ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ
ಧಾರವಾಡ, ಮೇ 18; "ಭಾರತದ ವಿದೇಶಾಂಗ ಮಂತ್ರಾಲಯ ಮತ್ತು ವಾಣಿಜ್ಯ ಮಂತ್ರಾಲಯ ಬೇರೆ-ಬೇರೆ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದಿದೆ ಮತ್ತು ಜಾಗತಿಕ ಟೆಂಡರ ಮೂಲಕ ಆಕ್ಸಿಜನ್ ಆಮದು ಮಾಡಿಕೊಳ್ಳುತ್ತಿದೆ" ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದರು.
ಧಾರವಾಡ ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಪ್ರಾಕ್ಸಿಯರ್ ಆಕ್ಸಿಜನ್ ಮರುಪೂರಣ ಘಟಕ್ಕೆ ಭೇಟಿ ನೀಡಿದ ಸಚಿವರು, ಘಟಕದಿಂದ ಟ್ಯಾಂಕರ್‌ಗಳಿಗೆ ಆಕ್ಸಿಜನ್ ತುಂಬುವ ಕಾರ್ಯ ಪರೀಶಿಲನೆ ಮಾಡಿದರು.
ಬಳಿಕ ಮಾತನಾಡಿದ ಅವರು, "ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಒಪ್ಪಂದವಾಗಿತ್ತು. ಅದನ್ನು ಧಾರವಾಡದಲ್ಲಿ ಸಂಗ್ರಹಿಸಿ, ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವ್ಯವಸ್ಥಿತವಾಗಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ" ಎಂದರು.

"ಈಗಾಲೇ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ. ಈ ಆಕ್ಸಿಜನ್ ಅನ್ನು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡಿದೆ. ಉಳಿದ 25 ಮೆಟ್ರಿಕ್ ಟನ್ ಆಕ್ಸಿಜನ್ ಎರಡು ದಿನಗಳಲ್ಲಿ ಪೂರೈಕೆಯಾಗಲಿದೆ" ಎಂದು ವಿವರಿಸಿದರು.
ಮಾರ್ಗಸೂಚಿ ಪಾಲನೆ ಮಾಡಿ; "ಕೋವಿಡ್ ಬಗ್ಗೆ ಜನರು ಜಾಗೃತೆಯಿಂದ ಇರಬೇಕು ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಬೇಕು. ಕೋವಿಡ್ -19ರ ಬಗ್ಗೆ ಭಯ ಪಡದೆ ಎಚ್ಚರವಹಿಸಿ" ಎಂದು ಸಚಿವರು ಕರೆ ನೀಡಿದರು.












Click it and Unblock the Notifications