ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವನ್ಯಜೀವಿಗಳ ಪತ್ತೆ ಪ್ರಕರಣ: S.S. ಮಲ್ಲಿಕಾರ್ಜುನ್ ಸೇರಿ ಮೂವರಿಗೂ ನಿರೀಕ್ಷಣಾ ಜಾಮೀನು
ದಾವಣಗೆರೆ, ಜನವರಿ, 05: ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವನ್ಯಮೃಗಗಳ ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಮೂವರಿಗೆ ಜಾಮೀರು ಮಂಜೂರು ಮಾಡಿ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಎಸ್. ಎಸ್. ಮಲ್ಲಿಕಾರ್ಜುನ್ ರೈಸ್ ಮಿಲ್ ವ್ಯವಸ್ಥಾಪಕ ಸಂಪಣ್ಣ ಮುತಾಲಿಕ್ ಹಾಗೂ ಕರಿಬಸಯ್ಯ ಅವರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್ 21ರಂದು ನಗರದ ಆನೆಕೊಂಡದ ಬಳಿ ಇರುವ ಕಲ್ಲೇಶ್ವರ ರೈಸ್ ಮಿಲ್ ಮೇಲೆ ಅರಣ್ಯ ಇಲಾಖೆ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ವನ್ಯಮೃಗಗಳು ಪತ್ತೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿತ್ತು. ಬಳಿಕ ನಿರೀಕ್ಷಣಾ ಜಾಮೀನು ಕೋರಿ ಮೂವರು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಇದೀಗ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಪರ ವಕೀಲ ಪ್ರಕಾಶ್ ಪಾಟೀಲ್, ಸಂಪಣ್ಣ ಮತ್ತು ಕರಿಬಸಯ್ಯ ಪರ ವಕೀಲ ರಾಮದಾಸ್ ವಾದ ಮಂಡಿಸಿದ್ದರು.
ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರು
ಪ್ರಕರಣದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಪ್ರಕರಣದ ಮೊದಲ ಆರೋಪಿಯಾಗಿಸಿ ಬಂಧಿಸಬೇಕು ಎಂದು ಬಿಜೆಪಿ ಹೋರಾಟ ನಡೆಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಸಂಸದ ಜಿ. ಎಂ. ಸಿದ್ದೇಶ್ವರ್ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದಿದ್ದರು. ಆದರೆ ಪ್ರಕರಣದಲ್ಲಿ ಮೂವರಿಗೂ ಜಾಮೀನು ಮಂಜೂರಾತಿ ದೊರೆತಿದ್ದು, ಬಿಜೆಪಿ ಮುಂದೆ ಯಾವ ರೀತಿ ಹೋರಾಟ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮಲ್ಲಿಕಾರ್ಜುನ್ ವಿರುದ್ದ ಬಿಜೆಪಿ ಆಕ್ರೋಶ
ಹಾಗೆಯೇ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಒಡೆತನದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವನ್ಯಜೀವಿಗಳ ಪತ್ತೆ ಪ್ರಕರಣ ಸಂಬಂಧ ಡಿಎಫ್ಒ ಸರಿಯಾದ ತನಿಖೆ ನಡೆಸುತ್ತಿಲ್ಲ. ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್‌ರ ಹೆಸರನ್ನು ಉಲ್ಲೇಖಿಸದಿರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಡಿಎಫ್ಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ನಗರದ ದುರ್ಗಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಬಿಜೆಪಿ ಕಾರ್ಯಕರ್ತರು ದೊಡ್ಡಪೇಟೆ ಗಣಪತಿ ದೇವಸ್ಥಾನ, ಹೊಂಡದ ಸರ್ಕಲ್, ಅರುಣಾ ಸರ್ಕಲ್, ರಾಂ & ಕೋ ಸರ್ಕಲ್, ಎ. ವಿ.ಕೆ. ಕಾಲೇಜ್ ರೋಡ್, ಗುಂಡಿ ಸರ್ಕಲ್, ವಿದ್ಯಾನಗರ ಸರ್ಕಲ್, ಐಟೆಕ್ ಸರ್ಕಲ್, ಗ್ರಾಮಾಂತರ ಪೊಲೀಸ್ ಕಚೇರಿ ಮುಂಭಾಗ, ನಿಟ್ಟುವಳ್ಳಿ ದುರ್ಗಾಂಬಿಕ ದೇವಸ್ಥಾನ- 60 ಅಡಿ ರಸ್ತೆ, ಹದಡಿ ರಸ್ತೆ ಮೂಲಕ ಬೈಕ್ ರ್‍ಯಾಲಿ ನಡೆಸಿ, ಬಳಿಕ ಡಿ.ಎಫ್.ಓ ಕಚೇರಿ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications