ಕುಮಾರಸ್ವಾಮಿ ಹಗುರವಾಗಿ ಮಾತನಾಡಬಾರದಿತ್ತು; ಎಸ್. ಆರ್. ಪಾಟೀಲ್
ದಾವಣಗೆರೆ, ಜುಲೈ 06; "ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಗ್ಗೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದು ತಪ್ಪು" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಎಸ್. ಆರ್. ಪಾಟೀಲ್ ಹೇಳಿದರು.
ಮಂಗಳವಾರ ದಾವಣಗೆರೆಯಲ್ಲಿ ಮಾತನಾಡಿದ ಅವರು, "ಸುಮಲತಾ ಒಬ್ಬ ಮಹಿಳಾ ಸಂಸದೆ. ಅಂಥವರ ಬಗ್ಗೆ ಈ ರೀತಿ ಮಾತನಾಡಬಾರದು. ಸಿಎಂ ಆಗಿ ಕೆಲಸ ಮಾಡಿದವರು ಕುಮಾರಸ್ವಾಮಿ. ಅವರನ್ನು ಸುಸಂಸ್ಕೃತ ವ್ಯಕ್ತಿ ಎಂದು ಭಾವಿಸಿದ್ದೆ" ಎಂದರು.
"ಕೆಆರ್‌ಎಸ್ ಡ್ಯಾಮ್‌ಗೆ ಏನಾದರೂ ಹಾನಿಯಾಗಬಹುದು ಅನ್ನೋ ಆತಂಕದಲ್ಲಿ ಅವರು ಹೇಳಿರಬಹುದು. ಸುಮಲತಾ ಡ್ಯಾಂ ಸೋರಿಕೆ ತಡೆಯಲು ಅಲ್ಲಿ ಹೋಗಿ ಮಲಗಲಿ ಎಂದಿರುವುದನ್ನು ಯಾರು ಒಪ್ಪಲು ಸಾಧ್ಯವಿಲ್ಲ" ಎಂದು ತಿಳಿಸಿದರು.

"ಡ್ಯಾಂ ಸೋರಿಕೆಯಾಗುವುದನ್ನು ಪರಿಶೀಲಿಸಿ ಅಂತ ಕುಮಾರಸ್ವಾಮಿ ಹೇಳಬಹುದಾಗಿತ್ತು. ಆದರೆ ಹೀಗೆ ಮಾತನಾಡಿದ್ದು ತಪ್ಪು. ಕೆಆರ್‌ಎಸ್ ಡ್ಯಾಂ ಅನ್ನು ಯಾವುದೇ ಸರ್ಕಾರ ಕಟ್ಟಿಲ್ಲ. ಅದನ್ನು ಕಟ್ಟಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಹಣ ಇಲ್ಲದ ಸಮಯದಲ್ಲಿ ರಾಜರು ಅರಮನೆ ಬಂಗಾರ ವಜ್ರ ವೈಡೂರ್ಯ ಒತ್ತೆ ಇಟ್ಟಿ ಕಟ್ಟಿದ್ದಾರೆ. ಅದು ಮಂಡ್ಯ ಜನರ ಜೀವನಾಡಿ. ಹೀಗಾಗಿ ಅದು ಹಾಳಾಗುತ್ತೇನೋ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ. ಅದನ್ನು ಕಂಡು ಹಿಡಿದು ಸರಿ ಪಡಿಸುವಂತ ಕೆಲಸವನ್ನು ಮಾಡಬೇಕಿತ್ತು" ಎಂದು ಹೇಳಿದರು.
ಕುಮಾರಸ್ವಾಮಿ ಹೇಳಿಕೆ; ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ ಮಂಡ್ಯ ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಮಂಡ್ಯ ಜಿಲ್ಲೆಗೆ ಇಂಥಹ ಸಂಸದೆ ಹಿಂದೆಯೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಇವರೇ ಕೆಆರ್‌ಎಸ್ ರಕ್ಷಣೆ ಮಾಡುವ ರೀತಿ ಮಾತನಾಡುತ್ತಾರೆ" ಎಂದು ಹೇಳಿದ್ದರು.
"ಕೆಆರ್‌ಎಸ್ ನೀರು ಸೋರದಂತೆ ಅವರನ್ನು ಮಲಗಿಸಿಬಿಟ್ರೆ ಸರಿಯಾಗುತ್ತೆ. ಕೆಲಸ ಬಗ್ಗೆ ಮಾಹಿತಿ ಇಲ್ಲದೇ ಕಾಟಾಚಾರಕ್ಕೆ ಯಾರದೋ ಮೇಲೆ ವೈಯಕ್ತಿಕ ದ್ವೇಷಕ್ಕೆ ಹೀಗೆ ಮಾತನಾಡಬಾರದು. ಇದು ಬಹಳ ದಿನ ನಡೆಯುವುದಿಲ್ಲ. ಜನತೆ ಋಣ ತೀರಿಸುವ ಕೆಲಸ ಮಾಡಬೇಕು" ಎಂದು ಸಲಹೆ ಕೊಟ್ಟಿದ್ದರು.











Click it and Unblock the Notifications