ಒಂದು ಕೋಣಕ್ಕಾಗಿ ಎರಡು ಊರಿನ ಯುದ್ಧ, ಯಾವ ಸಿನಿಮಾಗೂ ಕಮ್ಮಿ ಇಲ್ಲ ಈ ಕಥೆ
ಗ್ರಾಮೀಣ ಭಾಗದಲ್ಲಿ ಹಲವು ವಿಚಾರಗಳಿಗೆ ಗಲಾಟೆಗಳು ನಡೆಯುತ್ತವೆ. ಇಂತಹ ಸೀನ್‌ಗಳನ್ನು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿರುತ್ತೇವೆ. ಯಾವುದೋ ಸಣ್ಣ ವಿಚಾರಕ್ಕೂ ಎರಡು ಊರುಗಳ ನಡುವೆ ಜಗಳ ತಾರಕಕ್ಕೇರಿ ಕೈಕೈ ಮಿಲಾಯಿಸುವ ಹಂತ ತಲುಪುತ್ತದೆ. ಆದರೆ ಕರ್ನಾಟಕದಲ್ಲೇ ಎರಡು ಊರಿನ ಗ್ರಾಮಸ್ಥರು ಕೋಣಕ್ಕಾಗಿ ಫೈಟ್ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಹೌದು, ದಾವಣಗೆರೆ ಜಿಲ್ಲೆಯ ಕುಣಿಬೆಳಕೆರೆ ಹಾಗೂ ಕುಳಗಟ್ಟೆ ಗ್ರಾಮಸ್ಥರು ಕೋಣಕ್ಕಾಗಿ ಬಡಿದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೆ ಇದು ಸಾಮಾನ್ಯ ಕೋಣ ಅಲ್ಲ, ದೇವರಕೋಣ ಎನ್ನಲಾಗಿದೆ. ಎರಡೂ ಊರಿನವರು ಈ ಕೋಣ ತಮ್ಮದು ಎಂದು ಜಗಳ ಮಾಡಿಕೊಂಡಿದ್ದಾರೆ. ಕೊನೆಗೆ ಈ ಕೋಣ ಯಾವ ಊರಿಗೆ ಸೇರಿದ್ದು ಎಂದು ನಿರ್ಧರಿಸಲು ಡಿಎನ್‌ಎ ಟೆಸ್ಟ್ ಕೂಡ ಮಾಡುವ ಹಂತದವರೆಗೆ ತಲುಪಿರುವುದು ಗಮನ ಸೆಳೆದಿದೆ.

ಇನ್ನು ಈ ವಿವಾದ ಸಂಬಂಧ ದಾವಣಗೆರೆ ಎಸ್‌ಪಿ ಅವರ ನೇತೃತ್ವದಲ್ಲಿ ಎರಡೂ ಗ್ರಾಮಸ್ಥರ ಪಂಚಾಯಿತಿ ಕೂಡ ನಡೆದಿದೆ. ಇದರಲ್ಲಿ ಕುಣಿಬೆಳಕೆರೆ ಗ್ರಾಮಸ್ಥರು ಬೇರೆ ಊರಿನವರ ಮೇಲೆ ಕೋಣ ಕದ್ದುಕೊಂಡು ಹೋಗಿರುವ ಆರೋಪ ಮಾಡಿದ್ದಾರೆ. ಈ ಕೋಣವನ್ನು ದೇವಿಗೆ ಬಿಟಿದ್ದರು ಎನ್ನಲಾಗಿದೆ. ಆದರೆ, ಒಂದೇ ಕೋಣಕ್ಕಾಗಿ ಎರಡು ಊರುಗಳ ಮಧ್ಯೆ ದೊಡ್ಡ ಗಲಾಟೆಯೇ ನಡೆದುಹೋಗಿದೆ.
