ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲು ಕಣ್ಣಿಗೆ ಬಟ್ಟೆ ಕಟ್ಟಿ ಚಿತ್ರ ಬಿಡಿಸುವ ವಿಭಿನ್ನ ತರಬೇತಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 24: ಚಿತ್ರ ಬಿಡಿಸುವುದು ಒಂದು ಕಲೆ. ಇದು ಎಲ್ಲರಿಗೂ ಒಲಿಯುವಂಥದ್ದಲ್ಲ. ಇದಕ್ಕೆ ಸಾಕಷ್ಟು ಶ್ರಮ, ಪರಿಶ್ರಮ, ಶ್ರದ್ಧೆ, ಏಕಾಗ್ರತೆ ಬೇಕೇ ಬೇಕು. ಒಬ್ಬ ಕಲಾವಿದನಾಗುವುದು ವರ ಇದ್ದಂತೆ. ಏಕೆಂದರೆ ಅಷ್ಟೊಂದು ಚಾಕಚಕ್ಯತೆ, ಬುದ್ಧಿವಂತಿಕೆ ಇರಬೇಕು. ಆದರೆ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕಲಾಕೃತಿ ರಚಿಸುವುದು ಅಂದರೆ ಸುಲಭನಾ? ತುಂಬಾನೇ ಕಷ್ಟ. ಆದರೆ ಕರ್ನಾಟಕದಲ್ಲಿ ಇದಕ್ಕೂ ತರಬೇತಿ ಕೊಡಲಾಗುತ್ತದೆ. ವಿವಿಧ ಕಾರ್ಯಕ್ರಮಗಳಲ್ಲಿ ಮಕ್ಕಳು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಚಿತ್ರ ರಚಿಸುತ್ತಿದ್ದರೆ ಎಲ್ಲರೂ ಹುಬ್ಬೇರಿಸುತ್ತಾರೆ, ಮೂಕವಿಸ್ಮಿತರಾಗುತ್ತಾರೆ.

ದಾವಣಗೆರೆಯ ಪ್ರಸಿದ್ಧ ಸಿದ್ದಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಈ ಕಲೆಯಲ್ಲಿ ನಿಷ್ಣಾತರು. ಈ ನೈಪುಣ್ಯತೆ ಅಷ್ಟೊಂದು ಸುಲಭವಾಗಿ ಒಲಿದಿಲ್ಲ. ಇದಕ್ಕೆ ಅವರು ತಯಾರಾಗುವ ಪರಿಯೇ ಕುತೂಹಲಕಾರಿ. ರಾಜ್ಯದ ಯಾವ ಶಿಕ್ಷಣ ಸಂಸ್ಥೆಯಲ್ಲಿ ಇದು ಕಾಣಸಿಗುವುದು ಅಪರೂಪದಲ್ಲಿ ಅಪರೂಪ. ಕಳೆದ ಏಳು ವರ್ಷಗಳ ಹಿಂದೆ ಸಿದ್ದಗಂಗಾ ಸಂಸ್ಥೆಯ ಜಯಂತ್ ಅವರು ಮಕ್ಕಳಲ್ಲಿ ಏಕಾಗ್ರತೆ ತರಬೇಕು ಎಂಬ ಸದುದ್ದೇಶದಿಂದ ಈ ಪ್ರಯತ್ನಕ್ಕೆ ಕೈ ಹಾಕಿದರು. ಏಕಾಗ್ರತೆ ಹೆಚ್ಚುವುದರಿಂದ ಕಲಿಕೆಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ಪ್ರಯೋಗ ಮಾಡಿದಾಗ ಎಸ್‌ಎಸ್‌ಎಲ್‌ಸಿ ಫಲಿತಾಂಶ ಚೆನ್ನಾಗಿ ಬಂತು. ಮಕ್ಕಳಲ್ಲಿಯೂ ಸ್ಮರಣಾಶಕ್ತಿ ಹೆಚ್ಚಾಗುತ್ತಾ ಹೋಯಿತು.

2015ರಲ್ಲಿ ಉಷಾ ಎಂಬ ವಿದ್ಯಾರ್ಥಿನಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರ ಬಿಡಿಸುವ ಬಗ್ಗೆ 12 ದಿನಗಳ ಕಾಲ ಹೇಳಿಕೊಡಲಾಗಿತ್ತು. ಮೊದಲ ಬಾರಿಗೆ ಸಹಜವಾಗಿಯೇ ಆತಂಕ ಇತ್ತು. ಆದರೆ, ಇದರಲ್ಲಿ ವಿದ್ಯಾರ್ಥಿನಿ ಯಶಸ್ಸು ಸಾಧಿಸಿದಳು. ಅಬ್ದುಲ್ ಕಲಾಂರ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಳು. ಎಲ್ಲರೂ ಸಹ ಈಕೆಯ ಕಲೆಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದರು. ಅಂದು ಶುರುವಾದ ಈ ಕಲಿಕೆ ಇಂದಿಗೂ ಮುಂದುವರಿದಿದೆ. ಇದುವರೆಗೆ ಸಾವಿರಾರು ವಿದ್ಯಾರ್ಥಿಗಳು ಈ ಕಲೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಖ್ಯಾತನಾಮರ ಚಿತ್ರಗಳನ್ನು ಬಿಡಿಸುತ್ತಾರೆ.

