆಯನ್ನು ಸಿಬಿಐಗೆ ನೀಡಿತ್ತು. ಆದರೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಉತ್ತಿಗೆ ಕೋರ್ಟ್ ಮೆಟ್ಟಿಲೇರಿ ತನಿಖೆಗೆ ತಡೆಯಾಜ್ಞೆ ತಂದಿದ್ದರು.
ಬಳಿಕ ಸಿಬಿಐ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ತನಿಖೆಗೆ ಇದ್ದ ತಡೆಯಾಜ್ಞೆ ತೆರವುಗೊಳಿಸಿತ್ತು. ತನಿಖೆ ಆರಂಭಿಸಿದ ಸಿಬಿಐ 8 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಬಳಿಕ ವಿನಯ್ ಕುಲಕರ್ಣಿ ಪಾತ್ರ ಇರುವುದು ಖಚಿತವಾದ ಮೇಲೆ ಅವರನ್ನು ಬಂಧಿತ್ತು.
ಸಿಬಿಐನ ರಾಕೇಶ್ ರಂಜನ್ ನೇತೃತ್ವದ ಅಧಿಕಾರಿಗಳ ತಂಡ ಹತ್ಯೆಯಾದ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಮತ್ತು ಆಕೆಯ ಸಹೋದರಿ ಸುಮಾ ವಿಚಾರಣೆಯನ್ನು ಸಹ ನಡೆಸಿತ್ತು. ಸಿಬಿಐ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.












Click it and Unblock the Notifications