M.P.ರೇಣುಕಾಚಾರ್ಯ ಕಾಂಗ್ರೆಸ್ ಸೇರುವ ಅವಶ್ಯಕತೆಯಿಲ್ಲ, ವಿವಾದಾತ್ಮಕ ವ್ಯಕ್ತಿ ಬೇಡ್ವೇ ಬೇಡ: ಹೆಚ್. ಬಿ. ಮಂಜಪ್ಪ
ದಾವಣಗೆರೆ, ಆಗಸ್ಟ್, 31: ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆಯಾಗುವ ಅವಶ್ಯಕೆ ಇಲ್ಲ. ಪಕ್ಷಕ್ಕೆ ಅನಿವಾರ್ಯವೇನೂ ಇಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಮೂಲಕ ಬಿಜೆಪಿ ಹಾಗೂ ಕಾರ್ಯಕರ್ತರು ಗೊಂದಲಕ್ಕೀಡಾಗುವಂತೆ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಈ ದೇಶದ ಆಸ್ತಿ. ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ವಿರೋಧಿ ಧೋರಣೆ ಹೊಂದಿರುವ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಅನಿವಾರ್ಯವಲ್ಲ. ಬ್ಲಾಕ್ ಮೇಲ್ ರಾಜಕಾರಣಕ್ಕೆ ಹೆಸರಾಗಿರುವ ರೇಣುಕಾಚಾರ್ಯಗೆ ಅಧಿಕಾರ ನೀಡಿದ ಯಡಿಯೂರಪ್ಪನವರ ವಿರುದ್ಧ ಶಾಸಕರನ್ನು ಎತ್ತಿಕಟ್ಟಿ ಅಧಿಕಾರದಿಂದ ಇಳಿಸಿ ಇಂದು ಯಡಿಯೂರಪ್ಪನವರ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೇಣುಕಾಚಾರ್ಯ ತನ್ನದೇ ಪಕ್ಷದ ವಿರುದ್ಧ ಮಾತನಾಡುತ್ತಿರುವುದು ಏಕೆ? ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಅಭಿವೃದ್ಧಿ ಹೆಸರಲ್ಲಿ ಭೇಟಿ ಮಾಡುತ್ತಿದ್ದಾರೆ. ರೇಣುಕಾಚಾರ್ಯ ಅಧಿಕಾರ ಇದ್ದಾಗ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತು. ಹೊನ್ನಾಳಿ ಕ್ಷೇತ್ರದಲ್ಲಿ ರೇಣುಕಾಚಾರ ಅಭಿವೃದ್ಧಿ ಮಾಡಿದ್ದರೆ ಜನರು ಅವರ ಪರ ಇರುತ್ತಿದ್ದರು. ಆದರೆ ಎಂದೂ ಸಹ ಅಭಿವೃದ್ಧಿ ಬಗ್ಗೆ ಗಮನವೇ ನೀಡದೇ ಕೇವಲ ಬ್ಲಾಕ್ ಮೇಲ್ ರಾಜಕಾರಣ ಮಾಡಿದರು ಎಂದು ಆರೋಪಿಸಿದರು.
ಇಂತವರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಸಂಪೂರ್ಣ ಸಂವಿಧಾನ ವಿರೋಧಿ ನಡೆ ಹೊಂದಿರುವ ರೇಣುಕಾಚಾರ್ಯ ಒಂದು ಕೋಮು, ಜಾತಿ - ಧರ್ಮದ ಹೆಸರಿನಲ್ಲಿ ಮತ ಕೇಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ಎಲ್ಲಾ ಜಾತಿ, ಧರ್ಮದವರು ಸರಿಸಮಾನರು ಎಂದರು.
ರೇಣುಕಾಚಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿರೋಧ ವ್ಯಕ್ತಪಡಿಸಲಿದೆ. ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ. ರೇಣುಕಾಚಾರ್ಯ ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಅಂತಹ ಸನ್ನಿವೇಶ ನಿರ್ಮಾಣ ಆದರೆ ನಿಯೋಗಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು. ಯಾವುದೇ ಕಾರಣಕ್ಕೂ ಪಕ್ಷದ ನಾಯಕರು ಇದಕ್ಕೆ ಸಮ್ಮತಿ ಸೂಚಿಸಬಾರದು ಎಂದರು.
