ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ನವೀನ್ ಮೃತದೇಹ ಹಸ್ತಾಂತರ: ನೋವಿನಲ್ಲೂ ಸಾರ್ಥಕತೆ ಮೆರೆದ ತಾಯಿ...!
ದಾವಣಗೆರೆ ಮಾರ್ಚ್ 21: ಆ ತಾಯಿ ಮೊಗದಲ್ಲಿ ನೋವು ಮಡುಗಟ್ಟಿತ್ತು. ಹೇಳಿಕೊಳ್ಳಲಾಗದಷ್ಟು ದುಃಖ. ವಿದೇಶದಲ್ಲಿ ಓದುತ್ತಿದ್ದ ಮಗನನ್ನು ಕಳೆದುಕೊಂಡು ಕಳೆದ 20 ದಿನಗಳಿಂದಲೂ ಕಣ್ಣೀರ ಕಡಲಲ್ಲಿದ್ದರು. ಕೊನೆಗೆ ಮಗನ ಕಳೆಬರಹ ನೋಡಲು ಅವಕಾಶವಾದರೂ ಸಿಕ್ಕಿತಲ್ಲ ಎಂಬ ಸ್ವಲ್ಪ ಸಮಾಧಾನ. ಮಗನನ್ನು ಕಳೆದುಕೊಂಡರೂ ಆತನಿಗೆ ಸಿಕ್ಕ ಗೌರವ, ಹರಿದು ಬಂದ ಜನಸಾಗರ ಕಂಡು ಮಮ್ಮಲ ಮರಗಿದ ಜೀವ. ಕೊನೆಗೂ ಮಗನ ದೇಹವನ್ನು ದಾವಣಗೆರೆಯ ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ಹಸ್ತಾಂತರಿಸಿದ ಧನ್ಯತಾ ಭಾವ ಆ ಮಹಾತಾಯಿಯ ಮುಖದಲ್ಲಿ ಕಂಡು ಬಂತು.
ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ತಾಯಿ ಅವರು ಎಸ್. ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಮಗನ ಮೃತದೇಹ ಹಸ್ತಾಂತರದ ವೇಳೆ ಕಂಡುಬಂದ ಚಿತ್ರಣ. ಇನ್ನು ನವೀನ್ ಸಹೋದರ ಹರ್ಷ ಮೊಗದಲ್ಲಿಯೂ ನೋವಿನ ಕಾರ್ಮೋಡ ಕವಿದಿತ್ತು. ಸಹೋದರನಿಗೆ ಸಿಹಿಮುತ್ತು ನೀಡಿ ದೇಹ ಹಸ್ತಾಂತರ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ವೇಳೆ ಗುಂಡಿನ ದಾಳಿಗೆ ನವೀನ್ ಬಲಿಯಾಗಿದ್ದರು. ಆ ಮೃತದೇಹ ಭಾರತಕ್ಕೆ ಬಂದು ನವೀನ್ ಹುಟ್ಟೂರಿಗೆ ಬರಲು ಇಷ್ಟು ದಿನವೇ ಬೇಕಾಯಿತು. ಇನ್ನು ಕಳೆದ ಎರಡರಿಂದ ಮೂರು ದಿನಗಳ ಹಿಂದೆ ನವೀನ್ ತಂದೆ ಅವರು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ನವೀನ್ ಮೃತದೇಹ ನೀಡುವುದಾಗಿ ಘೋಷಣೆ ಮಾಡಿದ್ದರು. ಇಂದು ಹಾವೇರಿ ಜಿಲ್ಲೆಯ ಚಳಗೇರಿಯಲ್ಲಿ ಪೂಜೆ ನೆರವೇರಿಸಿ, ಮೆರವಣಿಗೆ ಮಾಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ, ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ, ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡು ಅಂತಿಮದರ್ಶನ ಪಡೆದರು. ಸ್ನೇಹಿತರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಎಲ್ಲಾ ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ನವೀನ್ ಮೃತದೇಹವನ್ನು ದಾವಣಗೆರೆಯ ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ದಾನ ಮಾಡಲಾಯಿತು. ದಾವಣಗೆರೆಯ ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ಹಸ್ತಾಂತರ ಮಾಡಿದ ನವೀನ್ ತಾಯಿ ಮೊಗದಲ್ಲಿ ದುಃಖ ಮಡುಗುಟ್ಟಿತ್ತು. ಉಮ್ಮಳಿಸಿ ಬರುತ್ತಿದ್ದ ಕಣ್ಣೀರು ತಡೆದುಕೊಂಡು ಮಗನ ಮೃತದೇಹವನ್ನು ನೋವಿನಲ್ಲಿಯೂ ಹಸ್ತಾಂತರ ಮಾಡಿದರೂ ಸಾರ್ಥಕ ಭಾವನೆ ಕಂಡು ಬಂತು.
Koo Appವೈದ್ಯನಾಗುವ ಕನಸು ಹೊತ್ತ ತಮ್ಮ ಮಗನ ಕನಸು ಈಡೇರದಿದ್ದರೂ, ಮಗನ ಶರೀರ ವೈದ್ಯಕೀಯ ಶಿಕ್ಷಣ ಪಡೆಯುವ ಇತರ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ನವೀನ್ ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ ಪೋಷಕರ ಹೃದಯ ವೈಶಾಲ್ಯತೆಗೆ ತಲೆಬಾಗುವೆ🙏🏼. ಪುತ್ರಶೋಕದ ನಡುವೆಯೂ ಸಾರ್ಥಕತೆ ಮೆರೆದ ನವೀನ್ ಅವರ ಪೋಷಕರಿಗೆ ಧನ್ಯವಾದಗಳು🙏🏼. - Dr. Sudhakar K (@drsudhakark.official) 21 Mar 2022
ಹಾವೇರಿ ಜಿಲ್ಲೆಯ ಚಳಗೇರಿಯಿಂದ ಎಸ್ ಎಸ್ ಆಸ್ಪತ್ರೆಗೆ ಮೃತದೇಹ ತರಲಾಯಿತು. ಬಳಿಕ ಹಸ್ತಾಂತರ ಮಾಡಲಾಯಿತು. ಮೃತದೇಹ ಹಸ್ತಾಂತರ ಪ್ರಕ್ರಿಯೆಯನ್ನು ಆಸ್ಪತ್ರೆ ಅನಾಟಮಿ ವಿಭಾಗದ ಮುಖ್ಯಸ್ಥ ಎ ಎಸ್ ಅಂಗಡಿ ನೇತೃತ್ವದಲ್ಲಿ ಮಾಡಲಾಯಿತು. ಕಾನೂನಾತ್ಮಕ ದಾಖಲಾತಿಗಳನ್ನು ಪೂರ್ಣಗೊಳಿಸಿ ಮೃತದೇಹ ಪಡೆದ ಆಸ್ಪತ್ರೆ ಸಿಬ್ಬಂದಿಯೂ ಭಾವುಕರಾಗಿದ್ದರು. ಒಪ್ಪಿಗೆ ಸೂಚಿಸಿ ಆಸ್ಪತ್ರೆಯ ದಾಖಲಾತಿಗಳಿಗೆ ಸಹಿಯನ್ನು ನವೀನ್ ತಾಯಿ ಹಾಗೂ ಅಣ್ಣ ಹರ್ಷ ಮಾಡಿದರು.












Click it and Unblock the Notifications