ದಾವಣಗೆರೆ: ಅನಾಥ ಮಕ್ಕಳೊಂದಿಗೆ ಹೊಸ ವರ್ಷಾಚರಣೆ
ದಾವಣಗೆರೆ, ಜನವರಿ, 01: ಹೊಸ ವರ್ಷಾಚರಣೆ ಬಂದರೆ ಮದ್ಯ, ಕುಣಿತ, ಅತಿಯಾದ ಮದ್ಯ ಸೇವಿಸಿ ಮನಸ್ಸಿಗೆ ಬಂದಂತೆ ಡ್ಯಾನ್ಸ್, ಕೇಳಲು ಅಸಾಧ್ಯ ಎನಿಸುವಂತ ಸಂಗೀತ, ಜೊತೆಗೆ ತೂರಾಡುತ್ತಾ, ಕೇಕೆ ಹೊಡೆಯುತ್ತಾ ಹೊಸ ವರ್ಷಾಚರಣೆ ಬರಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ಕುಡಿದ ಅಮಲಿನಲ್ಲಿ ಏನೇನೆಲ್ಲಾ ರಾದ್ಧಾಂತ ನಡೆಯಿತು ಎಂಬುದನ್ನು ನೋಡಿದ್ದೀರಾ. ಅದೇ ರೀತಿಯಲ್ಲಿ ಕೆಲವರಂತೂ ಕುಣಿಯಲು, ಕುಡಿಯಲಿಕ್ಕೆ ಇರುವುದು ಹೊಸವರ್ಷ ಎಂದುಕೊಂಡಿರುವವರೇ ಹೆಚ್ಚು.
ಆದರೆ ದಾವಣಗೆರೆ ಜಿಲ್ಲಾ ಜವಾಹ್ ಬಾಲ್ ಮಂಚ್ ವಿಭಿನ್ನ, ವಿಶಿಷ್ಟ ಕಾರ್ಯಕ್ರಮ ಆಯೋಜಿಸಿತ್ತು. ವಿನೂತನವಾಗಿ ಹೊಸ ವರ್ಷ ಬರಮಾಡಿಕೊಂಡಿತು. ಅನಾಥ ಮಕ್ಕಳೊಂದಿಗೆ ಹೊಸ ವರ್ಷಾಚರಣೆ ಆಚರಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

ಆ ಮಕ್ಕಳೆಲ್ಲರೂ ಅನಾಥರು. ಕೆಲವರಿಗೆ ಪೋಷಕರೂ ಇದ್ದರೂ ಇಲ್ಲದಂತೆ. ಈ ಜಗತ್ತಿನಲ್ಲಿ ತಂದೆ-ತಾಯಿ ಪ್ರೀತಿ ಇಲ್ಲ, ನಮಗೆ ಹೊಸ ವರ್ಷ ಆಚರಿಸುವುದು ಹೇಗೆ ಎಂಬ ಕೊರಗಿನಲ್ಲಿ ಮಕ್ಕಳು ಇದ್ದರು. ಈ ಮಕ್ಕಳಿಗಾಗಿ ವಿಶೇಷ ಬಸ್ ಆಯೋಜಿಸಿ ಒಂದು ದಿನದ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗುವ ಮೂಲಕ ಅವರಿಗೂ ಹೊಸ ವರ್ಷಾಚರಣೆ ಆಚರಿಸುವಂತೆ ಮಾಡಿದ್ದು ಜವಾಹಾರ್ ಬಾಲ್ ಮಂಚ್‌ನ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ.
ಯಾರು ಈ ಅನಾಥ ಮಕ್ಕಳು?
ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಸಮಿತಿವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿತು. ಈ ಬಾರಿ ನಗರದ ಶ್ರೀ ಓಂಕಾರ ಹುಚ್ಚನಾಗಲಿಂಗೇಶ್ವರ ಅನಾಥ ಸೇವಾಶ್ರಮದ ಎಲ್ಲಾ ಮಕ್ಕಳನ್ನು ಒಂದು ದಿನದ ಹೊರ ಸಂಚಾರಕ್ಕೆ ಕರೆದೊಯ್ಯುವುದರೊಂದಿಗೆ ಹೊಸ ವರ್ಷವನ್ನು ಬಹಳ ವಿಭಿನ್ನ ಹಾಗೂ ವಿಶೇಷವಾಗಿ ಬರಮಾಡಿಕೊಂಡಿತು.
ಯಾಕಾಗಿ ಈ ಸಾರ್ಥಕ ಆಚರಣೆ?
ಹೊಸ ವರ್ಷವೆಂದರೆ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡುವವರೇ ಹೆಚ್ಚು. ಅಬ್ಬರದ ಮ್ಯೂಸಿಕ್ ನಡುವೆ ಮದ್ಯದ ಅಮಲಿನಲ್ಲಿ ತೇಲುತ್ತಾ ಬರಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಜವಾಹರ್ ಬಾಲ್ ಮಂಚ್ ನಾ ಜಿಲ್ಲಾ ಸಮಿತಿಯವರು ಅನಾಥ ಮಕ್ಕಳೊಂದಿಗೆ ಇಡೀ ದಿನ ಬೆರೆತು ಅವರೂ ಸಹ ನಮ್ಮಂತಯೇ ಸಂತೋಷವಾಗಿರಬೇಕೆಂದ ಸದುದ್ದೇಶದಿಂದ ಪಿಕ್ ನಿಕ್ ಕರೆದುಕೊಂಡು ಹೋಗಿತ್ತು. ನಗರದಿಂದ ಹೊರಗಡೆ ಒಂದು ದಿನದ ಹೊರಸಂಚಾರಕ್ಕೆ ಕರೆದೊಯ್ಯುವುದರೊಂದಿಗೆ ಮಕ್ಕಳ ಕೈಲಿ ಕೇಕ್ ಕತ್ತರಿಸಿ ಮಕ್ಕಳೊಂದಿಗೆ ಸಂಭ್ರಮಾಚರಣೆ ಮಾಡಿ ಸಂತೋಷ ವ್ಯಕ್ತಪಡಿಸಿತು.
