ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದ ದಾವಣಗೆರೆ ಕಾಟನ್ ಮಿಲ್ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಇಂಟರೆಸ್ಟಿಂಗ್ ಮಾ
ದಾವಣಗೆರೆ, ಡಿಸೆಂಬರ್, 12: ದಾವಣಗೆರೆಯು ಮಧ್ಯಕರ್ನಾಟಕ ಹೆಬ್ಬಾಗಿಲು ಅಂತಲೇ ಹೆಸರುವಾಸಿಗಿದೆ. ರಾಜಕೀಯ ಪಕ್ಷಗಳಿಂದ ಹಿಡಿದು ಹಲವು ವಿಚಾರಗಳಿಗೆ ಅದೃಷ್ಟದ ನೆಲವೂ ಹೌದು. ಹಾಗಾಗಿ, ದಾವಣಗೆರೆಗೆ ಇತಿಹಾಸದಲ್ಲಿ ತನ್ನದೇ ಆದ ಗತವೈಭವ ಇತಿಹಾಸವಿದೆ. ಈಗಲೂ ದಾವಣಗೆರೆ ಎಂದರೆ ಎಷ್ಟೋ ಮಂದಿಗೆ ಪ್ರೀತಿ. ಆದ್ರೆ ಕರ್ನಾಟಕದ ಮ್ಯಾಂಚೆಸ್ಟರ್ ಆಗಿದ್ದ ದಾವಣಗೆರೆ ಹೆಸರಿಗಷ್ಟೇ ಉಳಿದಿದ್ದು ಇತಿಹಾಸ.
ಒಂದು ಕಾಲದಲ್ಲಿ ದಾವಣಗೆರೆ ಮ್ಯಾಂಚೆಸ್ಟರ್ ಅಂತಲೇ ಖ್ಯಾತಿ ಗಳಿಸಿತ್ತು. ಆದರೆ ಇತಿಹಾಸದ ಕಾಲಗರ್ಭದಲ್ಲಿ ಹಾಗೆಯೇ ಉಳಿದುಬಿಟ್ಟಿದೆ. ಬಟ್ಟೆಗೆ ರಾಷ್ಟ್ರ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ದಾವಣಗೆರೆಯ ಮ್ಯಾಂಚೆಸ್ಟರ್ ಎಂಬುದು ಈಗ ಹೆಸರಿಗಷ್ಟೇ ಉಳಿದುಕೊಡಿದೆ.

ಯೋಜನೆ ಹಾಕಿದ್ದು ಯಾರು?
ಶ್ರೀ ರಾಜನಹಳ್ಳಿ ಹನುಮಂತಪ್ಪನವರು ಹತ್ತಿ ಗಿರಣಿಯ ಯೋಜನೆ ಮೊದಲು ಶುರು ಮಾಡಿದವರು. ಅದೂ 1933ರಲ್ಲಿ. ಮಿಲ್ ಸ್ಥಾಪನೆಯಾಗಿದ್ದು 1936ಕ್ಕೆ. ಈ ಮಿಲ್‌ನಲ್ಲಿ ನೂಲು ಮತ್ತು ಹತ್ತಿ ಬಟ್ಟೆ, ರೆಯಾನ್ ಶಿಲ್ಕು ತಯಾರು ಆಗುತಿತ್ತು. ಈ ಮಿಲ್‌ನಲ್ಲಿ ತಯಾರಾದ ನೂಲು, ಬಟ್ಟೆ ತನ್ನ ಗುಣಮಟ್ಟದಿಂದ ದಾವಣಗೆರೆಯಿಂದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿತ್ತು. ಮಾತ್ರವಲ್ಲ, ಡಿಸಿಎಂ ಎಂದು ಗುರುತಿಸಲ್ಪಟ್ಟಿತು. ಇಂದಿಗೂ ಡಿಸಿಎಂ ಟೌನ್‌ಶಿಪ್ ಅಂತಾನೇ ಕರೆಯಲಾಗುತ್ತಿದೆ.
ಆಗಿನ ಕಾಲದಲ್ಲಿ ದಾವಣಗೆರೆಯು ಕೈಗಾರಿಕೋದ್ಯಮದಲ್ಲಿ ಕೇಂದ್ರ ಬಿಂದುವಾಗಿ ಗಮನ ಸೆಳೆದಿತ್ತು. ದಾವಣಗೆರೆ ಲಾಂಗ್ ಕ್ಲಾತ್ ಬಟ್ಟೆ ಎಂದರೆ ಎಲ್ಲೆಡೆ ಜನಪ್ರಿಯವಾಯಿತು. ಸಗಟು ವ್ಯಾಪಾರದೊಂದಿಗೆ ಚಿಲ್ಲರೆ ಮಾರಾಟಕ್ಕಾಗಿ ಶೋ ರೂಂ ಅನ್ನೂ ಸಹ ಪ್ರಾರಂಭ ಮಾಡಲಾಗಿತ್ತು.
