ಪೊಲೀಸರೆಂದು ನಂಬಿಸಿ ಲೈಂಗಿಕ ಕಿರುಕುಳ ಕೊಟ್ಟವರು ಜೈಲಿಗೆ
ದಾವಣಗೆರೆ, ಸೆಪ್ಟೆಂಬರ್ 6: ಪೊಲೀಸರೆಂದು ಹೇಳಿಕೊಂಡು ಯುವತಿಯೊಬ್ಬಳನ್ನು ಹೆದರಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಇಬ್ಬರನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ನಿಟ್ಟುವಳ್ಳಿಯ ಮಲ್ಲಿಕಾರ್ಜುನ್, ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಕೆ. ಎನ್. ಸುರೇಶ್ ಬಂಧಿತರು. ಈ ಆರೋಪಿಗಳನ್ನು ನಗರದ ಎಸ್.ವಿ.ಎಸ್. ಕಾನ್ವೆಂಟ್ ಬಳಿ ಬಂಧಿಸಲಾಗಿದೆ.
ಕಳೆದ ತಿಂಗಳ 23ರಂದು ನಗರದ ತುಂಗಭದ್ರಾ ಬಡಾವಣೆಯ ಮುಂಭಾಗದಲ್ಲಿರುವ ದೈವಿಕ್ ಮೋತಿ ಪಿ.ರಾಮರಾವ್ ನಗರದಲ್ಲಿ ಹರಪನಹಳ್ಳಿ ಮೂಲದ ಯುವತಿ ತನ್ನ ಸ್ನೇಹಿತನ ಜೊತೆ ಕುಳಿತಿದ್ದಳು. ಈ ವೇಳೆ ಪೊಲೀಸರೆಂದು ಹೇಳಿಕೊಂಡು ಬಂದ ಮಲ್ಲಿಕಾರ್ಜುನ್ ಹಾಗೂ ಸುರೇಶ್ ಅವರಿಬ್ಬರನ್ನೂ ಬೆದರಿಸಿ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ, ಇಬ್ಬರನ್ನೂ ಬೇರೆ ಬೇರೆ ಮಾಡಿ ನಾಗನೂರಿನ ಬಿಸ್ಲೆರಿಗೆ ಹೋಗುವ ರಸ್ತೆಯ ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಕರೆದೊಯ್ದು, ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸಿದ್ದರು. ಅಲ್ಲದೇ, ಯುವತಿಯ ಸಂಬಂಧಿಗೆ ಕರೆ ಮಾಡಿ, ಈಕೆಯನ್ನು ಬಿಡಲು 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಯುವತಿ ವಿರೋಧಿಸಲು ಆರಂಭಿಸಿದಾಗ ಆಕೆಯ ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಇದೀಗ ಆರೋಪಿಗಳನ್ನು ಹಿಡಿಯುವಲ್ಲಿ ತಂಡ ಯಶಸ್ವಿಯಾಗಿದೆ.











Click it and Unblock the Notifications