ಲಾಕ್ ಡೌನ್ ಘೋಷಣೆ; ಮದ್ಯ ಖರೀದಿಗೆ ಮುಗಿಬಿದ್ದ ಜನ!
ದಾವಣಗೆರೆ, ಏಪ್ರಿಲ್ 26; ಕರ್ನಾಟಕ ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಬುಧವಾರ ರಾತ್ರಿಯಿಂದ ಲಾಕ್ ಡೌನ್ ಜಾರಿಗೆ ಬರಲಿದೆ.
ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಮದ್ಯ ಖರೀದಿಸಲು ಮದ್ಯಪ್ರಿಯರು ಬೆಣ್ಣೆನಗರಿ ದಾವಣಗೆರೆಯಲ್ಲಿ ಮುಗಿಬಿದ್ದಿದ್ದಾರೆ. ನಗರದಲ್ಲಿ ವೈನ್ ಶಾಪ್ ಹಾಗೂ ಎಂಐಎಸ್ಎಲ್‌ಗಳ ಮುಂದೆ ಜನರು ಜಮಾಯಿಸಿದ ದೃಶ್ಯ ಕಂಡು ಬರುತ್ತಿದೆ.
ದಾವಣಗೆರೆ ನಗರದಲ್ಲಿ ಮದ್ಯದಂಗಡಿಗಳು ಫುಲ್ ರಶ್ ಆಗಿದ್ದು, ಮದ್ಯದ ವಹಿವಾಟು ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಪಾನಪ್ರಿಯರು ಮದ್ಯದಂಗಡಿಗಳಿಗೆ ಆಗಮಿಸುತ್ತಿದ್ದಾರೆ.

ಚೀಲದಲ್ಲಿ, ಡಬ್ಬಗಳಲ್ಲಿ, ಸ್ಕೂಟಿ ಹಾಗೂ ಕಾರ್ ಗಳಲ್ಲಿ ಬಂದು ಅಗತ್ಯಕ್ಕೆ ತಕ್ಕಷ್ಟು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಪರಿಣಾಮ ದಾವಣಗೆರೆಯ ಬಾರ್‌ಗಳು ಇದೀಗ ಪಾನಪ್ರಿಯರಿಂದ ತುಂಬಿ ತುಳುಕುತ್ತಿವೆ.
ಲಾಕ್‌ಡೌನ್ ಮಾಡಿದರೆ ಮುಂದೆ ಮದ್ಯದ ಸಿಗಲ್ಲ ಎಂಬ ಭಯದಿಂದ ವಾರ ಮತ್ತು ಎರಡು ವಾರಕ್ಕೆ ಸ್ಟಾಕ್ ಇರಲಿ ಎಂದು ಇಂದೇ ಸಂಗ್ರಹವನ್ನು ಆರಂಭಿಸಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ಮಾಡಿದಾಗ ಮದ್ಯಪ್ರಿಯರು ಪರದಾಡಿದ್ದರು.
ಲಾಕ್ ಡೌನ್ ಘೋಷಣೆ ಮಾಡಿದರೂ ಬೆಳಗ್ಗೆ 6 ರಿಂದ 10 ಗಂಟೆಯ ತನಕ ಮದ್ಯದಂಗಡಿಗಳು ತೆರೆದಿರುತ್ತವೆ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ, ಜನರು ಮಾತ್ರ ಈಗಲೇ ಖರೀದಿಗೆ ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದಾರೆ.












Click it and Unblock the Notifications