ಬೇಸಿಗೆ ಆರಂಭ: ವಿದ್ಯುತ್ ಉತ್ಪಾದನೆ, ಪೂರೈಕೆ ಬಗ್ಗೆ ಸಚಿವರ ಮಹತ್ವದ ಮಾಹಿತಿ
ದಾವಣಗೆರೆ, ಫೆಬ್ರವರಿ 19: ಬೇಸಿಗೆ ಆರಂಭವಾಗುತ್ತಿದ್ದು ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಿದೆ. 2024ರಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಡ್ಯಾಂಗಳು ಭರ್ತಿಯಾಗಿವೆ. ಆದ್ದರಿಂದ ಜಲ ವಿದ್ಯುತ್ ಉತ್ಪಾದನೆಗೆ ಸಮಸ್ಯೆಗಳಿಲ್ಲ. ಬೇಸಿಗೆಯಲ್ಲಿ ಕೃಷಿ ಚಟುವಟಿಕೆ, ಗೃಹ ಬಳಕೆಗೆ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ. ಆದ್ದರಿಂದ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆಯೇ? ಎಂಬ ಪ್ರಶ್ನೆ ಎದ್ದಿದೆ.
ದಾವಣಗೆರೆಯಲ್ಲಿ ಮಾತನಾಡಿದ ಇಂಧನ ಸಚಿವ ಕೆ. ಜೆ. ಜಾರ್ಜ್, "ಕೃಷಿಗೆ 7 ತಾಸು ತ್ರಿಫೇಸ್ ವಿದ್ಯುತ್ ಮತ್ತು ಗೃಹ ಬಳಕೆ ಹಾಗೂ ಕೈಗಾರಿಕೆಗೆ ದಿನದ 24 ಗಂಟೆಗಳೂ ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ನೀತಿಯಾಗಿದ್ದು ಇದಕ್ಕೆ ಬದ್ಧವಾಗಿ ವಿದ್ಯುತ್ ಪೂರೈಸಲಾಗುತ್ತಿದೆ" ಎಂದು ಹೇಳಿದ್ದಾರೆ.

"ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವೇ ಸ್ಥಳಗಳಲ್ಲಿ ಮಾತ್ರ ನಿರ್ವಹಣೆಗಾಗಿ ಕಡಿತ ಮಾಡಲಾಗುತ್ತದೆ. ಆದರೆ ಸರ್ಕಾರದ ಬದ್ದತೆಯಂತೆ ಕೃಷಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, ಆದರೆ ಲೋಡ್‍ಶೆಡ್ಡಿಂಗ್ ಜಾರಿಯಲ್ಲಿರುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ರಾಜ್ಯದಲ್ಲಿ ಪ್ರತಿನಿತ್ಯ 18,500 ಮೆಗಾವ್ಯಾಟ್ ಬೇಡಿಕೆ ಇದ್ದು ಬೇಸಿಗೆ ಆರಂಭವಾಗಿರುವುದರಿಂದ ಸರಾಸರಿಗಿಂತ ಶೇ 10ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದರಿಂದ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಬ್ಯಾಂಕಿಂಗ್ ಮಾಡಿಕೊಂಡು ಜೂನ್‍ನಿಂದ ಆ ರಾಜ್ಯಗಳಿಗೆ ಕರ್ನಾಟಕದಿಂದ ವಿದ್ಯುತ್ ನೀಡಿ ಬೇಸಿಗೆಯಲ್ಲಿ ಅಲ್ಲಿಂದ ಗ್ರಿಡ್ ಮೂಲಕ ವಿದ್ಯುತ್ ಪಡೆಯಲು ಉದ್ದೇಶಿಸಲಾಗಿದೆ" ಎಂದು ಸಚಿವರು ಹೇಳಿದರು.
ಸಚಿವ ಕೆ. ಜೆ. ಜಾರ್ಜ್ ಮಾತನಾಡಿ, "ರಾಜ್ಯದಲ್ಲಿ ಪ್ರಸ್ತುತ ಯಾವುದೇ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ಇದಕ್ಕಾಗಿ ಸಬ್ ಸ್ಟೇಷನ್‍ಗಳು ಹಾಗೂ ಟ್ರಾನ್ಸ್ ಮಿಷನ್ ಕೇಂದ್ರಗಳು ಸಮರ್ಪಕವಾಗಿರಬೇಕು. ಪ್ರಸ್ತುತ ರೈತರಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡುವಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ಹೊತ್ತಿನಲ್ಲಿ 4 ಗಂಟೆ ಹಾಗೂ ರಾತ್ರಿ ಸಮಯದಲ್ಲಿ 3 ಗಂಟೆ ವಿದ್ಯುತ್ ಪೂರೈಕೆ ಮಾಡಲೇಬೇಕು" ಎಂದರು.
ವಿದ್ಯುತ್ ದರ ಪರಿಷ್ಕರಣೆ: ಇಂಧನ ಸಚಿವ ಕೆ. ಜೆ. ಜಾರ್ಜ್ ಮಾತನಾಡಿ, "ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೆಇಆರ್‌ಸಿ ಮಾಡಲಿದೆ. ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆಯುವ ಮೂಲಕ ದರ ಏರಿಕೆ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಯಾರದೂ ಕೂಡ ಹಸ್ತಕ್ಷೇಪ ಇರುವುದಿಲ್ಲ, ಕಳೆದ ವರ್ಷ ಯಾವುದೇ ವಿದ್ಯುತ್ ದರ ಏರಿಕೆ ಮಾಡಿರುವುದಿಲ್ಲ" ಎಂದರು.
"ಇಂಧನ ಇಲಾಖೆಯಲ್ಲಿನ ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ, ಆದರೆ ಸರ್ಕಾರದಿಂದ ಸಾಕಷ್ಟು ಹಣ ಬರಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ಸೇರಿದಂತೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಕಂಪನಿಗಳಿಗೆ ಬರಬೇಕಾದ ಹಣ ಬಾಕಿ ಇದೆ. ಗ್ರಾಮ ಪಂಚಾಯಿತಿಗಳು ಸ್ವಂತವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಯೋಜನೆ ಇದ್ದು ದಾವಣಗೆರೆ ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಉದ್ದೇಶಿಸಿ ಇದನ್ನು ಪೈಲೆಟ್ ಕಾರ್ಯಕ್ರಮವಾಗಿ ರೂಪಿಸಲಾಗುತ್ತದೆ" ಎಂದು ಹೇಳಿದರು.
"ಪಂಚಾಯಿತಿಗಳು ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳಿಗೆ ಅಗತ್ಯವಿರುವ ವಿದ್ಯುತ್ ಅನ್ನು ಉತ್ಪಾದನೆ ಮಾಡಿಕೊಂಡು ಸ್ವಾವಲಂಬಿಯಾಗಬೇಕು. ಇದಕ್ಕಾಗಿ 400 ಎಕರೆ ಜಾಗವನ್ನು ಗುರುತಿಸಿ ಸೋಲಾರ್ ಪ್ಯಾನಲ್ ಅಳವಡಿಸಿ ಗ್ರಿಡ್‍ಗೆ ವಿದ್ಯುತ್ ನೀಡಿ ಅಷ್ಟೆ ವಿದ್ಯುತ್ ಅನ್ನು ವಾಪಸ್ ನೀಡಲಾಗುತ್ತದೆ. ಇದರಿಂದ ವಿದ್ಯುತ್ ಉಳಿತಾಯವಾಗಲಿದೆ ಮತ್ತು ಪಂಚಾಯಿತಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ" ಎಂದು ತಿಳಿಸಿದರು.
"ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಎಲ್ಲಾ ವರ್ಗದ ಜನರಿಗೂ ಅನ್ವಯಿಸಲಿದ್ದು 200 ಯುನಿಟ್ ತನಕ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ನೀಡಲಾಗುತ್ತದೆ. ಇದನ್ನು ಅವರು ವರ್ಷದಲ್ಲಿ ಉಪಯೋಗಿಸುವ ಯುನಿಟ್‍ಗಳನ್ನಾಧರಿಸಿ ಹೆಚ್ಚುವರಿಯಾಗಿ ಶೇ 10ರಷ್ಟು ಸೇರಿಸಿ ಬಳಕೆಯ ಯೂನಿಟ್ ನಿಗದಿಯಾಗುತ್ತದೆ. ಆದರೆ 200 ಯೂನಿಟ್ ನಂತರ 1 ಯೂನಿಟ್ ಹೆಚ್ಚಾದರೂ ವಿದ್ಯುತ್ ದರದಂತೆ ಬಿಲ್ ಪಾವತಿಸಬೇಕಾಗುತ್ತದೆ" ಎಂದು ಸಚಿವರು ಹೇಳಿದರು.












Click it and Unblock the Notifications