 ಏಕಾಗ್ರತೆ ಹೆಚ್ಚಿಸಲು ಟೆನ್ ಎಕ್ಸ್ ಪ್ಲಸ್ ತರಬೇತಿ

ಏಕಾಗ್ರತೆ ಹೆಚ್ಚಿಸಲು ಟೆನ್ ಎಕ್ಸ್ ಪ್ಲಸ್ ತರಬೇತಿ

ಕೊಂಡಜ್ಜಿಯಲ್ಲಿರುವ ಸಿದ್ಧಗಂಗಾ ಸಂಸ್ಥೆಗೆ ಒಳಪಟ್ಟ ಸುಂದರ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಟೆನ್ ಎಕ್ಸ್ ಪ್ಲಸ್ ತರಬೇತಿ ನೀಡಲಾಗುತ್ತದೆ. ಅಂದ ಹಾಗೆ ಈ ತರಬೇತಿಯು ಒಂದು ವಾರ ನಡೆಯುತ್ತದೆ. ಬೆಳಗ್ಗೆ ಆರು ಗಂಟೆಗೆ ಶುರುವಾಗುವ ಈ ಟ್ರೈನಿಂಗ್ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಏಕಾಗ್ರತೆ, ನೆನಪಿನ ಶಕ್ತಿ, ವೇಗವಾಗಿ ಓದುವುದು, ನಾಯಕತ್ವ ಗುಣ ಬೆಳೆಸುವುದೂ ಸೇರಿದಂತೆ ಅವರಲ್ಲಿನ ನೈಪುಣ್ಯತೆ, ಕೌಶಲ್ಯ, ಹುದುಗಿರುವ ಸುಪ್ತ ಪ್ರತಿಭೆ ಹೊರತರುವುದೇ ಇದರ ಪ್ರಮುಖ ಉದ್ದೇಶ. ಬೆಳಗ್ಗೆ ಜೂಂಬಾ ಡ್ಯಾನ್ಸ್, ಗುಂಪು ಚರ್ಚೆ, ಏಕಾಗ್ರತೆ, ಸುಪ್ತ ಮನಸಿನೊಳಗಿನ ಪ್ರತಿಭೆ ಹೊರಹಾಕುವಿಕೆ, ಗಣಿತ ಅಭ್ಯಾಸ, ಆಟ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ಇದಾದ ಬಳಿಕ ಮಕ್ಕಳಲ್ಲಿ ಹೆಚ್ಚಾಗಿ ಏಕಾಗ್ರತೆ ಬರುತ್ತದೆ. ಇದು ಕಲಿಕೆಗೂ ಸಾಕಷ್ಟು ಸಹಕಾರಿಯಾಗುತ್ತದೆ. ತಂಡ ತಂಡವಾಗಿ ವಿದ್ಯಾರ್ಥಿಗಳಿಗೆ ಈ ತರಬೇತಿ ಕೊಡಲಾಗುತ್ತದೆ. 9 ನೇ ತರಗತಿ ವಿದ್ಯಾರ್ಥಿಗಳಿಗೆ ತರಬೇತಿ ಕೊಟ್ಟರೆ ಅವರಿಗೆ ಕಲಿಯಲು ಹಾಗೂ ಏಕಾಗ್ರತೆ ಸಾಧಿಸಲು ಅನುಕೂಲವಾಗುತ್ತದೆ. ಎಸ್ ಎಸ್ ಎಲ್ ಸಿಯಲ್ಲಿ ಉತ್ತಮವಾಗಿ ಅಭ್ಯಾಸ ಮಾಡಿ ಅಂಕ ಗಳಿಕೆಗೆ ಸಹಕಾರಿಯಾಗುತ್ತದೆ.

 ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರಬಿಡಿಸುವ ವಿದ್ಯಾರ್ಥಿಗಳು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರಬಿಡಿಸುವ ವಿದ್ಯಾರ್ಥಿಗಳು

ಇಷ್ಟೆಲ್ಲಾ ಕಲಿಕೆಯ ನಂತರ ಅವರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರ ಬಿಡಿಸುವುದು ಹೇಗೆ ಎಂಬ ಬಗ್ಗೆ ತಿಳಿಸಿಕೊಡಲಾಗುತ್ತದೆ. ಕಪ್ಪು ಬಿಳಿಪು ಜೊತೆಗೆ ಚಿತ್ರ ಬಿಡಿಸುವ ಕುರಿತಂತೆಯೂ ಕನಿಷ್ಠ ಎಂದರೂ 2 ದಿನ ತರಬೇತಿ ನೀಡಲಾಗಿರುತ್ತದೆ. ಅದಾದ ಬಳಿಕ ಮಕ್ಕಳು ಎಷ್ಟೇ ಗಜಿಬಿಜಿ ಇದ್ದರೂ, ಜನಸಂದಣಿ ಇದ್ದರೂ ನಿರ್ಭೀತರಾಗಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಚಿತ್ರ ಬಿಡಿಸಲು ಸಾಧ್ಯವಾಗುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ, ಏಕಾಗ್ರತೆ. ಆಗ ಇಂಥ ಕ್ಲಿಷ್ಟಕರವಾದ ಚಿತ್ರ ಬಿಡಿಸುವುದು ಸುಲಭವಾಗುತ್ತದೆ. ಇದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಸಕ್ಸಸ್ ಕಂಡಿದ್ದಾರೆ ಎನ್ನುತ್ತಾರೆ ಡಿ. ಎಸ್. ಜಯಂತ್.

