ದಾವಣಗೆರೆ: ಬಣ್ಣದೋಕುಳಿಯಂದೇ ಬುಡ್..ಬುಡ್ ಬೈಕ್‌ಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸರು, ಕಾರ್ಯಾಚರಣೆ ಹೇಗಿತ್ತು?
ದಾವಣಗೆರೆ, ಮಾರ್ಚ್, 26: ಬೆಣ್ಣೆನಗರಿ ಹೋಳಿ ಹಬ್ಬದ ಪ್ರಯುಕ್ತ ರಂಗು ರಂಗಾಗಿತ್ತು. ಎಲೆಲ್ಲೂ ಬಣ್ಣದೋಕುಳಿಯೇ. ಎತ್ತ ಕಣ್ಣಾಯಿಸಿದರೂ ಬಣ್ಣ ಬಣ್ಣ ನನ್ನ ಒಲವಿನ ಬಣ್ಣ ಎನ್ನುತ್ತಲೇ ಓಡಾಡುತ್ತಿದ್ದವರೇ ಹೆಚ್ಚು. ಹಬ್ಬದ ರಂಗಂತೂ ಹೆಚ್ಚಾಗಿತ್ತು. ಇದರ ನಡುವೆ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಚಳಿ ಬಿಡಿಸಿದ್ದು ಕಂಡುಬಂದಿದೆ.
ದಾವಣಗೆರೆ ನಗರದಲ್ಲಿ ಸಂಚಾರ ನಿಯಮ ಪಾಲನೆ ಮಾಡದೇ ಇದ್ದ ದ್ವಿಚಕ್ರ ವಾಹನ ಸವಾರರಿಗೆ ದಂಡ ಬಿದ್ದಿದೆ. ಪೊಲೀಸರು ಹೆಚ್ಚು ಶಬ್ಧ ಮಾಡುತ್ತಿದ್ದ ವಾಹನಗಳನ್ನು ಹಿಡಿದು ಫೈನ್ ಹಾಕಿದ್ದಾರೆ. ದಾವಣಗೆರೆ ಸಂಚಾರ ಪೊಲೀಸ್ ಇಲಾಖೆಯವರು ಎಸ್ಪಿ ಉಮಾ ಪ್ರಶಾಂತ್ ಅವರ ಸೂಚನೆ ಮೇರೆಗೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡರು.

ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ: ಎಲ್ಲರೂ ಬಣ್ಣ ಎರಚುತ್ತಾ ಹಬ್ಬ ಆಚರಿಸುತ್ತಿದ್ದರೆ, ಸಂಚಾರ ಪೊಲೀಸ್ ಇಲಾಖೆ ಸಿಬ್ಬಂದಿ ನಗರದಲ್ಲಿ ಕಾರ್ಯಾಚರಣೆ ನಡೆಸಿದರು. ಹೆಚ್ಚು ಶಬ್ದ ಮಾಡುವ ದ್ವಿಚಕ್ರ ವಾಹನ ಹಾಗೂ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದರು. ಅಂದ ಹಾಗೆ ಇವರೆಲ್ಲಾ ಸಿಸಿ ಕ್ಯಾಮರಾದಲ್ಲಿ ದಂಡ ಬಾರದಂತೆ ಹಾಗೂ ನಗರದಲ್ಲಿ ತಾವು ವೇಗವಾಗಿ ಹಾಗೂ ಅಡ್ಡಾದಿಡ್ಡಿ ಹೋದಾಗ ತಮ್ಮ ವಾಹನದ ನಂಬರ್ ಕಾಣಿಸಿದರೆ ದೂರು ನೀಡುತ್ತಾರೆ ಎಂದು ಪ್ಲೇಟ್ ಹಾಕಿರಲಿಲ್ಲ. ಅನೇಕ ಸಾರ್ವಜನಿಕರು ಸಹ ಇಲಾಖೆಗೆ ದೂರು ನೀಡಿದ್ದಾರೆ ಎಂಬ ಮಾಹಿತಿಯೂ ಇದೆ.
ಪ್ಲ್ಯಾನ್ ಹೇಗಿತ್ತು?: ಶಾಲಾ, ಕಾಲೇಜು, ಹಾಸ್ಟೆಲ್‌ಗಳಿಗೆ ಗೌಪ್ಯವಾಗಿ ಬಂದು ಅಂತಹ ವಾಹನಗಳನ್ನು ವಶಕ್ಕೆ ಪಡೆಯಲು ಪೊಲೀಸ್ ಇಲಾಖೆ ಮುಂದಾಗಿತ್ತು. ತನ್ನದೇ ಆದ ಕಾರ್ಯವೈಖರಿ ಮೂಲಕ ದ್ವಿಚಕ್ರ ವಾಹನ ಮಾಲೀಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿತು. ಪೊಲೀಸ್ ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಕೂಲಿಂಗ್ ಪೇಪರ್, ಕರ್ಕಶ ಹಾರನ್ ಮಾಡುವ ಆಟೋಗಳ ಮೇಲೆಯೂ ಸಹ ಕ್ರಮ ವಹಿಸಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.












Click it and Unblock the Notifications