ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಲೂಟಿ ಹೊಡೆದಿದೆ-ಸಿದ್ದರಾಮಯ್ಯ ಆಕ್ರೋಶ
ದಾವಣಗೆರೆ, ಮೇ 1: ಪ್ರಧಾನ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳೋರು ಈ ದೇಶದಲ್ಲಿ ಯಾರು ಇಲ್ಲ. ಕಪ್ಪು ಹಣ ತರಲಿಲ್ಲ. 15 ಲಕ್ಷ ರೂಪಾಯಿ ಅಕೌಂಟ್ ಗೆ ಹಾಕಲಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಯ್ತಾ, ಉದ್ಯೋಗ ಕೊಡಲಿಲ್ಲ, 15 ಪೈಸೆನೂ ಹಾಕಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜಗಳೂರಿನಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ನಾ ಕಾವುಂಗ ನಾ ಕಾನೇದೂಂಗ ಅಂತಾರೆ. ಆದರೆ ಇಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಲೂಟಿ ಹೊಡೆದಿದೆ. ಗುತ್ತಿಗೆದಾರ ಸಂಘದವರು ಶೇಕಡಾ 40ರಷ್ಟು ಕಮಿಷನ್ ಆರೋಪ ಮಾಡಿದ್ದರು. ಕಾನೇಂದೂಗ ಏನಾಯ್ತು ಮೋದಿಯವರೇ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಆಲಿಬಾಬಾ ಮತ್ತು ನಲವತ್ತು ಕಳ್ಳರ ರೀತಿ. ಎಲ್ಲದರಲ್ಲೂ ಲಂಚದ ಹಾವಳಿ ಜಾಸ್ತಿಯಾಗಿತ್ತು. ಇಂಥ ಕೆಟ್ಟ ಸರ್ಕಾರ ಯಾವಾಗಲೂ ಬಂದಿರಲಿಲ್ಲ. ನಮ್ಮ ಸರ್ಕಾರ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದೆ. ಇವರ ಮನೆ ಹಾಳಾಗಿ ಹೋಗಾ, ಒಂದೇ ಒಂದು ಮನೆನೂ ಕಟ್ಟಿಕೊಟ್ಟಿಲ್ಲ. ನಾವು ಅಧಿಕಾರಕ್ಕೆ ಬಂದರೆ 20 ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ಕೂಡಲೇ ಮಂಜೂರು ಮಾಡುತ್ತೇವೆ. ಸದನದಲ್ಲಿಯೇ ಯಡಿಯೂರಪ್ಪ ಅವರಿಗೆ ಲಂಚ ಕಡಿಮೆ ಮಾಡಿ ಎಂದು ಹೇಳಿದ್ದೆ. ಗ್ಯಾರಂಟಿ ಕಾರ್ಡ್ ಮಾಡೋಕೆ ಆಗಲ್ಲ ಅಂತ ಬೊಮ್ಮಾಯಿ ಹೇಳ್ತಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು ನಾವು ನೂರಕ್ಕೆ ನೂರರಷ್ಟು ನುಡಿದಂತೆ ನಡೆಯುತ್ತೇವೆ ಎಂದು ಭರವಸೆ ನೀಡಿದರು.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲು, ಜಿಎಸ್‌ಟಿ ಪರಿಹಾರ, ವಿಶೇಷ ಅನುದಾನ, ಪ್ರವಾಹ ಪರಿಹಾರ ನಿಧಿ, ಅಭಿವೃದ್ಧಿ ಯೋಜನೆಗಳಿಗೆ ಬರುವ ಅನುದಾನ ಈ ಎಲ್ಲವೂ ಬಿಡಿಗಾಸು ಬರುತ್ತಿದ್ದರೂ, ಅದರ ವಿರುದ್ಧ ಎಂದೂ ತುಟಿಬಿಚ್ಚದೆ, ಮತನೀಡಿ ಗೆಲ್ಲಿಸಿದ ಕನ್ನಡಿಗರಿಗೆ ದ್ರೋಹವೆಸಗುತ್ತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆದು, ನಮ್ಮ ಪಾಲಿನ ಅನುದಾನವನ್ನು ಹಕ್ಕಿನಿಂದ ಕೇಳಿ ಪಡೆಯುವ ನಾಡಿನ ಧ್ವನಿಯಾದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಮತ ನೀಡಿ. ರಾಜ್ಯದ ಹಿತಾಸಕ್ತಿಗೆ ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 125 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ ರೂ. 57 ಇತ್ತು, ಈಗ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 54.77 ಡಾಲರ್ ಇರುವಾಗ ಪೆಟ್ರೋಲ್ ಬೆಲೆ ರೂ. 102 ರೂಪಾಯಿ ಆಗಿರುವುದು ಯಾಕೆ? ನಾ ಖಾವುಂಗಾ ನಾ ಖಾನೆ ದೂಂಗಾ ಎಂದು ನೀವು ಹೇಳಿದರೂ, ನಿಮ್ಮ ಪಕ್ಷದ ಸಚಿವರೇ ಕಮಿಷನ್ ಹಣ ತಿಂದು ಜೈಲಿಗೆ ಹೋಗುತ್ತಿರುವುದೇಕೆ? ರಾಜ್ಯದ ಸಚಿವರು ಸರ್ಕಾರಿ ಗುತ್ತಿಗೆಗಳಲ್ಲಿ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನಿಮಗೆ ಪತ್ರ ಬರೆದಿದ್ದರೂ ಅದಕ್ಕೆ ಉತ್ತರಿಸುವ ಧೈರ್ಯ ತೋರಿಲ್ಲ ಯಾಕೆ? ಎಂದು ವಾಗ್ದಾಳಿ ನಡೆಸಿದರು.

ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಒಂದು ಲಕ್ಷ ರೂ.ವರೆಗಿನ ರೈತರ ಸಾಲವನ್ನು ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿಯೇ ಮನ್ನಾ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದರೂ ಮನ್ನಾ ಮಾಡದೆ ಇರುವುದು ಯಾಕೆ? ರೈತರ ಸಾಲ ಮನ್ನಾ ಮಾಡಲು ನಿರಾಕರಿಸುತ್ತಿರುವ ನಿಮ್ಮ ಸರ್ಕಾರ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿರುವುದೇಕೆ? ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತೆರಿಗೆ ಮತ್ತು ಸುಂಕಗಳ ರೂಪದಲ್ಲಿ 4 ಲಕ್ಷದ 75 ಸಾವಿರ ಕೋಟಿ ರೂಪಾಯಿ ನೀಡಿದರೂ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ರೂಪದಲ್ಲಿ ರೂ.50,257 ಕೋಟಿ ಮಾತ್ರ ಕರ್ನಾಟಕ ರಾಜ್ಯಕ್ಕೆ ನೀಡುತ್ತಿರುವುದು ಯಾಕೆ? ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾಗಿರುವ ತೆರಿಗೆ ಹಂಚಿಕೆಯ ಪಾಲು ಶೇಕಡಾ 4.72ರಿಂದ ಶೇಕಡಾ 3.64ಕ್ಕೆ ಇಳಿದದ್ದು ಯಾಕೆ? ಎಂದು ಪ್ರಶ್ನೆಗಳ ಸುರಿಮಳೆಗೈದರು.
ಮಳೆ ಹಾನಿಗಾಗಿ ರಾಜ್ಯ ಸರ್ಕಾರ ರೂ.35,000 ಕೋಟಿ ಪರಿಹಾರ ಕೇಳಿದ್ದರೂ ಡಬಲ್ ಎಂಜಿನ್ ಸರ್ಕಾರ ಕೇವಲ ರೂ.1,895 ಕೋಟಿ ನೀಡಿದೆ. ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆಯ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ನೀಡಲಾಗುತ್ತಿದ್ದ ಅನುದಾನವನ್ನು ರೂ.1,500 ಕೋಟಿ ಗಳಿಂದ ಒಂದು ಲಕ್ಷ ರೂಪಾಯಿಗಳಿಗೆ ಇಳಿಸಲಾಗಿದೆ. ಪಿಎಸ್‌ಐ ನೇಮಕದಲ್ಲಿ ಅಂದಾಜು ರೂ.300 ಕೋಟಿಗೂ ಮೀರಿ ಲಂಚದ ಅವ್ಯವಹಾರ ನಡೆದು ಉದ್ಯೋಗದ ಅವಕಾಶ ಕಳೆದುಕೊಂಡಿರುವ ಸುಮಾರು 54 ಸಾವಿರ ಯುವಜನರ ಮನದ ಮಾತಿಗೆ ನೀವು ಪ್ರತಿಕ್ರಿಯಿಸದೆ ಮೌನವಾಗಿರುವ ಮೋದಿ ಯಾವಾಗ ಉತ್ತರಿಸುತ್ತಾರೆ ಎಂದು ಕೇಳಿದರು.