ಚಿತ್ರದುರ್ಗದ ಮುರುಘಾ ಮಠಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿನ ಪಾರ್ಕ್, ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮಕ್ಕಳ ಜೊತೆ ಬಾಲ್ ಮಂಚ್ ಪದಾಧಿಕಾರಿಗಳು ಖುಷಿ ಪಟ್ಟರು. ಮಕ್ಕಳೂ ಸಹ ತಮಗೆ ಯಾರೂ ಇಲ್ಲ ಎಂಬುದನ್ನು ಮರೆತು ಸಂತೋಷವಾಗಿ ಆಟವಾಡಿದರು. ಕೇಕ್ ಕತ್ತರಿಸಿ ತಿಂದು ಸಂಭ್ರಮಿಸಿದರು. ಈ ಜಗತ್ತಿನಲ್ಲಿ ನಮಗೆ ಯಾರೂ ಇಲ್ಲ ಎಂಬ ಕೊರಗು ಮರೆತು ಎಲ್ಲರೊಟ್ಟಿಗೆ ಬೆರೆತು ಹೊಸ ವರ್ಷ ಬರಮಾಡಿಕೊಂಡಿದ್ದು ವಿಶೇಷ.
ಪ್ರತಿ ವರ್ಷ ಹೊಸ ವರ್ಷವನ್ನು ವಿಶೇಷವಾಗಿ ಹಲವಾರು ಕಡೆ ಆಚರಿಸುತ್ತಾ ಬಂದಿದ್ದು, ಅದರಂತೆ ಈ ಬಾರಿ ಈ ಅನಾಥಾಶ್ರಮದ ಮಕ್ಕಳೊಂದಿಗೆ ಬೆರೆತು ಹೊಸ ವರ್ಷ ಆಚರಿಸಿದೆವು. ಅವರು ಅನಾಥರಲ್ಲ, ಅವರೊಂದಿಗೆ ನಾವಿದ್ದೇವೆ. ಅವರೂ ಸಹ ನಮ್ಮಂತೆಯೇ ಸಂಭ್ರಮಿಸಬೇಕು ಎನ್ನುವ ಉದ್ದೇಶದಿಂದ ನಮ್ಮೆಲ್ಲ ಪದಾಧಿಕಾರಿಗಳೊಂದಿಗೆ ಒಂದು ದಿನದ ಹೊರ ಸಂಚಾರ ಕಾರ್ಯಕ್ರಮ ನಡೆಸಿದೆವು. ಈ ಕಾರ್ಯಕ್ರಮಕ್ಕೆ ನಮ್ಮೆಲ್ಲ ಪದಾಧಿಕಾರಿಗಳ ಸಹಕಾರ ನೀಡಿದ್ದು ಸಂತೋಷ ತಂದಿದೆ. ಇನ್ಮುಂದೆ ಹೆಚ್ಚು ಇಂತಹ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಆಸಕ್ತಿ ಹೊಂದಿರುವುದಾಗಿ ಹೇಳುತ್ತಾರೆ ಮೊಹಮ್ಮದ್ ಜಿಕ್ರಿಯಾ.
ಎಲ್ಲಾ ಮಕ್ಕಳನ್ನು ಚಿತ್ರದುರ್ಗಕ್ಕೆ ಹೊರಸಂಚಾರಕ್ಕೆ ಕರೆದೊಯ್ದು ಅಲ್ಲಿ ಮಕ್ಕಳ ಕೈಯಲ್ಲಿ ಕೇಕ್ ಕತ್ತರಿಸಿ, ಮಕ್ಕಳೊಂದಿಗೆ ಹೊಸ ವರ್ಷವನ್ನು ವಿಶೇಷವಾಗಿ ಬರಮಾಡಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ 2024ಕ್ಕೆ ಕಾಲಿಡಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕೆ.ಹೆಚ್.ಪ್ರೇಮಾ, ಶಿಲ್ಪಾ ಪರಶುರಾಮ್, ಫಯಾಜ್ ಅಹ್ಮದ್, ಮಹಬೂಬ್ ಸಾಬ್ ಹಾಗೂ ಇತರೆ ಪದಾಧಿಕಾರಿಗಳು ಹಾಜರಿದ್ದರು. ದಿನಪೂರ್ತಿ ಮಕ್ಕಳು ಸಂತೋಷವಾಗಿ ಕಳೆದದ್ದು ನಮಗೆ ಸಂತಸ ತಂದಿದೆ ಎಂದು ಬಾಲ್ ಮಂಚ್ ಸದಸ್ಯರು ಹೇಳಿದರು.












Click it and Unblock the Notifications