ಜಯಂತ್ ಅವರ ಈ ಕಲ್ಪನೆ ಹೊಳೆಯುತ್ತಿದ್ದಂತೆ ಇದಕ್ಕೆ ಸಿದ್ದಗಂಗಾ ಶಾಲೆಯ ಪ್ರಾಂಶುಪಾಲರಾದ ಜಸ್ಟಿನ್ ಡಿಸೌಜ ಹಾಗೂ ಹೇಮಂತ್ ಅವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಆರಂಭದಲ್ಲಿ ಇದು ಸುಲಭವಾ ಎಂಬ ಪ್ರಶ್ನೆಗೆ ಈಗ ಉತ್ತರ ಸಿಗುವಂತೆ ಮಾಡಿರುವ ಜಯಂತ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 ಶಿವಕುಮಾರ ಸ್ವಾಮೀಜಿಯಿಂದಲೂ ಪ್ರಶಂಸೆ

ಶಿವಕುಮಾರ ಸ್ವಾಮೀಜಿಯಿಂದಲೂ ಪ್ರಶಂಸೆ

ಅಬ್ದುಲ್ ಕಲಾಂರ ಭಾವಚಿತ್ರ, ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ ಸಿದ್ದಗಂಗಾ ಶಾಲೆಯ ಮಕ್ಕಳು ಕಣ್ಣಿಗೆ ಕಪ್ಪು ಬಟ್ಟೆ ಧರಿಸಿ ಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದರು. ಶತಾಯುಷಿಗಳಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಬದುಕಿದ್ದಾಗ ಸಂಕ್ರಾಂತಿ ಹಬ್ಬದ ದಿನದಂದು ಶ್ರೀಗಳ ಭಾವಚಿತ್ರವನ್ನು ಕಣ್ಣಿಗೆ ಬಟ್ಟೆ ಧರಿಸಿ ಬಿಡಿಸಿ ಆಶೀರ್ವಾದಕ್ಕೂ ಪಾತ್ರರಾಗಿದ್ದರು. ಶ್ರೀಗಳು ಪ್ರಶಂಸೆ ವ್ಯಕ್ತಪಡಿಸಿದ್ದರು.

 ವಿದ್ಯಾರ್ಥಿಗಳ ಏಕಾಗೃತೆ ದೃಷ್ಟಿಯಿಂದ ಅನುಕೂಲಕರ

ವಿದ್ಯಾರ್ಥಿಗಳ ಏಕಾಗೃತೆ ದೃಷ್ಟಿಯಿಂದ ಅನುಕೂಲಕರ

ಪ್ರಸ್ತುತ ಚಂದನಾ, ಸ್ಫೂರ್ತಿ, ವರ್ಷ, ಡಿ. ವಿನಯ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಈ ಕಲೆಯಲ್ಲಿ ನಿಪುಣರು. ಮೊದಲ ಬಾರಿಗೆ ಚಿತ್ರ ಬಿಡಿಸುವಾಗ ಭಯ ಆಗುತ್ತದೆ. ಹೇಗೆ ಬರುತ್ತೋ ಏನೋ ಅಂತಾ. ಇದಾದ ಬಳಿಕ ಯಾವುದೇ ಭೀತಿ ಇಲ್ಲದೇ ಚಿತ್ರ ಬಿಡಿಸುತ್ತಾರೆ. ಎಸ್. ಎಸ್. ಮಲ್ಲಿಕಾರ್ಜುನ್ ಜನುಮದಿನದಂದು ಜನಸ್ತೋಮದ ಗದ್ದಲದ ನಡುವೆ ಮಲ್ಲಿಕಾರ್ಜುನ್ ರ ಚಿತ್ರ ರಚಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದು ಪಠ್ಯೇತರ ಚಟುವಟಿಕೆಯಲ್ಲದಿದ್ದರೂ ವಿದ್ಯಾರ್ಥಿಗಳ ಭವಿಷ್ಯ, ಏಕಾಗ್ರತೆ ದೃಷ್ಟಿಯಿಂದ ಅತ್ಯಂತ ಪ್ರಯೋಜನಕಾರಿ ಎಂಬುದು ಜಯಂತ್ ಅವರ ಅಭಿಮತ.

English summary
Davanagere famous Siddaganaga education instirute started blindfold draw trining to students for increase the concentration level,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X