ದಾವಣಗೆರೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ದಾವಣಗೆರೆ, ಮಾರ್ಚ್, 06: ಸಾಮಾನ್ಯವಾಗಿ ಆದಾಯಕ್ಕಿಂತ ಹೆಚ್ಚು ಹಾಗೂ ದಾಖಲೆ ರಹಿತ ಹಣ ಹೊಂದಿರುವ ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಹಾಗೆಯೇ ಇದೀಗ ಇಂದು (ಮಾರ್ಚ್ 06) ದಾವಣಗೆರೆ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಜಿಲ್ಲಾ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಘಟಕದ ಜಿಲ್ಲಾ ಸಾಂಖಿಕ ಅಧಿಕಾರಿ ಡಾ.ಜಿ.ಎಸ್.ನಾಗರಾಜು ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು (ಮಾರ್ಚ್ 06) ದಾಳಿ ನಡೆಸಿದ್ದಾರೆ. ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ನಾಗರಾಜು ಅವರ ಮನೆ, ತಂದೆ ಷಣ್ಮುಖಪ್ಪ ಅವರ ನಿವಾಸ, ಫಾರಂಹೌಸ್, ಕಚೇರಿ ಹಾಗೂ ಕುಟುಂಬದ ಕಿಡಿತದಲ್ಲಿರುವ ಸಹಕಾರ ಸಂಘದ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಚಿನ್ನಾಭರಣ, ಹಣ ಸೇರಿದಂತೆ ಅಪಾರ ಸಂಪತ್ತು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿದ ಆರೋಪದ ಮೇಲೆ ನಾಗರಾಜು ಅವರಿಗೆ ಸೇರಿದ 5 ಸ್ಥಳಗಳ ಮೇಲೆ ದಾಳಿ ನಡೆದಿದೆ. ಡಿವೈಎಸ್‌ಪಿ, ಎನ್ಸ್‌ಪೆಕ್ಟರ್ ಸೇರಿ ಹಲವು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಇದೀಗ ದಾಳಿ ಸ್ಥಳಗಳಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪುರ ಮಾಹಿತಿ ನೀಡಿದ್ದಾರೆ.

ಯಾವ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ?: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರು, ಕೋಲಾರ, ತುಮಕೂರು, ಕಲಬುರಗಿ, ವಿಜಯಪುರ, ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
* ಬೆಂಗಳೂರಿನ ಡಿಪಿಎಆರ್ ಚೀಫ್ ಇಂಜಿನಿಯರ್ ಟಿ.ಡಿ.ನಂಜುಡಪ್ಪ, ಬಿಬಿಎಂಪಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಬಿ.ಕಲ್ಲೇಶಪ್ಪ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
* ತುಮಕೂರಿನ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಪಿ. ಜಗದೀಶ್; ಬಾಗಲಕೋಟೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮಾಳಪ್ಪ ಸಾಬಣ್ಣ ದುರ್ಗದ; ಮತ್ತು ವಿಜಯಪುರದ ವಸತಿ ಮಂಡಳಿಯ ಎಫ್‌ಡಿಎ ಶಿವಾನಂದ ಶಿವ ಶಂಕರ್ ಕೆಂಭಾವಿ ಅವರ ಮೇಲೆ ದಾಳಿ ಸಹ ದಾಳಿ ನಡೆಸಲಾಗಿದೆ.
* ಕೋಲಾರದಲ್ಲಿ ಬೆಸ್ಕಾಂ ಎಇಇ ಜಿ.ನಾಗರಾಜ್ ಮನೆ ಹಾಗೂ ಅವರಿಗೆ ಸೇರಿದ ಮೂರು ಕಡೆ ದಾಳಿ ನಡೆದಿದೆ. ನಾಗರಾಜ್ ಪ್ರಸ್ತುತ ಬೆಂಗಳೂರು ರಾಜಾಜಿನಗರ ಎಇಇ ಬೆಸ್ಕಾಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಾಜ್ ಅವರ ನಿವಾಸ, ಕೆ.ಆರ್.ಪುರಂ ಬಳಿಯ ಪ್ರಿಯದರ್ಶಿನಿ ಬಡಾವಣೆಯಲ್ಲಿನ ಮನೆ, ರಾಜಾಜಿನಗರ ಬೆಸ್ಕಾಂ ಕಚೇರಿ, ಅವರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆದಿದೆ.
* ಬಾಗಲಕೋಟೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಅಕೌಂಟೆಂಟ್ ಮಲ್ಲೇಶ್ ಅವರ ಬಾಗಲಕೋಟೆ ಕಚೇರಿ, ಬೀಳಗಿ ತಾಲೂಕಿನ ತಳ್ಳಿಕೇರಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
* ವಿಜಯಪುರದಲ್ಲಿ ಕರ್ನಾಟಕ ಗೃಹ ಮಂಡಳಿ ಎಫ್‌ಡಿಎ ಶಿವಾನಂದ ಕೆಂಬಾವಿ ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ ಮತ್ತು ವಿಜಯಪುರ ಜಿಲ್ಲೆ ತಿಡಗುಂದಿ ಗ್ರಾಮದ ಬಳಿಯಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಲೋಕಾಯುಕ್ತ ಎಸ್ಪಿ ಡಿ. ಮಲ್ಲೇಶ್ ನೇತೃತ್ವದಲ್ಲಿ ಡಿವೈಎಸ್ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕಣ್ಣನವರ್ ಸೇರಿದಂತೆ ಅಧಿಕಾರಿಗಳ ತಂಡ ಈ ದಾಳಿಯನ್ನು ನಡೆಸಿದೆ.
* ಕಲಬುರಗಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯ ಸೆಕ್ರೆಟರಿ ಇನ್ ಚೀಫ್ ಜಗನ್ನಾಥ್ ಹಲಿಂಗೆ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಕಲಬುರಗಿ ನಗರದ ಓಕಳಿ ಕ್ಯಾಂಪ್ ಬಡಾವಣೆಯಲ್ಲಿರುವ ಮನೆ, ಬೆಂಗಳೂರಿನ ಕಚೇರಿ, ಧನ್ನೂರ್ (ಕೆ) ಗ್ರಾಮದಲ್ಲಿರುವ ಮನೆ ಸೇರಿದಂತೆ ಒಟ್ಟು 3 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
* ಬಾಗಲಕೋಟೆ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೀಳಗಿ ಪಂಚಾಯತ್ ರಾಜ್ ಇಲಾಖೆಯ ಅಕೌಂಟೆಂಟ್ ಮಲ್ಲೇಶ್ ದುರ್ಗದ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಬಾಗಲಕೋಟೆ ಹಳೆ ವೀರಾಪುರ ರಸ್ತೆಯಲ್ಲಿರುವ ಮನೆ, ಮಲ್ಲೇಶ್ ಅವರ ಸ್ವಗ್ರಾಮ ತಳ್ಳಿಕೇರಿಯಲ್ಲಿರುವ ಮನೆ ಸೇರಿದಂತೆ ಒಟ್ಟು 3 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.












Click it and Unblock the Notifications