ಪ್ರಧಾನಿ ಅವರೇ ನೀವು ರೋಡ್ ಶೋ ನಡೆಸಿರುವ ಬೆಂಗಳೂರು ರಸ್ತೆಗಳಲ್ಲಿರುವ 25,000 ಗುಂಡಿಗಳನ್ನು ಮುಚ್ಚಲು ರೂ.7200 ಕೋಟಿ, ಅಂದರೆ ಒಂದು ಗುಂಡಿಗೆ ತಲಾ ರೂ.9.20 ಲಕ್ಷ ಖರ್ಚು ಮಾಡಿದರೂ ಗುಂಡಿಗಳು ಉಳಿದುಕೊಂಡಿವೆ. ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸಂಜೀವಿನಿಯಾಗಿರುವ ಯುಪಿಎ ಸರ್ಕಾರದ ಹೆಮ್ಮೆಯ ಕಾರ್ಯಕ್ರಮವಾಗಿರುವ ನರೇಗಾ ಯೋಜನೆಗೆ ಈ ಸಾಲಿನ ಬಜೆಟ್ ನಲ್ಲಿ ಶೇಕಡಾ 21.66ರಷ್ಟು ಅಂದರೆ ರೂ.60,000 ಕೋಟಿಯಷ್ಟು ಅನುದಾನವನ್ನು ಡಬಲ್ ಎಂಜಿನ್ ಸರ್ಕಾರ ಕಡಿತಗೊಳಿಸಿದೆ ಎಂದು ಆರೋಪಿಸಿದರು.
ನಮ್ಮ ಸರ್ಕಾರದ ಐದು ವರ್ಷಗಳ ಆಡಳಿತದಲ್ಲಿ ಮಾಡಿದ್ದ ಒಟ್ಟು ಸಾಲ ರೂ.1,16,512 ಕೋಟಿ, ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಒಟ್ಟು ಸಾಲ ರೂ. 3,22,000 ಕೋಟಿ. ಡಬಲ್ ಎಂಜಿನ್ ಸರ್ಕಾರ ಕರ್ನಾಟಕ ರಾಜ್ಯವನ್ನು ಸಾಲಗಾರ ರಾಜ್ಯ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ರಾಜೇಶ್ ಕಾಂಗ್ರೆಸ್‌ನಿಂದ ಉಚ್ಛಾಟನೆ
ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೆಚ್.ಪಿ.ರಾಜೇಶ್‌ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಾರಿ ಕ್ಷೇತ್ರದಲ್ಲಿ ನಿನ್ನ ಬಗ್ಗೆ ಒಲವು ಇಲ್ಲ, ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದೆ. ಟಿಕೆಟ್ ಸಿಕ್ಕಿಲ್ಲ ಎಂದು ರಾಜೇಶ್ ಪಕ್ಷೇತರನಾಗಿ ಸ್ಪರ್ಧಿಸಿದ್ದಾನೆ. ಸಿದ್ದರಾಮಯ್ಯ ಬೆಂಬಲ ಇದೆ ಎಂಬುದಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾನೆ. ಆತನಿಗೆ ನೂರಕ್ಕೆ ನೂರರಷ್ಟು ನನ್ನ ಬೆಂಬಲ ಇಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದರು.
ಹೆಚ್.ಪಿ. ರಾಜೇಶ್‌ಗೆ ಕಾಂಗ್ರೆಸ್ ಪಕ್ಷವು ಎರಡು ಬಾರಿ ಅವಕಾಶ ನೀಡಿದೆ. 2013ರಲ್ಲಿ ಜಯ ಗಳಿಸಿದ್ದರೆ, 2018ರಲ್ಲಿ ಸೋಲು ಕಂಡಿದ್ದರು. ಮಾಜಿ ಶಾಸಕ ರಾಜೇಶ್‌ನನ್ನು ಸಂಪೂರ್ಣವಾಗಿ ತಿರಸ್ಕರಿಸಿ. ರಾಜೇಶ್‌ಗೆ ಪಕ್ಷ ನಿಷ್ಠೆ ಇಲ್ಲ. ಶಾಸಕರಾಗಿದ್ದಾಗ ಎಸ್. ವಿ. ರಾಮಚಂದ್ರ ಐದು ವರ್ಷಗಳಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಜನರು ಬಿಜೆಪಿಯ ಸೋಲಿಸಿ ಕಾಂಗ್ರೆಸ್‌ಗೆ ಅಧಿಕಾರ ಕೊಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪರನ್ನು ಆರಿಸಿ ಕಳುಹಿಸಿ ಎಂದು ಮನವಿ ಮಾಡಿದರು.












Click it and Unblock the Notifications