ಆಧುನಿಕ ಯಂತ್ರೋಪಕರಣಗಳಿಂದ ಕೂಡಿದ್ದು, ಮಿಲ್ಲಿನ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಕಾರ್ಮಿಕರಿಗಾಗಿ, ಮಿಲ್ಲಿನ ಮಾಲೀಕ ವರ್ಗ, ವಸತಿ ಸೌಲಭ್ಯ, ಕಾರ್ಮಿಕ ಮಕ್ಕಳಿಗಾಗಿ ಶಿಕ್ಷಣ, ಆಸ್ಪತ್ರೆ, ವಾಚಾನಾಲಯ, ಸಾರಿಗೆ, ಸಾಂಸ್ಕೃತಿಕ ಸೇರಿದಂತೆ ಇತರೆ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ರೂಪಿಸಲಾಗಿತ್ತು. ಅಷ್ಟರ ಮಟ್ಟಿಗೆ ಕಾಟನ್ ಮಿಲ್ ಉದ್ಯಮ ಬೆಳೆದಿತ್ತು.
ಮಿಲ್‌ನ ಆವರಣದಲ್ಲಿ ಈ ಮಿಲ್‌ನ ಸಂಸ್ಥಾಪಕ, ಕನಸುಗಾರ ಮಹಾಚೇತನ ಸ್ವರೂಪಿಯಾಗಿದ್ದ ಶ್ರೀ ರಾಜನಹಳ್ಳಿ ಹನುಮಂತಪ್ಪನವರ ಅಮೃತಶಿಲಾ ಪ್ರತಿಮೆಯನ್ನು ಅಳವಡಿಸಲಾಗಿತ್ತು. ಕಾಲಗರ್ಭದಲ್ಲಿ ದಾವಣಗೆರೆ ಕಾಟನ್ ಮಿಲ್‌ನ ಸಮಗ್ರ ಚೇತನವೂ ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿ ಅಂತಿಮ ಅವಸಾನದತ್ತ ಸಾಗಿದಾಗ ಶ್ರೀ ಮೊರಾರ್ಜಿ ದೇಸಾಯಿ ಆಡಳಿತ ವರ್ಗವು ಮಿಲ್ ಖರೀದಿ ಮಾಡಿತು.
ಆದರೂ ಕಾಟನ್ ಮಿಲ್ ಉಳಿಯಲಿಲ್ಲ. ಕೊನೆಗೂ ತನ್ನ ಸತತ ಸಾಧನೆಯಿಂದ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ದಾವಣಗೆರೆಗೆ ತಂದಿದ್ದ ಹೆಸರನ್ನು ಬರೀ ನೆನಪಾಗಿ ಉಳಿಸಿ, ಶಾಶ್ವತವಾಗಿ ಮುಚ್ಚಿತು. ಕಾಟನ್ ಮಿಲ್ ಬಂದ್ ಆಗಿದ್ದು, ದಾವಣಗೆರೆ ಕೈಗಾರಿಕೆಗೆ ಮತ್ತು ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದ್ದಂತೂ ಹೌದು.
ದಾವಣಗೆರೆ ಕಾಟನ್ ಮಿಲ್ ಬಹಳಷ್ಟು ಮಂದಿಗೆ ಉದ್ಯೋಗ ಕೊಟ್ಟಿತ್ತು. ಆಗಿನ ಕಾಲದಲ್ಲಿ ಬರೋಬ್ಬರಿ 8 ರಿಂದ 10 ಸಾವಿರ ಮಂದಿಗೆ ಉದ್ಯೋಗ ನೀಡಿತ್ತು. ಆಡಳಿತಕ್ಕೆ ಬಂದ ಸರ್ಕಾರಗಳು ಹಾಗೂ ಮಿಲ್‌ಗಳ ಮಾಲೀಕರ ನಡುವಿನ ಸಂಘರ್ಷದಿಂದ ಮಿಲ್‌ಗಳು ಮುಚ್ಚುತ್ತಾ ಬಂದವು. ಆಧುನಿಕತೆಗೆ ತಕ್ಕಂತೆ ಯಂತ್ರೋಪಕರಣ ಬಳಕೆ ಆಗಲಿಲ್ಲ. ಸರ್ಕಾರಗಳಿಂದ ಸೂಕ್ತ ಪ್ರೋತ್ಸಾಹ ದೊರಕಲಿಲ್ಲ. ಕಾರ್ಮಿಕ ಮುಖಂಡರ ಹೋರಾಟ ಹಾಗೂ ಕಾಟನ್ ಮಿಲ್‌ಗಳ ಮಾಲೀಕರ ನಡುವಿನ ಹಣಾಹಣಿ ಜೋರಾಗಿತ್ತು.
ಬರಬರುತ್ತಾ ನಷ್ಟ ಅನುಭವಿಸಲು ಶುರು ಮಾಡಿದ ಮಾಲೀಕರು ಮಿಲ್‌ಗಳನ್ನು ಬಂದ್ ಮಾಡಲು ನಿರ್ಧರಿಸಿದರು. ಸರ್ಕಾರಗಳು ಸೂಕ್ತ ಪ್ರೋತ್ಸಾಹ ನೀಡಲಿಲ್ಲ. ಸಬ್ಸಿಡಿ ಕೊಡಲಿಲ್ಲ. ತಯಾರು ಮಾಡುವುದಕ್ಕೆ ಹೆಚ್ಚು ಖರ್ಚು ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಆಗುತ್ತಿದ್ದ ಬಟ್ಟೆಗಳು ಮಾಲೀಕರಿಗೆ ತುಂಬಾನೇ ಸಮಸ್ಯೆ ತಂದೊಡ್ಡಿತ್ತು. ಕಾರ್ಮಿಕರಿಗೆ ಪಿಎಫ್, ವೇತನ ಸೇರಿದಂತೆ ಇನ್ನಿತರೆ ಸೌಲಭ್ಯ ನೀಡುವಲ್ಲಿ ಮಾಲೀಕ ವರ್ಗವು ಸೂಕ್ತ ಸ್ಪಂದನೆ ತೋರಲಿಲ್ಲ. ಇದು ನಷ್ಟಕ್ಕೂ ಕಾರಣವಾಯಿತು.
ಸುಮಾರು 65 ವರ್ಷಗಳ ಕಾಲ ಮಿಲ್ ಉದ್ಯಮ ಉತ್ತುಂಗಕ್ಕೆ ಏರಿತ್ತು. ಆದರೆ 2000ನೇ ಇಸವಿಯ ಹೊತ್ತಿಗೆ ಸಂಪೂರ್ಣ ಮುಚ್ಚುವ ಹಂತಕ್ಕೆ ಬಂತು. 2001ರ ಜನವರಿ 26ಕ್ಕೆ ಶಾಶ್ವತವಾಗಿ ಮುಚ್ಚಿತು. ಎಷ್ಟರ ಮಟ್ಟಿಗೆ ಎಂದರೆ ಭೂಕಂಪಕ್ಕೆ ತುತ್ತಾಗಿ ಭುಜ್‌ನಂತೆ ನೆಲಸಮವಾಗಿದೆ. ತನ್ನ ಬೃಹತ್ ಕಟ್ಟಡದ ಅವಶೇಷವೂ ಇಲ್ಲದಂತೆ ಈಗ ಡಿಸಿಎಂ ಟೌನ್‌ಶಿಪ್ ಆಗಿ ಪರಿವರ್ತನೆಗೊಂಡಿದೆ.
ದಾವಣಗೆರೆ ವಾಣಿಜ್ಯ ಕೇಂದ್ರ ಆದಂತೆ ಕೈಗಾರಿಕಾ ಕೇಂದ್ರವೂ ಆಗಿತ್ತು. ಇಲ್ಲಿ 1974-75ರ ವೇಳೆಗೆ ಕರ್ನಾಟಕದ ಕೈಗಾರಿಕಾ ಕೇಂದ್ರಗಳಲ್ಲಿ ದಾವಣಗೆರೆ 11ನೇಯ ಸ್ಥಾನವನ್ನೂ ಪಡೆದಿತ್ತು. ಈ ವೇಳೆಗೆ ನಗರದಲ್ಲಿ 8 ಬಟ್ಟೆ ಗಿರಣಿಗಳಿದ್ದವು. 13 ಹತ್ತಿ ಗಿರಣಿಗಳಿದ್ದವು. 19 ಅಕ್ಕಿ ಗಿರಣಿಗಳಿದ್ದವು. 8 ಎಣ್ಣೆ ಗಿರಣಿಗಳಿದ್ದವು. 112 ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕಾ ಕೇಂದ್ರಗಳಿದ್ದವು.