ನಡೆದಿದೆ. ಆದರೆ ಈ ದೇವರ ಕೋಣ ಯಾರದು ಎಂಬುದೇ ಇಲ್ಲಿನ ಯಕ್ಷ ಪ್ರಶ್ನೆ. ಅದನ್ನು ಹೇಗೆ ಪತ್ತೆ ಹಚ್ಚಬೇಕು ಎನ್ನುವುದು ಅದಕ್ಕಿಂತ ದೊಡ್ಡ ಪ್ರಶ್ನೆ ಆಗಿದೆ. ಇದರಿಂದ ಇದು ಮುಗಿಯದ ಕಥೆ ಆಗಿದ್ದರಿಂದ ಈ ಕೋಣಕ್ಕಾಗಿ ನ್ಯಾಯಾ ಪಂಚಾಯತಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಎಸ್ಪಿಯವರಿಗೆ ದೂರು, ಪ್ರತಿ ದೂರು ಕೊಡಲಾಗಿದೆ. ಆದರೆ ಎಸ್‌ಪಿ ಕೈಗೊಂಡ ಅದೊಂದು ನಿರ್ಧಾರ ಯಾವ ಊರಿನ ಪರವಾಗಿ ಬರುತ್ತೆ ಎಂಬುದು ಕೂತುಹಲವಾಗಿದೆ.

ಈ ಕೋಣಕ್ಕಾಗಿ ಬರೋಬ್ಬರಿ ಕಳೆದ 15 ದಿನಗಳಿಂದಲೂ ಈ ಎರಡು ಗ್ರಾಮಸ್ಥರ ನಡುವೆ ವಾಗ್ವಾದ ನಡೆಯುತ್ತಿದ್ದು, ಇದು ನಮ್ಮೂರಿಗೆ ಸೇರಿದ್ದು ಎಂದು ಇಬ್ಬರೂ ವಾದ ಮಾಡುತ್ತಿದ್ದಾರೆ. ಎರಡೂ ಗ್ರಾಮಸ್ಥರು ಕೋಣವನ್ನು ಯಾವುದೇ ಕಾರಣಕ್ಕೂ ಬಿಡುವ ಮಾತಿಲ್ಲ ಎಂದು ಸವಾಲ್ ಹಾಕಿದ್ದಾರೆ.
ಕೊನೆಗೆ ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿ ಖುದ್ದು ಎಸ್‌ಪಿ ಅವರೇ ಬಂದು ಪಂಚಾಯಿತಿ ಮಾಡಿದ್ದಾರೆ. ಆದರೂ ಎರಡೂ ಊರಿನವರು ಕೋಣಕ್ಕಾಗಿ ಯುದ್ಧ ಮಾಡುವ ಹಂತಕ್ಕೆ ತಲುಪಿದ್ದಾರೆ. ಇದು ದೊಡ್ಡ ತಲೆನೋವಾದ ಕಾರಣ ಅಧಿಕಾರಿಗಳು ಈ ಕೋಣದ ವಯಸ್ಸಿನ ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿದ್ದಾರೆ. ಅದರಂತೆ ಕೋಣದ ಡಿಎನ್‌ಎ ಪರೀಕ್ಷೆ ಕೂಡ ನಡೆದಿದ್ದು, ಅದು ಆರು ವರ್ಷ ವಯಸ್ಸಿನ ಕೋಣ ಎಂದು ಪಶುವೈದ್ಯಾಧಿಕಾರಿಗಳು ವರದಿ ಕೊಟ್ಟಿದ್ದಾರೆ.
ಇನ್ನು ಮುಂದಿನ ವರ್ಷ ಈ ಗ್ರಾಮದಲ್ಲಿ ಕರಿಯಮ್ಮನ ಜಾತ್ರೆ ನಡೆಯಲಿರುವ ಹಿನ್ನೆಲೆ ದೇವರಿಗೆ ಅರ್ಪಿಸಲು ದೇವರಕೋಣವನ್ನು ಬಿಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ವರ್ಷಗಳ ಆಧಾರದ ಮೇಲೆ ಎರಡೂ ಊರಿನವರು ಕೋಣ ನಮಗೆ ಸೇರಿದ್ದು ಎಂದು ಜಗಳ ಮಾಡಿಕೊಂಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಹಲವು ಸಭೆಗಳು ನಡೆದರೂ ಎರಡೂ ಊರಿನವರ ಆಕ್ರೋಶ ತಿಳಿಯಾಗಲಿಲ್ಲ. ಇನ್ನು ಭಾರಿ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆ ಕೋಣವನ್ನು ಶಿವಮೊಗ್ಗದ ಗೋಶಾಲೆಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications