Karnataka Budget 2023 : ರಾಜ್ಯ ಬಜೆಟ್ ಮಂಡಿಸುವ ಬಗ್ಗೆ ಬಸವರಾಜ ಬೊಮ್ಮಾಯಿ ಹೇಳಿದ್ದೇನು?, ಇಲ್ಲಿದೆ ವಿವರ
ದಾವಣಗೆರೆ, ಜನವರಿ, 15: ಫೆಬ್ರವರಿ ಎರಡನೇ ವಾರದಲ್ಲಿ ಜನಪರವಾದ ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆ. ಆಯವ್ಯಯದ ಗಾತ್ರದ ಬಗ್ಗೆ ತೀರ್ಮಾನ ಮಾಡುವುದಕ್ಕೆ ಹಲವು ಸಭೆಗಳ ಅವಶ್ಯಕತೆ ಇದೆ. ಬೇರೆ ಬೇರೆ ಇಲಾಖೆಗಳ ಜೊತೆ ಸಭೆ ಆಗಬೇಕಿದ್ದು, ಸಂಕ್ರಾಂತಿ ನಂತರ ಸಭೆ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ತಿಳಿಸಿದರು.
ನಗರದ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಂದಿನ ಹಣಕಾಸಿನ ಮತ್ತು ಮುಂದಿನ ಡಿಸೆಂಬರ್‌ವರೆಗಿನ ಸ್ಥಿತಿಗತಿ ನೋಡಿಕೊಂಡು ಬಜೆಟ್ ಮಂಡಿಸಲಾಗುವುದು. ಈ ಸಂಬಂಧ ಹತ್ತು ದಿನಗಳ ಹಿಂದೆಯೇ ಪ್ರಮುಖವಾದ ಸಭೆ ನಡೆಸಲಾಗಿದೆ. ಡಿಸೆಂಬರ್ ತಿಂಗಳವರೆಗೆ ಆದಾಯ ಸಂಗ್ರಹ ಮಾಡಲಾಗುವುದು. ನಮ್ಮ ನಿರೀಕ್ಷೆಗೆ ಮೀರಿ ಆದಾಯ ಬರುತ್ತಿದೆ. ಅಬಕಾರಿ, ವಾಣಿಜ್ಯ, ಸ್ಟಾಂಪ್ ಡ್ಯೂಟಿ ಸೇರಿದಂತೆ ಇತರೆ ತೆರಿಗೆ ಸಂಗ್ರಹ ಆಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಸಿಎಂ ವಾಗ್ದಾಳಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ಹೇಳಿರುವುದು ಜನರನ್ನು ಮರಳು ಮಾಡಲು. ಅವರು ಮರಳು ಮಾಡುವ ಕೆಲಸ ಮಾಡುತ್ತಾರೆ. ನಾವು ಇಂತಹ ಕೆಲಸ ಮಾಡುವುದಿಲ್ಲ. ಈಗಾಗಲೇ ಎಸ್ಸಿ, ಎಸ್ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದೇವೆ. 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿದೆ. ಆದರೆ ಕಾಂಗ್ರೆಸ್‌ನವರು ನಾವು ಮಾಡಿ ತೋರಿಸುತ್ತೇವೆ ಎಂದು ಹೇಳುತ್ತಾರೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಹತ್ತು ಹಲವು ಇಂತಹ ಭರವಸೆಗಳು ಬರುತ್ತವೆ. ಅವರು ಕೇಜ್ರಿವಾಲ್ ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

25 ಟೆಕ್ಸ್‌ಟೈಲ್ಸ್ ಪಾರ್ಕ್ ಮಾಡುವ ಪ್ಲಾನ್
ಹಾಗೆಯೇ ರಾಜ್ಯದಲ್ಲಿ 25 ಟೆಕ್ಸ್‌ಟೈಲ್ಸ್ ಪಾರ್ಕ್ ಮಾಡಬೇಕೆಂಬ ಉದ್ದೇಶ ಸರ್ಕಾರದ್ದಾಗಿದೆ. ದಾವಣಗೆರೆ ಸೇರಿದಂತೆ 25 ಟೆಕ್ಸ್‌ಟೈಲ್ಸ್ ಪಾರ್ಕ್ ಮಾಡುವ ಕುರಿತಂತೆ ಬಜೆಟ್‌ನಲ್ಲಿ ಸೇರಿಸಲಾಗುವುದು. ಟೆಕ್ಸ್‌ಟೈಲ್ಸ್ ಹೆಚ್ಚು ಇದ್ದರೂ ಚಟುವಟಿಕೆ ಕಡಿಮೆ ಆಗಿದೆ. ಕಾಟನ್ ಹೆಚ್ಚಿಸಬೇಕು. ಗಾರ್ಮೆಂಟ್ಸ್‌ನಿಂದ ಹೆಚ್ಚಾಗಿ ರಫ್ತಾಗುವುದು ಕರ್ನಾಟಕದಿಂದ ಆಗಿದ್ದು, ಈ ಹಿರಿಮೆಯನ್ನು ಉಳಿಸಿಕೊಳ್ಳಬೇಕು. ಹಾಗಾಗಿ, ಮೂಲಭೂತ ಸೌಕರ್ಯ ಸೇರಿದಂತೆ ಟೆಕ್ಸ್‌ಟೈಲ್ಸ್ ಉದ್ಯಮ ಉತ್ತೇಜನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೀಸಲಾತಿ ವಿಚಾರದ ಬಗ್ಗೆ ಸಿಎಂ ಹೇಳಿದ್ದೇನು?
ನಮಗೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಇದೆ. ಬೆಳಗಾವಿ ಅಧಿವೇಶನದಲ್ಲಿ ಈಗಾಗಲೇ ಮಂಡಿಸಿದ್ದೇವೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಕಾನೂನು ರೀತಿಯಲ್ಲಿ ಭರವಸೆ ಈಡೇರಿಸಿದ್ದೇವೆ. ತಮಿಳುನಾಡಿನವರು ಮೀಸಲಾತಿ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಇಲ್ಲಿಯೂ ಪ್ರಯತ್ನ ಮಾಡುತ್ತೇವೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊದಲ ಹೆಜ್ಜೆ ಇಟ್ಟಿದ್ದೇವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದರು. ಇನ್ನು ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಆಡಿಯೋ ವಿಚಾರದ ಬಗ್ಗೆ ಮಾತನಾಡಲು ಹೋಗಲ್ಲ, ಪ್ರತಿಕ್ರಿಯಿಸುವುದೂ ಇಲ್ಲ ಎಂದು ಹೇಳಿದರು.












Click it and Unblock the Notifications