ಇನ್ನು ಸಿಎಂ, ಡಿಸಿಎಂ, ಸಚಿವರ ಭೇಟಿ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟಿದ್ದಾರೆ. ಹೊನ್ನಾಳಿಯಲ್ಲಿ ಶಾಂತನಗೌಡರು ಕೆಲಸ ಮಾಡುತ್ತಿಲ್ಲ, ನಾನೇ ಈಗಲೂ ಕೆಲಸ ಮಾಡಿಸುತ್ತಿದ್ದೇನೆ ಎಂದು ಒಂದೆಡೆ ತೋರಿಸುವುದು, ಮತ್ತೊಂದೆಡೆ ಬಿಜೆಪಿ ನಾಯಕರು ಕರೆದು ಮಾತನಾಡಲಿ ಎಂಬ ಉದ್ದೇಶ ಹೊಂದಿರುವುದರಿಂದಲೇ ಈ ರೀತಿಯ ವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಮೇಲೆ ರೇಣುಕಾಚಾರ್ಯರಿಗೆ ಬುದ್ದಿಭ್ರಮಣೆ ಆಗಿದೆ. ಯಡಿಯೂರಪ್ಪರ ಮಾನಸ ಪುತ್ರ ಎನ್ನುವ ಬದಲು ಮಾನಸಿಕ ಪುತ್ರ ಎಂದು ಅವರೇ ಈ ಹಿಂದೆ ಹೇಳಿದ್ದರು. ಸಚಿವ ಸ್ಥಾನ, ಸಿಎಂ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಹಲವು ಹುದ್ದೆಗಳನ್ನು ಬಿಜೆಪಿ ಕೊಟ್ಟಿದೆ. ಅಂಹ ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರೇಣುಕಾಚಾರ್ಯ ಅವರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟ ತುಂಬಾ ಉಂಟಾಗುತ್ತದೆ. ಕಾರ್ಯಕರ್ತರು ಗೊಂದಲದಲ್ಲಿ ಸಿಲುಕಿದ್ದಾರೆ. ಈ ಕಾರಣಕ್ಕೆ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆಯಾಗುವುದು ಯಾವುದೇ ಕಾರಣಕ್ಕೂ ಬೇಡ. ಪಕ್ಷದ ತತ್ವ, ಸಿದ್ಧಾಂತ ಪಾಲಿಸಿದವರಲ್ಲ ಎಂದರು.
ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲೇ ವರ್ತನೆ ಸರಿಯಿರಲಿಲ್ಲ. ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮಗಳನ್ನು ಒಳಗೊಂಡಿರುವ ಪಕ್ಷ. ನಾವೆಲ್ಲರೂ ರೇಣುಕಾಚಾರ್ಯ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರೆ ಯಾವ ಸ್ಥಾನ ನೀಡಲಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಹಾಗಾಗಿ, ಭ್ರಷ್ಟಾಚಾರದ ಆರೋಪವೂ ಅವರ ಮೇಲಿದೆ. ಇಂಥವರು ಪಕ್ಷಕ್ಕೆ ಬರದಿದ್ದರೆ ಒಳ್ಳೆಯದು ಎಂದು ಹೇಳಿದರು.
ರೇಣುಕಾಚಾರ್ಯ ವಿವಾದಾತ್ಮಕ ವ್ಯಕ್ತಿ. ಏನನ್ನೋ ಮಾತನಾಡುತ್ತಾರೆ. ಪ್ರಚಾರ ಪ್ರಿಯರು. ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು, ಜನರ ಸಿಂಪಥಿ ಗಿಟ್ಟಿಸಿಕೊಳ್ಳಲು ನಡೆಸುತ್ತಿರುವ ಷಡ್ಯಂತ್ರ. ಇದಕ್ಕೆ ಜನರು ಸೊಪ್ಪು ಹಾಕುವುದಿಲ್ಲ. ಇಂತಹ ನಾಟಕವಾಡಿದ್ದಕ್ಕೆ ಜನರು ರೇಣುಕಾಚಾರ್ಯರನ್ನು ಸೋಲಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಉತ್ತರ ಬ್ಲಾಕ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಬಾಯಿ, ಡೋಲಿ ಚಂದ್ರು, ರಾಜೇಶ್ವರಿ, ದಾಕ್ಷಾಯಿಣಿ, ಅನಿಲ್, ಹರೀಶ್ ಬಸಾಪುರ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications