ದಾವಣಗೆರೆ ನಗರದ ದಶಕಗಳ ಸಮಸ್ಯೆ ಬಗೆಹರಿಸಿದ ಕೇಂದ್ರ ಸರ್ಕಾರ!
ದಾವಣಗೆರೆ, ಡಿಸೆಂಬರ್ 01; ಕೇಂದ್ರ ಸರ್ಕಾರ ಕರ್ನಾಟಕದ ಬೆಣ್ಣೆ ನಗರಿ ದಾವಣಗೆರೆಯ ಜನರಿಗೆ ಸಿಹಿಸುದ್ದಿ ನೀಡಿದೆ. ನಗರದ ಸುಮಾರು 3 ರಿಂದ 4 ದಶಕಗಳ ಸಮಸ್ಯೆಯನ್ನು ಪರಿಹಾರ ಮಾಡಲು ಅನುದಾನವನ್ನು ಮಂಜೂರು ಮಾಡಿದೆ. ಇದರಿಂದಾಗಿ ನಗರದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ದಾವಣಗೆರೆಯ ಸಂಸದ, ಬಿಜೆಪಿ ನಾಯಕ ಡಾ. ಜಿ. ಎಂ. ಸಿದ್ದೇಶ್ವರ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ರೈಲ್ವೆ ಸಚಿವಾಲಯ ನಗರದ ಅಶೋಕ ಚಿತ್ರಮಂದಿರದ ಸಮೀಪ ಸೇತುವೆ ನಿರ್ಮಾಣಕ್ಕೆ 49.26 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಸುಮಾರು 3-4 ದಶಕಗಳಿಂದ ನಗರವನ್ನು ಕಾಡುತ್ತಿರುವ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ನಗರದ ಹಳೆ ಮತ್ತು ಹೊಸ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶವಿದಾಗಿದೆ. ಅಶೋಕ ಟಾಕೀಸ್ ಮುಂಭಾಗ ರೈಲ್ವೆ ಗೇಟ್-199ರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಲಘು ವಾಹನಗಳ ಸಂಚಾರಕ್ಕೆ ಕಳೆ ಸೇತುವೆ ನಿರ್ಮಾಣ ಮಾಡಲಾಗಿದೆ. ಈಗ ಭಾರೀ ವಾಹನಗಳ ಸಂಚಾರ ಸಮಸ್ಯೆಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ಯೋಜನೆ ವಿವರ; ಸಂಸದರ ಮಾಹಿತಿ ಪ್ರಕಾರ ಈ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡಲು ನಿರಾಕರಿಸಿತ್ತು. ಆದ್ದರಿಂದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಭೇಟಿ ಮಾಡಿ ಸಂಸದರು ಸಮಸ್ಯೆ ಬಗ್ಗೆ ವಿವರಣೆ ನೀಡಿದ್ದರು.
ಇಲಾಖೆ ಕಾಮಗಾರಿಗೆ ತೊಂದರೆ ಆಗಬಾರದು ಎಂದು ಭೂ ಸ್ವಾಧೀನದ ವೆಚ್ಚ ಸೇರಿ 49.26 ಕೋಟಿ ರೂ. ಹಣವನ್ನು ಮಂಜೂರು ಮಾಡಿದೆ. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಮಾನಾಂತರ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನವಾಗುವ ಭೂ ಮಾಲೀಕರ ಜೊತೆ ಸಭೆ ನಡೆಸಿ ಭೂಮಿ ಪಡೆಯುವ ಕುರಿತು ಒಪ್ಪಿಗೆ ಪಡೆಯಲಾಗುತ್ತದೆ ಎಂದು ಸಂಸದರು ಹೇಳಿದ್ದಾರೆ.
ಯೋಜನೆ ಬಗ್ಗೆ ವಿವರಿಸಿದ ಸಂಸದರು, ಶಾಂತಿ ಚಿತ್ರಮಂದಿರದ ಕಡೆಯಿಂದ ಬರುವ ವಾಹನಗಳು ರೈಲ್ವೆ ಹಳಿ ಪಕ್ಕದ ಕಿರುವಾಡಿ ಹಾಗೂ ಇತರೆ ಜಾಗದ ಮಾಲೀಕರ ಜಾಗದಲ್ಲಿ ನಿರ್ಮಾಣ ಮಾಡುವ 60 ಅಡಿ ಸಮಾನಾಂತರ ರಸ್ತೆಯಲ್ಲಿ ಸಾಗಿ ಪದ್ಮಾಂಜಲಿ ಚಿತ್ರಮಂದಿರದ ಬಳಿ ನಿರ್ಮಾಣವಾಗುವ 2 ಬೃಹತ್ ಗಾತ್ರದ ವೆಂಟ್‌ಗಳಲ್ಲಿ ಒಂದರ ಮೂಲಕ ಈರುಳ್ಳಿ ಮಾರುಕಟ್ಟೆ ಕಡೆಗೆ ಮತ್ತೊಂದರಲ್ಲಿ ಲಿಂಗೇಶ್ವರ ದೇವಾಲಯಕ್ಕೆ ಶಾಂತಿ ಟಾಕೀಸ್ ರಸ್ತೆ ಕಡೆಗೆ ಹೋಗುವ ವಾಹನಗಳು ಸಂಚರಿಸಬಹುದು ಎಂದರು.
ರೈಲ್ವೆ ಹಳಿಗೆ ಸಮಾನಾಂತರವಾಗಿ ಸುಮಾರು 700-800 ಮೀಟರ್ 60 ಅಡಿ ಅಗಲದ ಸಮಾನಾಂತರ ರಸ್ತೆ ನಿರ್ಮಾಣವಾಗಬೇಕಿದೆ ಎಂದು ಸಂಸದರು ಮಾಹಿತಿ ನೀಡಿದರು. ಈ ಪ್ರದೇಶದಲ್ಲಿ ಮೇಲ್ಸೆತುವೆ ಮತ್ತು ಕೆಳ ಸೇತುವೆ ನಿರ್ಮಾಣ ಮಾಡಲು ಮೊದಲು ಶೇ 50ರಷ್ಟು ಅನುದಾನ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಈಗಿನ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ನಿರಾಕರಿಸಿತ್ತು.
ಸಮಾನಾಂತರ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಳ್ಳುವ ಭೂ ಮಾಲೀಕರ ಸಭೆ ನಡೆಸಿ, ಒಪ್ಪಿಗೆ ಪಡೆದು ಭೂಮಿಯನ್ನು ರೈಲ್ವೆ ಇಲಾಖೆ ಹಸ್ತಾಂತರ ಮಾಡಿದರೆ ಕಾಮಗಾರಿಯನ್ನು ಕೈಗೊಳ್ಳಲು ರೈಲ್ವೆ ಇಲಾಖೆ ಟೆಂಡರ್ ಕರೆಯಲಿದೆ. ಕಾಮಗಾರಿ ಯಾವಾಗ ಆರಂಭವಾಗಲಿದೆ?, ಯಾವಾಗ ಮುಕ್ತಾಯವಾಗಲಿದೆ? ಎಂಬ ಬಗ್ಗೆ ಇನ್ನೂ ಗಡುವು ನಿಗದಿಯಾಗಿಲ್ಲ.












Click it and Unblock the Notifications