ಕೇವಲ ಬಟ್ಟೆ ಗಿರಣಿಯಿಂದಲೇ 1974-75ರ ಸುಮಾರಿಗೆ 10,000 ಜನರಿಗೆ ಜೀವನ ನೀಡಿತ್ತು. ಒಟ್ಟು ಇತರೆ ಎಲ್ಲಾ ಕೈಗಾರಿಕೆಗಳಿಂದಲೇ 15 ರಿಂದ 20 ಸಾವಿರ ಕಾರ್ಮಿಕರಿದ್ದರು. ಆದರೆ ಇಂದು ದಾವಣಗೆರೆಯ ಎಲ್ಲಾ ಮಿಲ್‌ಗಳು ಮುಚ್ಚುತ್ತಾ ಕೈಗಾರಿಕಾ ಕೇಂದ್ರ ಎನ್ನುವ ಹೆಗ್ಗಳಿಕೆಯನ್ನೂ ಕಳೆದುಕೊಡಿದೆ. ಆದರೂ ಇತರೆ ಕೈಗಾರಿಕೆಗಳು ನಡೆಯುತ್ತಿವೆ. ಕೈಗಾರಿಕೆಗಳಿಂದಾಗಿಯೇ ನಿರ್ದಿಷ್ಟ ಪ್ರದೇಶ ಇಂಡಸ್ಟ್ರಿಯಲ್ ಏರಿಯಾ ಇದೆ.
ಮೈಸೂರಿನ ಮ್ಯಾಂಚೆಸ್ಟರ್ ಅಂತಾ ಹೊಗಳಿದ್ದು ಯಾರು?
ಒಂದು ಕಾಲದಲ್ಲಿ ಮೈಸೂರು ಸಂಸ್ಥಾನದ ಮಾಜಿ ದಿವಾನರಾಗಿದ್ದ ಶ್ರೀ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರು ದಾವಣಗೆರೆ ಮೈಸೂರಿನ ಮ್ಯಾಂಚೆಸ್ಟರ್ ಎಂದು ಹಾಡಿಹೊಗಳಿದ್ದರು. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ನಗರ ಹತ್ತಿ ನೂಲಿನ ಬಟ್ಟೆಗೆ ಜಗತ್ತಿನಲ್ಲಿ ಪ್ರಸಿದ್ಧಿಯಾಗಿತ್ತು. ಹಾಗೆಯೇ ದಾವಣಗೆರೆ ಸಹ ಹತ್ತಿ, ನೂಲು, ಬಟ್ಟೆ ತಯಾರಿಕೆಯಿಂದ ಭಾರತದಾದ್ಯಂತ ಪ್ರಸಿದ್ಧಿಯಾಗಿ ಕೈಗಾರಿಕಾ ಕೇಂದ್ರ ಎನಿಸಿತ್ತು. ಆದರೆ ಈಗ ಕೇವಲ ಹೆಸರು ಮಾತ್ರ ಉಳಿದಿದೆ.
ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಟನ್ ಮಿಲ್‌ಗಳಿಗೆ ಸೂಕ್ತ ಪ್ರೋತ್ಸಾಹ ಸಿಗಲಿಲ್ಲ. ಅನುದಾನವನ್ನೂ ನೀಡಲಿಲ್ಲ. ಮಾಲೀಕರು ಹಾಗೂ ಸರ್ಕಾರಗಳ ನಡುವಿನ ಸಂಘರ್ಷದಿಂದಾಗಿ ಮಿಲ್‌ಗಳು ಮುಚ್ಚಿದವು. ಕಾರ್ಮಿಕ ಮುಖಂಡರು ನ್ಯಾಯಯುತ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಮಾಡಿದ್ದರು. ಆದರೆ ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾರಣ ಮ್ಯಾಂಚೆಸ್ಟರ್ ಎಂಬ ಹೆಸರು ಹಾಗೆ ಉಳಿಯಿತು ಬಿಟ್ಟರೆ ಮತ್ತೆ ಅಭಿವೃದ್ಧಿ ಆಗಲಿಲ್ಲ.
ಒಂದು ಟನ್ ಹತ್ತಿ 80,000 ರೂಪಾಯಿ ಇದ್ದರೆ, ನೂಲು ಕೇವಲ 60,000 ರೂಪಾಯಿಗೆ ಮಾರಾಟ ಆಗುತಿತ್ತು. ಇದರಿಂದಾಗಿ ನಷ್ಟ ಆಯಿತು. ಕಾರ್ಮಿಕ ಮುಖಂಡರು ಕಾರ್ಮಿಕರ ಪರ ಇದ್ದರೂ ವಿನಾಃ ಆಡಳಿತ ವರ್ಗದ ವಿರುದ್ಧ ಅಲ್ಲ. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ಕಾಟನ್ ಮಿಲ್‌ಗಳ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದ ದಾವಣಗೆರೆ ಹೆಸರು ಇತಿಹಾಸ ಪುಟಗಳಲ್ಲಿ ಉಳಿಯುವಂತಾಯಿತು ಎಂದು ಕಾರ್ಮಿಕ ಮುಖಂಡ ಆವರಗೆರೆ ಉಮೇಶ್ ಹೇಳುತ್ತಾರೆ.












Click it and Unblock the Notifications