ಬೆಣ್ಣೆನಗರಿಯಲ್ಲಿ "ಗಂಧದಗುಡಿ" ಸಿನಿಮಾದ ಸಂಭ್ರಮಾಚರಣೆಗೆ ಸಿದ್ಧತೆ, ಇಲ್ಲಿದೆ ವಿವರ
ದಾವಣಗೆರೆ, ಅಕ್ಟೋಬರ್, 23: ಅಖಿಲ ಕರ್ನಾಟಕ ಯುವರಾಜ್ ಕುಮಾರ್ ಸೇನೆ ವತಿಯಿಂದ ಅಕ್ಟೋಬರ್ 28ರಂದು ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಬಹುನಿರೀಕ್ಷಿತ "ಗಂಧದಗುಡಿ'' ಚಿತ್ರದ ಸಂಭ್ರಮಾಚರಣೆಯನ್ನು ಮಾಡಲು ನಿರ್ಧರಿಸಲಾಗಿದೆ. ನಗರದ ವಸಂತ ಚಿತ್ರಮಂದಿರದ ಮುಂಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಪುನೀತ್ ಹಂಪನಗೌಡ್ರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಹಾಗೂ "ಪುನೀತ್‌ಗಾಗಿ ಒಂದು ಸಸಿ ನೆಡಿ' ಎಂಬ ಘೋಷಣೆಯೊಂದಿಗೆ ಸಸಿಗಳನ್ನು ಕೂಡ ವಿತರಿಸಲಾಗುವುದು ಎಂದು ತಿಳಿಸಿದರು.
ತಯಾರಾಗ್ತಿದೆ ಬೃಹತ್ ಕಟೌಟ್
ಅಕ್ಟೋಬರ್ 28ರಂದು ಬೆಳಗ್ಗೆ 10:30ಕ್ಕೆ ಚಿತ್ರ ಪ್ರದರ್ಶನ ಆಗುತ್ತಿದ್ದು, ವಸಂತ್ ಚಿತ್ರ ಮಂದಿರದ ಮುಂದೆ ಅಪ್ಪು ಕಟೌಟ್‌ಗೆ 17 ಅಡಿಯ ಭಾರೀ ಗಾತ್ರದ ಬೃಹತ್ ಹೂವಿನ ಹಾರವನ್ನು ಜೆಸಿಬಿ ಮೂಲಕ ಹಾಕಲಾಗುತ್ತದೆ. ಕಟೌಟ್‌ಗೆ 17 ಲೀಟರ್ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಹಾಗೂ 17 ಕೆ.ಜಿ. ಸಿಹಿ ಹಂಚಲಾಗುತ್ತದೆ. ಅಕ್ಟೋಬರ್ 27ರ ಗುರುವಾರರಂದು 17 ಆಟೋಗಳಿಂದ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ವಸಂತ ಚಿತ್ರಮಂದಿರದಲ್ಲಿ ರಕ್ತದಾನ ಶಿಬಿವರನ್ನು ಸಹ ಆಯೋಜಿಸಲಾಗಿದೆ. ಈ ಮೂಲಕ ಅಪ್ಪು ಅವರನ್ನು ಸ್ಮರಣೀಯವಾಗಿ ಸ್ಮರಿಸುವ ಉದ್ದೇಶ ಹೊಂದಿದ್ದೇವೆ ಎಂದು ವಿವರಿಸಿದರು.

40 ಜನರಿಗೆ ಉಚಿತ ಚಿತ್ರ ಪ್ರದರ್ಶನ
ಜಿಲ್ಲಾ ಗೌರವಾಧ್ಯಕ್ಷ ವಿನಯ್ ಉಪ್ಪಾರ್ ಮಾತನಾಡಿ, ವಿ.ಬಿ.ಪಿ. ಫೌಂಡೇಶನ್‌ನ ಎಚ್.ಐ.ವಿ. ಪೀಡಿತ ಮಕ್ಕಳು ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರು ಸೇರಿ 40 ಜನರಿಗೆ ಉಚಿತ ಚಿತ್ರ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ವಸಂತ ಚಿತ್ರಮಂದಿರದಲ್ಲಿ ಚಪ್ಪರ ಹಾಕಿ, ನಾಸಿಕ್ ಡೋಲಿನ ವ್ಯವಸ್ಥೆಯೊಂದಿಗೆ ಪಟಾಕಿಗಳನ್ನು ಸಿಡಿಸಲಾಗುವುದು. "ಗಂಧದಗುಡಿ" ಚಿತ್ರದ ಮೊದಲ ದಿನದ ಮೊದಲ ಶೋನಲ್ಲಿ ಡಿ.ಜೆ, ಲೈಟ್ಸ್ ಅಳವಡಿಸಿ, ಪೇಪರ್ ಶಾಟ್ಸ್ ಹೊಡೆಯಲಾಗುವುದು.
ಸುದ್ದಿಗೋಷ್ಠಿಯಲ್ಲಿ, ಕೆ.ಎಸ್. ಮನು, ರಾಕೇಶ್, ಹೆಚ್. ಮಾರುತಿ, ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications